ಬೆಂಗಳೂರು.ಜ,8: ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Lok Sabha Elections) ಕರ್ನಾಟಕದಿಂದ ಕನಿಷ್ಠ 20 ಸಂಸದರನ್ನು ಆಯ್ಕೆ ಮಾಡಿ ಕಳುಹಿಸಬೇಕೆಂದು ರಾಜ್ಯ ಕಾಂಗ್ರೆಸ್ ನಾಯಕರಿಗೆ ಸೂಚಿಸಿರುವ ಹೈಕಮಾಂಡ್ ಅಗತ್ಯ ಬಿದ್ದರೆ ಕೆಲವು ಕ್ಷೇತ್ರಗಳಲ್ಲಿ ಮಂತ್ರಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ.
ಚುನಾವಣೆಯ ಕಾರ್ಯತಂತ್ರದ ಕುರಿತು ಚರ್ಚೆ ನಡೆಸಲು ಬೆಂಗಳೂರಿಗೆ ಆಗಮಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಪಕ್ಷದ ಎಲ್ಲಾ ನಾಯಕರೊಂದಿಗೆ ಅನೌಪಚಾರಿಕವಾಗಿ ಮಾತುಕತೆ ನಡೆಸಿದ್ದು ಹೈಕಮಾಂಡ್ ನ ಸಂದೇಶವನ್ನು ರವಾನಿಸಿದ್ದಾರೆ.
ಚುನಾವಣೆಯ (Lok Sabha Elections) ಕಾರ್ಯತಂತ್ರದ ಕುರಿತು ನಾಳೆ ರಾಜ್ಯದ ಎಲ್ಲಾ ಮಂತ್ರಿಗಳು ಮತ್ತು ಹಿರಿಯ ನಾಯಕರೊಂದಿಗೆ ಬೆಂಗಳೂರಿನಲ್ಲಿ ಸಭೆ ಆಯೋಜಿಸಲಾಗಿದೆ.
ಈ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ,ಪ್ರಚಾರ ತಂತ್ರ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.ಇದಾದ ನಂತರ ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಿಗೆ ಉಸ್ತುವಾರಿಯಾಗಿ ನೇಮಿಸಿರುವ ಮಂತ್ರಿಗಳು ದೆಹಲಿಗೆ ತೆರಳಲಿದ್ದಾರೆ.
ಈ ಹಿನ್ನೆಲೆಯಲ್ಲಿ ಗುರುವಾರ ನಿಗದಿಯಾಗಿದ್ದ ರಾಜ್ಯ ಸಚಿವ ಸಂಪುಟ ಸಭೆಯನ್ನು ಮುಂದೂಡಲಾಗಿದೆ.
ಗುರುವಾರ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ನೇತ್ರತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದೆ.
ಈ ಸಭೆಯಲ್ಲಿ ರಾಜ್ಯದ ಚುನಾವಣೆಯ (Lok Sabha Elections) ಕಾರ್ಯತಂತ್ರ ,ಪ್ರಚಾರದ ಪ್ರಮುಖ ವಿಷಯ ಹಾಗೂ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಚರ್ಚೆ ನಡೆಯಲಿದ್ದು ಕೆಲವು ಕ್ಷೇತ್ರಗಳಿಗೆ ಮಂತ್ರಿಗಳನ್ನು ಕಣಕ್ಕಿಳಿಸುವ ಕುರಿತಂತೆ ನಿರ್ಧಾರ ಪ್ರಕಟವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಪ್ರಮುಖವಾಗಿ ಸಚಿವರಾದ ಸತೀಶ್ ಜಾರಕಿಹೊಳಿ, ಆರ್ ವಿ ದೇಶಪಾಂಡೆ ,ಕೆ.ಎಚ್. ಮುನಿಯಪ್ಪ ಕೆ. ಎನ್. ರಾಜಣ್ಣ, ಶರಣ ಪ್ರಕಾಶ್ ಪಾಟೀಲ್, ಎಂ. ಬಿ. ಪಾಟೀಲ್ ಮತ್ತು ಡಾ. ಎಚ್ ಸಿ ಮಹಾದೇವಪ್ಪ ಅವರನ್ನು ಚುನಾವಣೆಯ ಕಣಕ್ಕಿಳಿಸುವ ಕುರಿತಂತೆ ಚರ್ಚೆಗಳು ನಡೆದಿದೆ ಎಂದು ಹೇಳಲಾಗಿದೆ.
ಇನ್ನೂ ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಕಳೆದ 15 ವರ್ಷಗಳಿಂದ ಆಯ್ಕೆಯಾಗಿಲ್ಲ ಬಿಜೆಪಿ ಸತತವಾಗಿ ಆಯ್ಕೆಯಾಗುವ ಮೂಲಕ ದಾಖಲೆ ನಿರ್ಮಿಸಿದ್ದು ಇದಕ್ಕೆ ಇತಿಶ್ರೀ ಹಾಡುವ ದೃಷ್ಟಿಯಿಂದ ಮಂತ್ರಿಗಳಾದ ಕೃಷ್ಣಭೈರೇಗೌಡ ಮತ್ತು ದಿನೇಶ್ ಗುಂಡೂರಾವ್ ಅವರನ್ನು ಬೆಂಗಳೂರಿನ ದಕ್ಷಿಣ ಮತ್ತು ಕೇಂದ್ರ ಲೋಕಸಭಾ ಕ್ಷೇತ್ರಗಳಿಂದ ಕಣಕ್ಕಿಳಿಸಲು ಆಸಕ್ತಿ ಹೊಂದಿದೆ ಎಂದು ಗೊತ್ತಾಗಿದೆ.
ಈ ನಡುವೆ ಸುರ್ಜೇವಾಲಾ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ. ಪರಮೇಶ್ವರ್ ಲೋಕಸಭಾ ಚುನಾವಣೆ ತಯಾರಿ ಕುರಿತಂತೆ ಮಾತುಕತೆ ನಡೆಯಿತು ಈ ವೇಳೆ ಕೆಲವು ಮಂತ್ರಿಗಳು ಚುನಾವಣೆಗೆ ಸ್ಪರ್ಧಿಸಲು ಹೈಕಮಾಂಡ್ ಆಸಕ್ತಿ ಹೊಂದಿದೆ ಎಂಬ ಅಂಶವನ್ನು ತಿಳಿಸಿದರು
ಕಳೆದ ಬಾರಿ ಕೃಷ್ಣಭೈರೇಗೌಡ ಅವರನ್ನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲಾಗಿತ್ತು. ಅದನ್ನು ಉದಾಹರಣೆಯಾಗಿ ಚರ್ಚಿಸಲಾಗಿದ್ದು, ಸಂದರ್ಭ ಬಂದರೆ ಸಚಿವರು ಸ್ರ್ಪಧಿಗಳಾಗಲು ಸಿದ್ಧವಾಗಿರಬೇಕಾಗುತ್ತದೆ ಎಂದು ಹೈಕಮಾಂಡ್ ತಿಳಿಸಿದೆ ಎಂದರು.
ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಪಟ್ಟಂತೆ ಈಗಾಗಲೇ ಚರ್ಚೆಗಳಾಗಿವೆ. ಯಾರೆಲ್ಲಾ ಆಕಾಂಕ್ಷಿಗಳಿದ್ದಾರೆ, ಸಮರ್ಥರು ಯಾರು, ಜಾತಿವಾರು ಲೆಕ್ಕಾಚಾರವೇನು, ಯಾರನ್ನು ಕಣಕ್ಕಿಳಿಸಬೇಕು ಎಂಬ ಮಾಹಿತಿಗಳು ಈಗಾಗಲೇ ಲಭ್ಯವಿದೆ. ಅದರ ಆಧಾರದ ಮೇಲೆ ಮುಂದಿನ ಚರ್ಚೆಗಳು ನಡೆಯಲಿವೆ. ಎರಡು ದಿನ ಬಿಟ್ಟು ಎಲ್ಲಾ ಸಚಿವರೂ ದೆಹಲಿಗೆ ಭೇಟಿ ನೀಡಿ ಹೈಕಮಾಂಡ್ ನಾಯಕರ ಜೊತೆ ಚರ್ಚೆ ನಡೆಸಲಿದ್ದೇವೆ ಎಂದು ವಿವರಿಸಿದರು.