ಬೆಂಗಳೂರು, ಮೇ.12-ಇಬ್ಬರು ಕುಖ್ಯಾತ ಅಂತರರಾಷ್ಟ್ರೀಯ ಕಳ್ಳರನ್ನು ಕೆಂಪೇಗೌಡ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಂಗ್ಲಾದೇಶ ಮೂಲದ ಒಬಿಮುಲ್ಲಾ ಅಲಿಯಾಸ್ ಬಪ್ಪಿ(32)ಹಾಗೂ ಮಹಮ್ಮದ್ ನಾಸೀರ್ ಶೇಖ್ ಅಲಿಯಾಸ್ ಗುಪ್ರಾನ್(35)ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತ ಆರೋಪಿಗಳು ಬಾಂಗ್ಲಾದೇಶದಲ್ಲಿ ಕೊಲೆ, ಸುಲಿಗೆ, ಹಾಗು ದರೋಡೆ ಪ್ರಕರಣಗಳಲ್ಲಿ ಬಾಗಿಯಾಗಿದ್ದು ಅಲ್ಲಿ ಇವರಿಬ್ಬರಿಗೆ ನ್ಯಾಯಾಲಯವು ಕೊಲೆಗೆ ಯತ್ನದ ಪ್ರಕರಣದಲ್ಲಿ 5 ವರ್ಷ ಸಜೆ ವಿಧಿಸಿದ್ದು, ಸಜೆ ಆದ ನಂತರ ಆರೋಪಿಗಳು ತಲೆ ಮರೆಸಿಕೊಂಡು ಭಾರತಕ್ಕೆ ಅಕ್ರಮವಾಗಿ ನುಸುಳಿ ಬಂದಿದ್ದರು.
ಬರಗರನಹಳ್ಳಿ ಮುಖ್ಯ ರಸ್ತೆಯ ಮನೆಯೊಂದನ್ನು ಅರೋಪಿಗಳಾದ ಮಹಮ್ಮದ್ ನಾಸೀರ್ ಹಾಗೂ ಒಬಿಮುಲ್ಲಾ ಶೇಖ್ ಬಾಡಿಗೆಗೆ ಪಡೆದು ವಾಸವಿದ್ದರು. ಅಲ್ಲಿಂದ ನಗರದ ವಿವಿಧ ಕಡೆಗಳಲ್ಲಿ ಸುತ್ತಾಡುತ್ತಾ ದ್ವಿ ಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದರು.
ಖಚಿತವಾದ ಮಾಹಿತಿಯನ್ನು ಆಧರಿಸಿ ಕೆಂಪೇಗೌಡ ನಗರ ಪೊಲೀಸರು ಇಬ್ಬರನ್ನು ಬಂಧಿಸಿ ಎಂಟು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಬಾಂಗ್ಲಾದೇಶಕ್ಕೆ ಗಡಿ ಪಾರು ಮಾಡಲು ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.