ಕಲಬುರಗಿ, ಜ.25: ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಜಾರಿಗೆ ಬರುತ್ತಿದ್ದಂತೆ ಜಾರಿಗೊಳಿಸ
ಶಕ್ತಿ ಯೋಜನೆ ಪರಿಣಾಮ ರಾಜ್ಯದಲ್ಲಿ ಬಸ್ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಳಗೊಂಡಿದೆ.
ಶಕ್ತಿ ಯೋಜನೆ ಜಾರಿ ಮುನ್ನ ರಾಜ್ಯದಲ್ಲಿ ಪ್ರತಿ ದಿನ 84 ಲಕ್ಷ ಜನ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ಯೋಜನೆ ಜಾರಿ ನಂತರ 1.10 ಕೋಟಿ ಜನ ಪ್ರಯಾಣಿಸುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಲಬುರಗಿ ಸೂಪರ್ ಮಾರ್ಕೆಟ್ ಪ್ರದೇಶದಲ್ಲಿ ನಿರ್ಮಿಸಿರುವ ಮಾದರಿ ನಗರ ಸಾರಿಗೆ ಬಸ್ ನಿಲ್ದಾಣ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಶಕ್ತಿ ಯೋಜನೆ ಕುರಿತು ಪ್ರತಿಪಕ್ಷದವರು ಇಲ್ಲಸಲ್ಲದ ಟೀಕೆ ಮಾಡುತ್ತಿದ್ದರು. ಯೋಜನೆ ಜಾರಿಯಾದ 8 ತಿಂಗಳ ಅವಧಿಯಲ್ಲಿ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಒಟ್ಟು 139 ಕೋಟಿ ಜನ ಸಂಚಾರ ಮಾಡಿದ್ದಾರೆ. ಇದು ಮಹಿಳಾ ಸಬಲೀಕರಣಕ್ಕೆ ದಿಟ್ಟ ಹೆಜ್ಜೆ ಎಂದು ಬಣ್ಣಿಸಿದರು.
ಪ್ರಯಾಣಿಕರ ಸಂಖ್ಯೆ ಹೆಚ್ಚಿದಂತೆ ಬಸ್ಸುಗಳಿಗೆ ಬೇಡಿಕೆ ಕೂಡ ಹೆಚ್ಚಿದೆ.ಇದನ್ನು ಪೂರೈಸಲು ಹೊಸ ಬಸ್ಸುಗಳನ್ನು ಖರೀದಿ ಮಾಡಲಾಗುತ್ತಿದೆ.ಈಗಾಗಲೇ ಕೆ.ಕೆ.ಆರ್.ಟಿ.ಸಿ. ಗೆ 630 ಬಸ್ ನೀಡಲಾಗಿದೆ. ಮುಂದಿನ ದಿನದಲ್ಲಿ ಮತ್ತೆ 485 ಬಸ್ ನೀಡಲಾಗುವುದು.ಒಟ್ಟಾರೆ ಮಾರ್ಚ್ ಅಂತ್ಯಕ್ಕೆ ರಾಜ್ಯದ ನಾಲ್ಕು ನಿಗಮಗಳಿಗೆ 5,800 ಬಸ್ ಖರೀದಿಸಲಾಗುತ್ತಿದೆ ಎಂದು ತಿಳಿಸಿದರು.
ಜೊತೆಗೆ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೂ ಕ್ರಮ ಕೈಗೊಳ್ಳಲಾಗುತ್ತದೆ 2016ರ ನಂತರ ನಿಗಮಗಳಲ್ಲಿ ಕೆಲಸ ಮಾಡುತ್ತಿದ್ದ 13,888 ಜನ ನಿವೃತ್ತಿಯಾಗಿದ್ದಾರೆ.ಆದರೆ,ಹಿಂದಿನ ಸರ್ಕಾರದಲ್ಲಿ ನೇಮಕಾತಿ ನಡೆದಿರಲಿಲ್ಲ. ನಮ್ಮ ಸರ್ಕಾರ ಬಂದ ಕೂಡಲೆ ನೇಮಕಾತಿಗೆ ಚಾಲನೆ ನೀಡಿದ್ದೇವೆ.ಸದ್ಯ 9 ಸಾವಿರ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಕೆ.ಎಸ್.ಆರ್.ಟಿ.ಸಿ (KSRTC) ಮತ್ತು ಕೆ.ಕೆ.ಆರ್.ಟಿ.ಸಿ. ಸಂಸ್ಥೆಯಲ್ಲಿನ ಸಾರಿಗೆ ನೌಕರರು ಅಪಘಾತದಲ್ಲಿ ಮರಣ ಹೊಂದಿದಲ್ಲಿ 1 ಕೋಟಿ ರೂ. ಜೀವ ವಿಮೆ ಒದಗಿಸುವ ಯೋಜನೆ ಜಾರಿಗೊಳಿಸಿದ್ದು, ಇದು ದೇಶದಲ್ಲಿಯೆ ಮಾದರಿಯಾಗಿದೆ. ಒಂದೆಡೆ ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಒದಗಿಸಬೇಕು. ಇನ್ನೊಂದೆಡೆ ಕಾರ್ಮಿಕರ ಹಿತವು ಕಾಯಬೇಕಾಗಿದ್ದು ನಮ್ಮ ಕರ್ತವ್ಯವಾಗಿದೆ ಎಂದರು.