ಬೆಂಗಳೂರು, ಜ.19- ಬುಡಬುಡಿಕೆ ವೇಷಧಾರಿಯಾಗಿ ಬಂದು ಕುಟುಂಬವೊಂದಕ್ಕೆ ಸಾವಿನ ಭಯ ಹುಟ್ಟಿಸಿ
ವಂಚಿಸಿ ಪರಾರಿಯಾಗಿರುವ ದುರ್ಘಟನೆ ಕೊತ್ತನೂರಿನ ದೊಡ್ಡ ಗುಬ್ಬಿಯ ಜನತಾ ಕಾಲೋನಿಯಲ್ಲಿ ನಡೆದಿದೆ.
ಬುಡಬುಡಿಕೆ ವೇಷಧಾರಿಯಾಗಿ ಭವಿಷ್ಯ ಹೇಳುವ ನೆಪದಲ್ಲಿ ಬಂದ ಕಳ್ಳನೊಬ್ಬ ನಿಮ್ಮ ಪತಿಗೆ ಗಂಡಾಂತರ ಇದೆ. ಇನ್ನು 9 ದಿನದಲ್ಲಿ ನಿನ್ನ ಮನೆಯಲ್ಲಿ ಸಾವಾಗುತ್ತೆ ಎಂದು ಜನತಾ ಕಾಲೋನಿಯ ಶಕುಂತಲಾ ಅವರಿಗೆ ಹೆದರಿಸಿದ್ದಾನೆ.
ಗಂಡಾಂತರ ತಪ್ಪಿಸಲು ಮನೆಯಲ್ಲಿ ಪೂಜೆ ಮಾಡಬೇಕು ಎಂದು ನಂಬಿಸಿದ್ದು ಅದನ್ನು ಒಪ್ಪಿದ ಶಕುಂತಲಾ ಅವರ ಮೈ ಮೇಲಿರುವ ಚಿನ್ನವನ್ನು ಮಡಿಕೆಯಲ್ಲಿ ಹಾಕುವಂತೆ ಹೇಳಿದ್ದ. ಮಡಿಕೆಯಲ್ಲಿ ಚಿನ್ನ ಹಾಕಿದ ಬಳಿಕ ಕಣ್ಮುಚ್ಚಿ ಕುಳಿತುಕೊಳ್ಳುವಂತೆ ಸೂಚಿಸಿದ್ದ. ಬಳಿಕ ಮಡಿಕೆ ಸುತ್ತಲೂ ದಾರವೊಂದನ್ನು ಕಟ್ಟಿ, ನಿನ್ನ ಪತಿ ಮನೆಗೆ ಬಂದಾಗ ಪೂಜೆ ಮಾಡಿ ದಾರ ತೆಗೆಯುವಂತೆ ಸೂಚಿಸಿ, ಅಲ್ಲಿಂದ ಕಾಲ್ಕಿತ್ತಿದ್ದ.
ಆತನನ್ನು ಸಂಪೂರ್ಣವಾಗಿ ನಂಬಿ ಮೌಢ್ಯಕ್ಕೆ ಸಿಲುಕಿದ ಶಕುಂತಲಾ, ಮನೆಗೆ ಪತಿ ಬಂದಾಗ ದಾರ ಕಟ್ಟಿದ ಮಡಿಕೆಯನ್ನು ತೆರೆದು ನೋಡಿದ್ದಾರೆ. ಆದರೆ ಮಡಿಕೆಯೊಳಗೆ ಹಾಕಿದ್ದ ಚಿನ್ನಾಭರಣಗಳು ನಾಪತ್ತೆಯಾಗಿದ್ದವು.
ಕೂಡಲೇ ದಂಪತಿ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು,ಪ್ರಕರಣ ದಾಖಲಿಸಿರುವ ಪೊಲೀಸರು ನಕಲಿ ಬುಡಬುಡಿಕೆಗೆ ಹುಡುಕಾಟವನ್ನು ಮುಂದುವರಿಸಿದ್ದಾರೆ.
ಬುಡಬುಡಿಕೆ ಭವಿಷ್ಯ ಹೇಳುವ ನೆಪದಲ್ಲಿ ಈ ಹಿಂದೆಯೂ ಹಲವರಿಗೆ ವಂಚನೆ ಮಾಡಿರುವ ಘಟನೆಗಳು ನಗರದಲ್ಲಿ ನಡೆದಿವೆ, ಹಿಂದೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಮಾವಾಸ್ಯೆ ಬಳಿಕ ನಿನ್ನ ಗಂಡ ಹಾಗೂ ಮಗನಿಗೆ ಗಂಡಾಂತರ ಇದೆ. ಮನೆಯಲ್ಲಿ ಸಾವಾಗುತ್ತೆ ಎಂದು ಹೆದರಿಸಿ ಕಾಂತ ಎಂಬಾಕೆಗೆ ನಿಂಬೆಹಣ್ಣು ನೀಡಿ ಪ್ರಜ್ಞೆ ತಪ್ಪಿಸಿದ್ದ. ಬಳಿಕ ಮೈ ಮೇಲಿದ್ದ ಒಡವೆಗಳನ್ನು ದೋಚಿ ಪರಾರಿಯಾಗಿದ್ದ.
ಗಂಡಾಂತರ ಪರಿಹಾರಕ್ಕೆ 1,500 ಹಣವನ್ನು ಕೇಳಿದ್ದ. ನಂತರ ನಿಂಬೆ ಹಣ್ಣು ತರಲು ಹೇಳಿ ಮಂತ್ರಿಸಿ ಕಾಂತಾಗೆ ನೀಡಿದ್ದ. ಮೂರು ಸುತ್ತುವಂತೆ ಹೇಳಿದ್ದ. ಸುತ್ತಿದ್ದಂತೆ ಕಾಂತ ಮೂರ್ಛೆ ತಪ್ಪಿ ಕೆಳಗೆ ಬಿದ್ದಿದ್ದರು. ನಂತರ ಮನೆಯಲ್ಲಿದ್ದ ಒಡವೆ ಹಾಗೂ ಕುತ್ತಿಗೆಯಲ್ಲಿದ್ದ ಚಿನ್ನದ ಒಡವೆ ದೋಚಿ ಪರಾರಿಯಾಗಿದ್ದ.