ಮೈಸೂರು, ಫೆ.7: ರಾಜ್ಯದಲ್ಲಿ ಬಿಜೆಪಿ ಜೊತೆ ಸೇರಿ ಎನ್ ಡಿ ಎ ಮೈತ್ರಿಕೂಟ ಬಲಪಡಿಸಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಯತ್ನ ನಡೆಸುತ್ತಿರುವ ಬೆನ್ನಲ್ಲೇ ಜೆಡಿಎಸ್ ಕೋರ್ ಕಮಿಟಿ ಮುಖಂಡ ಹಾಗೂ ಮಾಜಿ ಮಂತ್ರಿ ಜಿ.ಟಿ.ದೇವೇಗೌಡ (GT Devegowda) ವಿವಾದದ ಬಾಂಬ್ ಸಿಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಜೊತೆಗಿನ ಜೆಡಿಎಸ್ ಮೈತ್ರಿ ಕೇವಲ ಲೋಕಸಭಾ ಚುನಾವಣೆಗೆ ಮಾತ್ರ ಸೀಮಿತ ಎಂದು ಹೇಳಿದ್ದಾರೆ.
ಬಿಜೆಪಿ ಜೊತೆಗೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿರುವುದು ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಮಾತ್ರವಷ್ಟೆ. ನಮ್ಮ ತತ್ವ– ಸಿದ್ಧಾಂತವೇ ಬೇರೆ; ಬಿಜೆಪಿಯದ್ದೇ ಬೇರೆ. ಕೇಸರಿ ಶಾಲು ಹಾಕಿದಾಕ್ಷಣ ನಮ್ಮ ಸಿದ್ಧಾಂತ ಬದಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಜನತಾ ಪಕ್ಷ ಕಟ್ಟಿದ ಜಯಪ್ರಕಾಶ್ ನಾರಾಯಣ್ ಹಾಗೂ ಪಕ್ಷವನ್ನು ಉಳಿಸಿ ಬೆಳೆಸಿದ ಎಚ್.ಡಿ. ದೇವೇಗೌಡರ ತತ್ವ ಸಿದ್ದಾಂತದ ಹಾದಿಯಲ್ಲಿ ನಾವು ಸಾಗುತ್ತೇವೆ.ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಮಾತ್ರಕ್ಕೆ ನಮ್ಮ ಸಿದ್ದಾಂತ ಬದಲಾಗುವುದಿಲ್ಲ ಎಂದು ತಿಳಿಸಿದರು.
ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಎಂಬುದು ಮೈತ್ರಿಯ ಉದ್ದೇಶ. ಸೀಟು ಹಂಚಿಕೆ ವಿಚಾರ ಶೀಘ್ರದಲ್ಲೇ ಅಂತಿಮಗೊಳ್ಳಲಿದೆ ಈ ಕುರಿತಂತೆ ದೆಹಲಿ ಮಟ್ಟದಲ್ಲಿ ಮಾತುಕತೆ ನಡೆಯುತ್ತಿವೆ ಎಂದು ಹೇಳಿದರು.
ರಾಜಕೀಯ ಪಕ್ಷಗಳ ನಾಯಕರು ವಿವಿಧ ಕಾರ್ಯಕ್ರಮಕ್ಕೆ ಹೋದಾಗ ಸಂಘಟಕರು ಅವರವರ ಶಾಲನ್ನು ಹಾಕುತ್ತಾರೆ. ಬಿಎಸ್‌ಪಿ ಕಾರ್ಯಕ್ರಮದಲ್ಲಿ ಅವರದ್ದೇ ಶಾಲು ನೀಡುತ್ತಾರೆ. ಹಾಗೆಂದ ಮಾತ್ರಕ್ಕೆ ಪಕ್ಷದ ಸಿದ್ಧಾಂತ ಬಿಟ್ಟು ಕೊಟ್ಟಿದ್ದಾರೆ ಎಂದು ಹೇಳುವುದರಲ್ಲಿ ಅರ್ಥವಿಲ್ಲ’ ಎಂದರು.
ಕುಮಾರಸ್ವಾಮಿ ಮಂಡ್ಯದಲ್ಲಿ ಈಚೆಗೆ ನಡೆದ ಪ್ರತಿಭಟನೆ ವೇಳೆ ಹಾಕಿದ್ದುದು ಬಿಜೆಪಿಯವರ ಕೇಸರಿ ಶಾಲಲ್ಲ. ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದಾಗ ಭಕ್ತನೊಬ್ಬ ಹಾಕಿದ ಶಾಲು ಅದು. ಬಿಜೆಪಿಯವರ ಶಾಲು ಕೂಡ ಅದಾಗಿರಲಿಲ್ಲ. ಆದರೆ, ಕಾಂಗ್ರೆಸ್‌ನವರು ಅದನ್ನೇ ದೊಡ್ಡದು ಮಾಡಿದ್ದಾರಷ್ಟೆ ಎಂದು ತಿಳಿಸಿದರು.