ಬರ ಸಂತ್ರಸ್ತರಿಗೆ ನೆರವು ಕೊಡುವಂತೆ ಅಮಿತ್ ಶಾ ಗೆ ಕೃಷ್ಣ ಬೈರೇಗೌಡ ಮನವಿ.
ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ರಾಜ್ಯ ಸರ್ಕಾರದಿಂದ ಮೊದಲ ಕಂತಿನಲ್ಲಿ ತಲಾ ಎರಡು ಸಾವಿರದಂತೆ ಈವರೆಗೆ 33 ಲಕ್ಷ ರೈತರಿಗೆ 628 ಕೋಟಿ ಪಾವತಿಸಲಾಗಿದೆ ಎಂದು ಮಾಹಿತಿ ನೀಡಿರುವ ಕೃಷಿ ಸಚಿವ ಕೃಷ್ಣ ಬೈರೇಗೌಡ, ರಾಜ್ಯ ಪ್ರವಾಸಕ್ಕೆ ಬಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬರ ಪರಿಹಾರಕ್ಕೆ ಇಲ್ಲಿಯೇ ನೆರವು ಘೋಷಿಸಲಿ ಎಂದು ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬರ ಪರಿಹಾರ ಕಾಮಗಾರಿಗಳಿಗಾಗಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್ ಡಿ ಆರ್ ಎಫ್) ಅಡಿಯಲ್ಲಿ ಬರ ಪರಿಹಾರ ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಮನವಿಗೆ ನಾಲ್ಕೂವರೆ ತಿಂಗಳಿನಿಂದ ಸರ್ಕಾರ ಸ್ಪಂದಿಸಿಲ್ಲ ಎಂದು ದೂರಿದರು.
ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗೆ ಅಮಿತ್ ಶಾ ಮುಖ್ಯಸ್ಥರು ರಾಜ್ಯ ಸರ್ಕಾರ ನಿರಂತರವಾಗಿ ಮನವಿ ಮಾಡುತ್ತಿದ್ದರೂ ಸಮಿತಿಯ ಸಭೆ ನಡೆಸಿಲ್ಲ. ಈಗ ಅವರು ರಾಜ್ಯ ಪ್ರವಾಸದಲ್ಲಿದ್ದಾರೆ. ಇಲ್ಲಿಯೇ ಪರಿಹಾರ ಘೋಷಿಸುವ ಮೂಲಕ ರಾಜ್ಯದ ಜನರ ನೆರವಿಗೆ ಬರಲಿ ಎಂದು ಒತ್ತಾಯಿಸಿದರು.
2009ರಲ್ಲಿ ರಾಜ್ಯದಲ್ಲಿ ಭೀಕರವಾದ ಪ್ರವಾಹ ಬಂದಿತ್ತು. ಆಗ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ಪರಿಸ್ಥಿತಿ ವೀಕ್ಷಣೆಗೆ ಬಂದ ದಿನವೇ ರಾಜ್ಯಕ್ಕೆ 1,000 ಕೋಟಿ ತುರ್ತು ನೆರವು ಬಿಡುಗಡೆ ಮಾಡಿದ್ದರು. ಆಗ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿತ್ತು.
ಸಿಂಗ್ ಅವರು ರಾಜಕಾರಣ ಮಾಡಿರಲಿಲ್ಲ. ಅಂತಹ ಪ್ರಬುದ್ಧ ನಿಲುವನ್ನು ಅಮಿತ್ ಶಾ ಪ್ರದರ್ಶಿಸಬೇಕು ಎಂದರು
ಬರ ಪರಿಹಾರ ಕೇಳುವುದು ರಾಜ್ಯದ ಸಾಂವಿಧಾನಿಕ ಹಕ್ಕು. ಕೊಡುವುದು ಕೇಂದ್ರದ ಕರ್ತವ್ಯ. ರಾಜ್ಯದ ಹಕ್ಕನ್ನು ನಿರಾಕರಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರವಿಲ್ಲ. ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ರಾಜ್ಯದ ಜನರ ಬಗ್ಗೆ ಕಾಳಜಿ ಹೊಂದಿದ್ದರೆ ಬರ ಪರಿಹಾರ ಬಿಡುಗಡೆಗೆ ಕೇಂದ್ರದ ಮೇಲೆ ಒತ್ತಡ ಹೇರಲಿ. ಇಲ್ಲವಾದರೆ ಅವರ ಕಾಳಜಿ ಡೋಂಗಿತನದ್ದು ಎಂಬುದು ಸಾಬೀತಾಗುತ್ತದೆ ಎಂದು ಟೀಕಿಸಿದರು.
ಎನ್‌ಡಿಆರ್‌ಎಫ್ ಪಾಲಿನ ಮೊತ್ತವನ್ನು ರಾಜ್ಯ ಸರ್ಕಾರ ಮುಂಗಡವಾಗಿ ಪಡೆದು ಬಳಸಿಕೊಂಡಿದೆ ಎಂಬ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ. ಅವರು ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸಲು ಯತ್ನಿಸಿದ್ದಾರೆ.ಅವರ ಹೇಳಿಕೆಯಲ್ಲಿ ಸತ್ಯಾಂಶ ಇದ್ದರೆ ಬರ ಪರಿಹಾರ ಕೋರಿ ರಾಜ್ಯವಸರ್ಕಾರ ಸಲ್ಲಿಸಿರುವ ಮನವಿಯನ್ನು ತಿರಸ್ಕರಿಸಲಿ. ಮುಂಗಡ ಹಣ ಪಡೆದಿರುವುದನ್ನು ಸಾಬೀತುಪಡಿಸುವ ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
ರಾಜ್ಯದ 223 ತಾಲ್ಲೂಕುಗಳಲ್ಲಿ ತೀವ್ರವಾದ ಬರಗಾಲ ಇದೆ. ರಾಜ್ಯಕ್ಕೆ 18,172 ಕೋಟಿ ಬರ ಪರಿಹಾರ ನೀಡುವಂತೆ ಕೋರಿ 2023ರ ಸೆಪ್ಟೆಂಬರ್ 23ರಂದು ಮೊದಲ ಮನವಿ ಸಲ್ಲಿಸಲಾಗಿತ್ತು. ನಂತರ ಎರಡು ಪೂರಕ ಮನವಿಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈವರೆಗೆ ಕೇಂದ್ರ ಸರ್ಕಾರದಿಂದ ಯಾವ ಸ್ಪಂದನೆಯೂ ದೊರಕಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬರ ಪರಿಹಾರ ಕೇಳುವುದು ರಾಜ್ಯದ ಸಾಂವಿಧಾನಿಕ ಹಕ್ಕು. ಕೊಡುವುದು ಕೇಂದ್ರದ ಕರ್ತವ್ಯ. ರಾಜ್ಯದ ಹಕ್ಕನ್ನು ನಿರಾಕರಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರವಿಲ್ಲ. ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ರಾಜ್ಯದ ಜನರ ಬಗ್ಗೆ ಕಾಳಜಿ ಹೊಂದಿದ್ದರೆ ಬರ ಪರಿಹಾರ ಬಿಡುಗಡೆಗೆ ಕೇಂದ್ರದ ಮೇಲೆ ಒತ್ತಡ ಹೇರಲಿ. ಇಲ್ಲವಾದರೆ ಅವರ ಕಾಳಜಿ ಡೋಂಗಿತನದ್ದು ಎಂಬುದು ಸಾಬೀತಾಗುತ್ತದೆ ಎಂದರು.
ಬರಗಾಲದಿಂದ 7,082 ಗ್ರಾಮಗಳು ಮತ್ತು 1,193 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ. ಸಮಸ್ಯೆ ಎದುರಿಸಲು ಈಗಿನಿಂದಲೇ ಸಿದ್ಧತೆ ಆರಂಭಿಸಲಾಗಿದೆ.ಸಮಸ್ಯೆ ಇರುವ 156 ಹಳ್ಳಿಗಳಲ್ಲಿ 183 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಲಾಗುತ್ತಿದೆ. 46 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ನಗರ ಪ್ರದೇಶಗಳ 40 ವಾರ್ಡ್‌ಗಳಲ್ಲೂ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ವಿವರ ನೀಡಿದರು.