ಬೆಂಗಳೂರು.ಫೆ.12: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ತಮ್ಮ ಸರ್ಕಾರ, ನುಡಿದಂತೆ ನಡೆದಿದೆ. ಜನರ ಪ್ರೀತಿ, ವಿಶ್ವಾಸ ಹಾಗೂ ಭರವಸೆಗಳಿಗೆ ಧಕ್ಕೆಯಾಗದಂತೆ ನಡೆದುಕೊಳ್ಳುವ ಮೂಲಕ ರಾಜ್ಯದ 7 ಕೋಟಿ ಜನರ ಬದುಕಿನಲ್ಲಿ ಬದಲಾವಣೆಯ ಗಾಳಿ ಬೀಸುವಂತೆ ಮಾಡಿದೆ ಎಂದು ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಧಾನ ಮಂಡಲದ ಬಜೆಟ್ ಅಧಿವೇಶನ ಇಂದಿನಿಂದ ಆರಂಭಗೊಂಡಿದ್ದು, ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರನ್ನು ಒಳಗೊಂಡ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರು ತಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿ ಎಂದು ಬಣ್ಣಿಸಿದರು.
ಶಕ್ತಿ, ಅನ್ನ ಭಾಗ್ಯ, ಗೃಹ ಜ್ಯೋತಿ, ಗೃಹ ಲಕ್ಷ್ಮಿ ಮತ್ತು ಯುವನಿಧಿ ಎಂಬ ಐದು ಗ್ಯಾರಂಟಿ ಯೋಜನೆಗಳನ್ನು ಅತ್ಯಂತ ಯಶಸ್ವಿಯಾಗಿ ಮತ್ತು ಸಮರ್ಪಕವಾಗಿ ಅನುಷ್ಠಾನಗೊಳಿಸಿದೆ. ಈ ಯೋಜನೆಗಳಿಂದಾಗಿ 1.2 ಕೋಟಿಗೂ ಅಧಿಕ ಕುಟುಂಬಗಳು ಬಡತನ ರೇಖೆಯಿಂದ ಮಧ್ಯಮ ವರ್ಗದ ಸ್ಥಿತಿಗೆ ತಲುಪುತ್ತಿವೆ. ಸರ್ಕಾರದ ಈ ನಿರ್ಣಯದಿಂದ ರಾಜ್ಯದ 5 ಕೋಟಿಗೂ ಹೆಚ್ಚು ಜನರು ಮಧ್ಯಮ ವರ್ಗದ ಸ್ಥಿತಿಗೆ ತಲುಪುತ್ತಿರುವುದು ಜಾಗತಿಕ ದಾಖಲೆಯಾಗಿದೆ ಎಂದು ಹೇಳಿದರು.
2023ರ ಜೂನ್ 11ರಂದು ಚಾಲನೆಗೊಂಡ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯ ಪ್ರಯೋಜನವನ್ನು ರಾಜ್ಯದ 3.5 ಕೋಟಿ ಮಹಿಳೆಯರು ಪಡೆಯುತ್ತಿದ್ದಾರೆ. ರಾಜ್ಯದ 1.60 ಕೋಟಿ ಜನರು ‘ಗೃಹಜ್ಯೋತಿ’ ಯೋಜನೆ ಸದುಪಯೋಗ ಪಡೆದುಕೊಂಡಿದ್ದಾರೆ. ಪ್ರತಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2000 ರೂಪಾಯಿ ನೀಡುವ ‘ಗೃಹಲಕ್ಷ್ಮಿ’ ಯೋಜನೆಯಡಿ ನೋಂದಾಯಿಸಿಕೊಂಡಿರುವ 1.17 ಕೋಟಿ ಫಲಾನುಭವಿಗಳಿಗೆ ಡಿಬಿಟಿ ಮೂಲಕ ಜನವರಿವರೆಗೆ 11,037 ಕೋಟಿಯನ್ನು ವರ್ಗಾಯಿಸಲಾಗಿದೆ ಎಂದು ವಿವರಿಸಿದರು.
ಗ್ರಾಮ ನ್ಯಾಯಾಲಯ:
ರಾಜ್ಯದಲ್ಲಿ ನ್ಯಾಯದಾನದ ವ್ಯವಸ್ಥೆಯನ್ನು ಉತ್ತಮಗೊಳಿಸಿ ಗ್ರಾಮೀಣ ಜನರ ಮನೆ ಬಾಗಿಲಿಗೆ ನ್ಯಾಯದಾನ ವ್ಯವಸ್ಥೆ ಕೊಂಡೊಯ್ಯುವ ಉಪಕ್ರಮವಾಗಿ ನೂರು ಹೊಸ ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರಕಟಿಸಿದರು.
ರಾಜ್ಯದ ಗ್ರಾಮೀಣ ಜನರ ಮನೆಬಾಗಿಲಿಗೆ ನ್ಯಾಯ ದೊರಕಿಸುವ ಮಹತ್ವಾಕಾಂಕ್ಷೆಯ ಭಾಗವಾಗಿ ಭಾರತ ಸಂವಿಧಾನದ 39ಎ ಅನುಚ್ಛೇಧದ ಅಡಿಯಲ್ಲಿ ಸಮಾನ ನ್ಯಾಯ ಮತ್ತು ಉಚಿತ ಕಾನೂನು ನೆರವಿಗೆ ಸಂಬಂಧಿಸಿದಂತೆ ರಾಜ್ಯವು ಸಮಾನ ಅವಕಾಶದ ಆಧಾರದ ಮೇಲೆ ನ್ಯಾಯ ಲಭಿಸುವಂತೆ ಮಾಡಲಿದೆ ಎಂದರು.
ಕಾನೂನು ವ್ಯವಸ್ಥೆಯ ನಿರ್ವಹಣೆಯನ್ನು ಸುನಿಶ್ಚಿತಗೊಳಿಸಲು ಬಡವರ, ಗ್ರಾಮೀಣ ಜನರ ಮನೆಬಾಗಿಲಿಗೆ ನ್ಯಾಯದಾನ ತಲುಪಿಸಲು ಗ್ರಾಮ ನ್ಯಾಯಾಲಯಗಳು ಆಧಾರವಾಗಲಿವೆ ಎಂದು ಹೇಳಿದರು.
ಸಂವಿಧಾನ ಧರ್ಮ:
ಸಾಂವಿಧಾನಿಕ ಸಂಸ್ಥೆಗಳು ದುರುಪಯೋಗವಾಗದಂತೆ ನಾವೆಲ್ಲರೂ ಸಂಕಲ್ಪ ಮಾಡಬೇಕಿದೆ. ನಮಗೆ ಸಂವಿಧಾನವೇ ರಾಷ್ಟ್ರೀಯ ಧರ್ಮ. ಸಂವಿಧಾನವನ್ನು ನಾವು ರಕ್ಷಿಸಿದರೆ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ ಎಂಬ ದೃಢವಾದ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು.
ಕರ್ನಾಟಕವನ್ನು ಸಮೃದ್ದಿಯ ನಾಡನ್ನಾಗಿ ಹಾಗೂ ಸರ್ವ ಜನಾಂಗದ ಶಾಂತಿಯ ತೋಟವಾಗಿಸಲು ಶ್ರಮ ಪಡೋಣ, ಸಂವಿಧಾನದ ಆಶಯಗಳನ್ನು ಅಕ್ಷರಸಃ ಅನುಷ್ಠಾನಗೊಳಿಸಿ ಮಾನವ ಹಕ್ಕುಗಳ ರಕ್ಷಣೆಗೆ ನ್ಯಾಯ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗುವುದು ಎಂದು ತಿಳಿಸಿದರು.
ಆರ್ಥಿಕ ಅಸಮಾನತೆಯನ್ನು ಸರಿದೂಗಿಸಲು ರಾಜ್ಯದ ಅಭಿವೃದ್ದಿ ಪಥವನ್ನು ಸುಸ್ಥಿರವಾಗಿ ಮುನ್ನಡೆಸಲಾಗುತ್ತಿದೆ. ಕರ್ನಾಟಕದ ಮಾದರಿಯನ್ನು ಸಾಮಾಜಿಕ ಸಾಮರಸ್ಯಗಳನ್ನು ಪಾಲಿಸಲಾಗುತ್ತಿದೆ.ಇದನ್ನು ಇನ್ನಷ್ಟು ಸಶಕ್ತಗೊಳಿಸಿ ರಾಜ್ಯವನ್ನು ವಿಶಿಷ್ಟವಾಗಿ ರೂಪಿಸುವುದು ನಮ್ಮ ಗುರಿ ಎಂದರು.
ಕರ್ನಾಟಕ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸರ್ಕಾರ ಬದ್ಧವಾಗಿದೆ. ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗಾಗಿ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ–2022′ ಕಾಯ್ದೆಯನ್ನು ರೂಪಿಸಲಾಗಿದೆ. ಸದ್ಯದಲ್ಲೇ ಇದು ಅನುಷ್ಠಾನಕ್ಕೆ ಬರಲಿದೆ ಎಂದು ಹೇಳಿದರು.
ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ, ತೆರಿಗೆಯ ಪಾಲು ಪಡೆಯುವ ವಿಚಾರದಲ್ಲಿ ಹತ್ತನೇ ಸ್ಥಾನದಲ್ಲಿದೆ. ಈ ಹಿನ್ನೆಲೆಯಲ್ಲಿ ನಮಗೆ ನ್ಯಾಯ ಮತ್ತು ಧರ್ಮದ ರೀತಿಯಲ್ಲಿ ಸಿಗಬೇಕಾದ ಪಾಲನ್ನು ಪಡೆಯಲು ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡುತ್ತಿದೆ ಎಂದು ತಿಳಿಸಿದರು