ಬೆಂಗಳೂರು, ಮಾ.20- ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಸರಕು ಸಾಗಣೆ ಮಾಡುವವರು ಸೂಕ್ತ ಕಾನೂನು ದಾಖಲೆಗಳನ್ನು ಹೊಂದಿರಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು ಸೂಚನೆ ನೀಡಿದೆ.
ಸರಕು ವಾಹನ ತಪಾಸಣೆ ವೇಳೆ ಮಾಲೀಕರು ಅಥವಾ ಸರುಕು ಸಾಗಣೆದಾರರು ಜಿಎಸ್’ಟಿಐಎನ್ ಬಿಲ್ ಮತ್ತು ಇತರೆ ದಾಖಲೆಗಳನ್ನು ಇಟ್ಚುಕೊಂಡಿರುವುದು ಅತ್ಯಗತ್ಯ. ಇದಲ್ಲದೆ ವಸ್ತುವನ್ನು ಖರೀದಿಸಿದ ಸ್ಥಳ, ಉದ್ದೇಶ ಹಾಗೂ ಸಾಗಿಸುವ ಸ್ಥಳದ ಧೃಡೀಕರಣ ಸೇರಿದಂತೆ ಇತರೆ ದಾಖಲೆಗಳನ್ನು ಇಟ್ಟುಕೊಂಡಿರಬೇಕು ಎಂದು ತಿಳಿಸಿದ್ದಾರೆ.
ವಾಣಿಜ್ಯ ಬಳಕೆಗೆ, ಇ-ವೇ ಬಿಲ್ ಕಡ್ಡಾಯವಾಗಿದೆ. ಇದು ವಾಣಿಜ್ಯ ತೆರಿಗೆ ಇಲಾಖೆಯಿಂದ ನೀಡಲಾಗುವ ಎಲೆಕ್ಟ್ರಾನಿಕ್ ಬಿಲ್ ಆಗಿದೆ. ಕೃಷಿ ಉತ್ಪನ್ನಗಳಿಗೆ, ಯಾವುದೇ ಇ-ವೇ ಬಿಲ್ ಅಗತ್ಯವಿಲ್ಲ, ಆದರೆ ಹಣಕಾಸಿನ ವಹಿವಾಟಿನ ವಿವರಗಳನ್ನು ಪ್ರಮಾಣೀಕರಿಸುವ ಇತರ ಕಾನೂನು ದಾಖಲೆಗಳನ್ನು ಹೊಂದಿರಬೇಕಾಗುತ್ತದೆ. ಅಂಗಡಿ ಅಥವಾ ಕಾರ್ಖಾನೆ ಇದ್ದರೆ, ಡೀಲರ್ ಗಳ ವಿವರಗಳು, ತಯಾರಕರ ವಿವರ, ಗುಣಮಟ್ಟ ಮತ್ತು ವಾಹನದ ವಿವರಗಳು, ಜಿಎಸ್’ಟಿ ಬಿಲ್ ಗಳ ಅಗತ್ಯವಿರುತ್ತದೆ ಎಂದು ಹೇಳಿದ್ದಾರೆ.
ಇಂತಹ ಅಗತ್ಯ ದಾಖಲೆಗಳೊಂದಿಗೆ ಸರಕು ಸಾಗಾಣಿಕೆಗೆ ಯಾವುದೇ ರೀತಿಯ ಅಡ್ಡಿ ಇರುವುದಿಲ್ಲ. ಇಲ್ಲವಾದರೆ ಆಯೋಗದ ನಿಯಮ ಪಾಲಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.