ಬೆಂಗಳೂರು, ಮಾ.20- ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಎಲ್ಲಾ ಕ್ಷೇತ್ರಗಳಲ್ಲೂ ಗೆಲ್ಲುವ ಮೂಲಕ ದಾಖಲೆ ನಿರ್ಮಿಸಬೇಕು ಎಂದು ಹವಣಿಸುತ್ತಿರುವ ಬಿಜೆಪಿಗೆ ಬೆಳಗಾವಿ ಸೇರಿದಂತೆ ಐದು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ.
ಪ್ರಮುಖವಾಗಿ ಬೆಳಗಾವಿ ಉತ್ತರ ಕನ್ನಡ ರಾಯಚೂರು ಚಿತ್ರದುರ್ಗ ಮತ್ತು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಹೈಕಮಾಂಡ್ ಗೆ ತಲೆನೋವು ತಂದಿದೆ ಈ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಘಟಾನುಘಟಿ ನಾಯಕರು ಟಿಕೆಟ್ ಗಾಗಿ ಪಟ್ಟು ಹಿಡಿದಿದ್ದಾರೆ. ಇದರಿಂದಾಗಿ ಈ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಕೊಟ್ಟರು ಬಂಡಾಯ ಕಟ್ಟಿಟ್ಟ ಬುತ್ತಿ ಎಂಬ ವಾತಾವರಣ ಸೃಷ್ಟಿಯಾಗಿದ್ದು ಅದಕ್ಕೆ ಅವಕಾಶ ಕೊಡದ ರೀತಿಯಲ್ಲಿ ಟಿಕೆಟ್ ಹಂಚಿಕೆ ಮಾಡಲು ಹೈಕಮಾಂಡ್ ಚರ್ಚೆ ನಡೆಸಿದೆ.
ಬೆಳಗಾವಿ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ ಆದರೆ ಇವರಿಗೆ ಟಿಕೆಟ್ ಕೊಡುವುದಕ್ಕೆ ಹಾಲಿ ಶಾಸಕರಾದ ಅಭಯ ಪಾಟೀಲ್ ಮಾಜಿ ಶಾಸಕ ಮಹಾಂತೇಶ ಕವಟಗಿಮಠ ಸಂಜಯ್ ಪಾಟೀಲ್ ಪ್ರಭಾಕರ ಕೋರೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸೇರಿದಂತೆ ಹಲವರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಶೆಟ್ಟರ್ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸುತ್ತಿರುವ ನಾಯಕರ ಜೊತೆ ಮಾತನಾಡಿ ಬಿಕ್ಕಟ್ಟು ಬಗೆಹರಿಸುವಂತೆ ಹೈಕಮಾಂಡ್ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸೂಚನೆ ನೀಡಿದೆ.
ಮತ್ತೊಂದೆಡೆ ಉತ್ತರ ಕನ್ನಡ ಕ್ಷೇತ್ರದಿಂದ ಕಣಕ್ಕಿಳಿಯಲು ಹಾಲಿ ಸಂಸದ ಅನಂತಕುಮಾರ್ ಹೆಗಡೆ ಪಟ್ಟು ಹಿಡಿದಿದ್ದಾರೆ ಇದಕ್ಕೆ ಪ್ರತಿಯಾಗಿ ಮಾಜಿ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಟಿಕೆಟಿಗಾಗಿ ಪ್ರಬಲ ಲಾಭಿ ನಡೆಸಿದ್ದಾರೆ. ಹೀಗಾಗಿ ಒಮ್ಮತದ ಆಯ್ಕೆ ಕಷ್ಟವಾಗಿದೆ.
ರಾಯಚೂರಿನಲ್ಲಿ ಹಾಲಿ ಸಂಸದ ಅಮರಸಿಂಹ ನಾಯಕ್ ಮತ್ತೊಮ್ಮೆ ಕಣಕ್ಕಿಳಿಯಲು ಬಯಸಿದ್ದಾರೆ ಆದರೆ ಈ ಕ್ಷೇತ್ರದಿಂದ ಮಾಜಿ ಸಂಸದ ಬಿ. ವಿ. ನಾಯಕ್ ಟಿಕೆಟಿಗೆ ಬೇಡಿಕೆ ಸಲ್ಲಿಸಿದ್ದಾರೆ ಇವರಲ್ಲಿ ಯಾರಿಗೆ ಟಿಕೆಟ್ ಕೊಟ್ಟರು ಬಂಡಾಯ ಕಟ್ಟಿಟ್ಟ ಬುತ್ತಿ ಟಿಕೆಟ್ ವಂಚಿತರು ಕಾಂಗ್ರೆಸ್ ಸೇರಿ ಬಿಜೆಪಿ ಅಭ್ಯರ್ಥಿ ವಿರುದ್ಧ ಕೆಲಸ ಮಾಡುವುದು ಖಚಿತವಾಗಿದೆ.
ಚಿತ್ರದುರ್ಗ ಕ್ಷೇತ್ರದಲ್ಲೂ ಇದೇ ರೀತಿಯಲ್ಲಿ ಪೈಪೋಟಿ ಉಂಟಾಗಿದ್ದು ಕೇಂದ್ರ ಸಚಿವ ನಾರಾಯಣಸ್ವಾಮಿ ಅವರಿಗೆ ಟಿಕೆಟ್ ನೀಡಿದರೆ ಕಷ್ಟ ಎನ್ನುವ ವರದಿಗಳು ತಲುಪಿದೆ.
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಹಾಗೂ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಪುತ್ರ ಅಲೋಕ್ ವಿಶ್ವನಾಥ್ ಅವರ ನಡುವೆ ಟಿಕೆಟ್ ಪಡೆಯಲು ತೀವ್ರ ಸ್ಪರ್ಧೆ ಏರ್ಪಟ್ಟಿತ್ತು.ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡಿದರೆ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದೆಂಬ ಹಿನ್ನೆಲೆಯಲ್ಲಿ ಇಬ್ಬರ ಜಗಳ ಮೂರನೇಯವರಿಗೆ ಲಾಭ ಎಂಬಂತೆ ಚಿಕ್ಕಬಳ್ಳಾಪುರದಿಂದ ಸದಾನಂದಗೌಡರಿಗೆ ಅದೃಷ್ಟ ಖುಲಾಯಿಸುವ ಸಂಭವವಿದೆ.
ಇದರ ಜೊತೆಗೆ ಈಗಾಗಲೇ ಘೋಷಣೆಯಾಗಿರುವ ಅಭ್ಯರ್ಥಿಗಳ ವಿರುದ್ಧ ಬಂಡಾಯ ಸಾರಿರುವ ನಾಯಕರ ಕಾರ್ಯವೈಖರಿ ಕೂಡ ಸವಾಲಾಗಿ ಪರಿಣಮಿಸಿದ್ದು ಅವರ ಮನವೊಲಿಕೆ ಕಾರ್ಯ ನಿರಂತರವಾಗಿ ಸಾಗಿದೆ.
ಮಾ.22ಕ್ಕೆ ಪಟ್ಟಿ:
ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ
ರಾಜ್ಯದ ಬಾಕಿರುವ ಐದು ಲೋಕಸಭಾ ಕ್ಷೇತ್ರಗಳಿಗೆ ಇದೇ 22ರಂದು ಕೇಂದ್ರ ವರಿಷ್ಠರು ಅಧಿಕೃತವಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ.
ಟಿಕೆಟ್ ಹಂಚಿಕೆ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಷಾ ಜೊತೆ ಚರ್ಚಿಸಲಾಗಿದೆ. 22ರಂದು ಪ್ರಧಾನಿ ನರೇಂದ್ರಮೋದಿ ಅವರ ಜೊತೆ ಚರ್ಚಿಸಿದ ಬಳಿಕ ಅಂತಿಮ ಪಟ್ಟಿ ಘೋಷಣೆಯಾಗಲಿದೆ ಎಂದು ತಿಳಿಸಿದರು ಬೆಳಗಾವಿ, ಉತ್ತರಕನ್ನಡ, ಕೋಲಾರ, ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚಿಸಲಾಗಿದೆ. ಕೆಲವು ಕಾರಣಗಳಿಂದ ಚಿತ್ರದುರ್ಗ ಮತ್ತು ರಾಯಚೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ಬಹುತೇಕ ಮೂರು ಕ್ಷೇತ್ರಗಳಿಗೆ 22ರಂದು ಅಭ್ಯರ್ಥಿ ಹೆಸರು ಘೋಷಣೆಯಾಗಬಹುದು. ಯಾರನ್ನು ಕಣಕ್ಕಿಳಿಸಬೇಕು ಎಂಬುದನ್ನು ಪಕ್ಷವೇ ತೀರ್ಮಾನಿಸುತ್ತದೆ. ವರಿಷ್ಠರ ತೀರ್ಮಾನವನ್ನು ಎಲ್ಲರೂ ಗೌರವಿಸಬೇಕು, ಪ್ರಧಾನಿ ನರೇಂದ್ರಮೋದಿ ಅವರನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕಾದರೆ ನಾವು ಎಲ್ಲದಕ್ಕೂ ಸಿದ್ಧರಾಗಬೇಕೆಂದು ಮನವಿ ಮಾಡಿದರು.
ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಕಾರಣ ಕೋಲಾರ ಕ್ಷೇತ್ರವನ್ನು ನಾವು ಜೆಡಿಎಸ್‍ಗೆ ಬಿಟ್ಟುಕೊಡಬೇಕು. ನಮ್ಮ ಸಂಸದರಾಗಿರುವ ಮುನಿಸ್ವಾಮಿಗೆ ಈಗಾಗಲೇ ಮಾಹಿತಿಯನ್ನು ನೀಡಲಾಗಿದೆ. ಇದಕ್ಕೆ ಅವರು ಸಮ್ಮತಿಸಿದ್ದಾರೆ. ಯಾವುದೇ ರೀತಿಯ ಅಸಮಾಧಾನವಿಲ್ಲ ಎಂದು ಬಿಎಸ್‍ವೈ ಸ್ಪಷ್ಟಪಡಿಸಿದರು.