ಬೆಂಗಳೂರು, ಮಾ.27- ರಾಜಕಾರಣಕ್ಕೂ ಉದ್ಯಮಕ್ಕೂ ಬಿಡಿಸಲಾರದ ನಂಟು. ಉದ್ಯಮಿಗಳು ತಮ್ಮ ವ್ಯವಹಾರದ ಅಭಿವೃದ್ಧಿಗಾಗಿ ರಾಜಕೀಯ ಪಕ್ಷಗಳಿಗೆ ಮತ್ತು ನಾಯಕರಿಗೆ ದೇಣಿಗೆ, ಕಾಣಿಕೆ ನೀಡುವುದು ಈಗ ಗುಟ್ಟಾಗಿ ಏನು ಉಳಿದಿಲ್ಲ.
ಅದರಲ್ಲೂ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಉದ್ಯಮ ಪತಿಗಳೊಂದಿಗೆ ಹೊಂದಿರುವ ನಂಟು ಜಗಜ್ಜಾಹೀರು. ಇಂತಹ ನಂಟಿನ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಕರ್ನಾಟಕದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಾಯಕರುಗಳಿಗೆ ಬಿಜೆಪಿ ಟಿಕೆಟ್ ಕೊಡಿಸುವಲ್ಲಿ ಖ್ಯಾತ ಉದ್ಯಮಿ ನಡೆಸಿದ ಲಾಬಿ ಈಗ ಬೆಳಕಿಗೆ ಬಂದಿದೆ.
ಮಾಜಿ ಸಚಿವ ಡಾ. ಸುಧಾಕರ್ ಅವರು ರಾಜಕಾರಣಕ್ಕೆ ಬರುವ ಮುನ್ನ ರಿಲಯನ್ಸ್ ಸಂಸ್ಥೆಯಲ್ಲಿ ಅತ್ಯುನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಆನಂತರ ರಾಜಕಾರಣಕ್ಕೆ ಧುಮುಕಿದ ಅವರು ಕಾಂಗ್ರೆಸಿನಿಂದ ಎರಡು ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿದ್ದರು ಬಳಿಕ ಬಿಜೆಪಿ ಸೇರಿ ಮಂತ್ರಿಯೂ ಆಗಿದ್ದ ಅವರು ಮತ್ತೊಮ್ಮೆ ಶಾಸನಸಭೆ ಪ್ರವೇಶಿಸಲು ನಡೆಸಿದ ಪ್ರಯತ್ನ ವಿಫಲವಾಗಿತ್ತು.
ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ಅವರು ಇದೀಗ ಲೋಕಸಭೆಗೆ ಸ್ಪರ್ಧೆ ಮಾಡಲು ಪ್ರಯತ್ನ ನಡೆಸಿದ್ದರು. ಆದರೆ ಸ್ಥಳೀಯ ಬಿಜೆಪಿ ನಾಯಕರು ಇವರಿಗೆ ಟಿಕೆಟ್ ವಿರೋಧ ವ್ಯಕ್ತಪಡಿಸಿದೆ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಪರಣಮಿಸಿತ್ತು.
ಸ್ಥಳೀಯ ಮುಖಂಡರು ವಿರೋಧ ವ್ಯಕ್ತಪಡಿಸಿದರು ಟಿಕೆಟ್ ಗಿಟ್ಟಿಸುವ ಪ್ರಯತ್ನ ಕೈಬಿಡದ ಡಾ. ಸುಧಾಕರ್ ಅವರು ಹೈಕಮಾಂಡ್ ಮಟ್ಟದಲ್ಲಿ ಪ್ರಬಲ ಲಾಭಿ ನಡೆಸಿದ್ದರು. ಆದರೆ ಅಲ್ಲಿಯೂ ತಮಗೆ ಹಿನ್ನಡೆಯಾಗಲಿದೆ ಎಂದು ತಿಳಿದ ಅವರು ಕೊನೆಗೆ ತಮಗೆ ಆಪ್ತರಾಗಿರುವ ಉದ್ಯಮಿ ಅದಾನಿ ಅವರನ್ನು ಸಂಪರ್ಕಿಸಿದರು.
ಬಿಜೆಪಿಯ ಉನ್ನತ ನಾಯಕತ್ವದ ಜೊತೆಗೆ ಉದ್ಯಮಿ ಅದಾನಿ ಹೊಂದಿರುವ ಸಂಪರ್ಕ ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ ಇದನ್ನೇ ಬಳಸಿಕೊಂಡ ಸುಧಾಕರ್ ಅವರು ಅದಾನಿ ಅವರ ಮೂಲಕ ಹೈಕಮಾಂಡ್ ಅನ್ನು ಸಂಪರ್ಕಿಸಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಒಂದು ಗಿಟ್ಟಿಸಿಕೊಂಡಿದ್ದಾರೆ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ.