ಬೆಂಗಳೂರು – ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ ಸಜ್ಜನ,ಶಿಕ್ಷಣ ಪ್ರೇಮಿ, ಸಮಾಜ ಸೇವಕ ಮನ್ಸೂರ್ ಅಲಿ ಖಾನ್ (Mansoor Khan) ಕಾಂಗ್ರೆಸ್ ಅಭ್ಯರ್ಥಿಯಾಗಿ ಬಂದಿದ್ದು,ಪಕ್ಷದ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುವ ಮೂಲಕ ಇವರನ್ನು ಸಂಸತ್ತಿಗೆ ಕಳುಹಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ಕರೆ ನೀಡಿದ್ದಾರೆ.
ಸಿ.ವಿ.ರಾಮನ್ ನಗರ ವಿಧಾನ ಸಭಾ ಕ್ಷೇತ್ರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಕೇಂದ್ರ ಲೋಕಸಭೆ ಅಭ್ಯರ್ಥಿ ಮನ್ಸೂರ್ ಆಲಿಖಾನ್ (Mansoor Khan) ಪರ ಪ್ರಚಾರ ಮಡೆಸಿ ಮಾತನಾಡಿದ ಅವರು ಪಿ.ಸಿ.ಮೋಹನ್ ಸೇರಿದಂತೆ 25 ಸಂಸದರು ರಾಜ್ಯದಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ. ಆದರರೆ, ಕಳೆದ ಐದು ವರ್ಷದಲ್ಲಿ ರಾಜ್ಯಕ್ಕೆ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದರು.
ಪಿ.ಸಿ.ಮೋಹನ್ ಮೂರು ಅವಧಿಗೆ ಈ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದಾರೆ.ಕ್ಷೇತ್ರದ ಅಭಿವೃದ್ಧಿಗೆ ಅವರು ಕೊಡುಗೆ ಕೊಡುವುದಿರಲಿ, ಮತದಾರರು ಅವರನ್ನು ನೋಡಲು ಸಿಕ್ಕಿದ್ದಾರೆಯೇ ಇದನ್ನು ಪ್ರಚಾರದ ವೇಳೆ ಕಾರ್ಯಕರ್ತರು ಕೇಳಬೇಕು ಎಂದರು.
ಕಾಂಗ್ರೆಸ್ ಅಭ್ಯರ್ಥಿ ಹಾಗಲ್ಲ.ಯಾವುದೇ ಅಧಿಕಾರವಿಲ್ಲದಿದ್ದರೂ ಕ್ಷೇತ್ರದ ಹಲವೆಡೆ ಸಮಾಜ ಕಲ್ಯಾಣ ಕಾರ್ಯಕ್ರಮ ಮಾಡಿದ್ದಾರೆ. ಶಿಕ್ಷಣ ಪಡೆಯುವವರಿಗೆ ಉದಾರ ನೆರವು.ಕೋವಿಡ್ ವೇಳೆ ನೀಡಿದ ನೆರವನ್ನು ಹೇಳುವ ಮೂಲಕ ಇಂತಹವರು ಆಯ್ಕೆಯಾದರೆ ನಿಮ್ಮ ಪ್ರತಿನಿಧಿ ಸಂಸತ್ತಿನಲ್ಲಿರುತ್ತಾರೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕು ಎಂದು ಸಲಹೆ ಮಾಡಿದರು.
ಕಾಂಗ್ರೆಸ್ ಪ್ರಜ್ಞಾವಂತರಾದ ಮನ್ಸೂರ್ ಆಲಿಖಾನ್ ಅವರನ್ನು ಅಭ್ಯರ್ಥಿ ಯನ್ನಾಗಿ ಮಾಡಿದೆ. ಹೀಗಾಗಿ, ಅವರನ್ನು ಹೆಚ್ವು ಮತಗಳಿಂದ ಗೆಲ್ಲಿಸಬೇಕಾದ ಅವಶ್ಯಕತೆ ಕಾರ್ಯಕರ್ತರಾಗಿ ನಮ್ಮ ಮೇಲಿದೆ. ಆ ಕೆಲಸವನ್ನು ನಿಷ್ಠೆಯಿಂದ ಮಾಡುತ್ತೀರೆಂದು ನಂಬಿರುತ್ತೇನೆ ಎಂದರು.
ನಮ್ಮ ಸರಕಾರ ಗ್ಯಾರಂಟಿಗಳ ಮೂಲಕ ರಾಜ್ಯದ ಬಡಜನರ ಬದುಕನ್ನು ಹಸನುಗೊಳಿಸುವ ಕೆಲಸ ಮಾಡುತ್ತಿದೆ. ಅದನ್ನು ಮನೆಮನೆಗೆ ತಲುಪಿಸಿ, ಅವರ ಆಶೀರ್ವಾದ ಬೇಡಿದರೆ ಸಾಕು ನಮ್ಮ ಅಭ್ಯರ್ಥಿ ಗೆದ್ದಂತೆ. ಆದರೆ, ಆ ಕೆಲಸವನ್ನು ಕಾರ್ಯಕರ್ತರಾದ ನೀವೆಲ್ಲ ಮಾಡಬೇಕು. ತೆರಿಗೆ ಅನ್ಯಾಯದ ಬಗ್ಗೆಯೂ ಜನರಿಗೆ ಮನವರಿಕೆ ಮಾಡಿಕೊಡಿ. ತೆರಿಗೆ ವಿಚಾರದಲ್ಲಿ ಅವರು ಸುಳ್ಳು ಹೇಳುತ್ತಾರೆ. ಅವರು ಜನತಾ ನ್ಯಾಯಾಲಯದ ಮುಂದೆ ಚರ್ಚೆಗೆ ಬರಲಿ, ನಾವು ವಾರ್ಷಿಕ ನಾಲ್ಕು ಲಕ್ಷ ಕೋಟಿ ತೆರಿಗೆ ಕೊಡುತ್ತಿದ್ದೇವೆ. ಆದರೆ ಕೇಂದ್ರ ಸರಕಾರ 50 ಸಾವಿರ ಕೋಟಿ ವಾಪಸ್ ಕೊಡುತ್ತಿದೆ. ಪ್ರಶ್ನೆ ಮಾಡಿದರೆ, ನಮ್ಮನ್ನೇ ದೂರುತ್ತಾರೆ. ಕರ್ನಾಟಕವನ್ನೇ ಬೈಯ್ಯುವ ಸಂಸದರು ಬೇಕಾ ಎಂದು ಪ್ರಶ್ನೆ ಮಾಡಿದರು.
ತೆರಿಗೆ ವಿಚಾರದಲ್ಲಿ ನಿರ್ಮಲಾ ಸೀತಾರಾಮನ್ ಸುಳ್ಳು ಹೇಳ್ತಾರೆ. ತೇಜಸ್ವಿ ಸೂರ್ಯ ಅನ್ನೋ ಅವಿವೇಕಿ ಹತ್ತು ವರ್ಷದ ಯುಪಿಎ ಆಡಳಿತದಲ್ಲಿ ಆರ್ಥಿಕ ಪ್ರಗತಿಯೇ ಆಗಿಲ್ಲ ಎಂದಿ ಹೇಳ್ತಾನೆ, ಏನು ಆರ್ಥಿಕ ಪ್ರಗತಿ ಆಗಿಲ್ಲ ಎನ್ನುತ್ತಾನೆ ಎಂಬ ಜ್ಞಾನವೂ ಆತನಿಗಿಲ್ಲ. ಮನಮೋಹನ್ ಸಿಂಗ್ ಅವರಿದ್ದಾಗ ಇಡೀ ವಿಶ್ವವೇ ಭಾರತದ ಆರ್ಥಿಕ ಬೆಳವಣಿಗೆಯ ನ್ನು ಕೊಂಡಾಡಿತ್ತು. ಆದರೆ, ಇವರಿಗೆ ಅದ್ಯಾವುದರ ಪರಿವೆಯೇ ಇಲ್ಲ ಎಲ್ಲಾ ಸುಳ್ಳು ಎಂದರು.
ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆಯಿದೆ. ಇಡೀ ದಕ್ಷಿಣ ಭಾರತಕ್ಕೆ ಬಿಜೆಪಿ ಅನ್ಯಾಯ ಮಾಡ್ತಿದೆ. ಒಂದು ರು. ಟ್ಯಾಕ್ಸ್ ಕಟ್ಟಿದ್ರೆ 13 ಪೈಸೆ ವಾಪಸ್ ಬರುತ್ತೆ. ಯುಪಿಗೆ ಒಂದು ರುಪಾಯಿಗೆ ಎಂಟು ರುಪಾಯಿ ಹೋಗುತ್ತದೆ. ಇಂತಹ ತಾರತಮ್ಯ ಎಷ್ಟು ಸರಿ ಎಂದು ಪ್ರಶ್ನಿಸಿದರು.
ಬಿಜೆಪಿ ಸರಕಾರ ನಡೆಸುತ್ತಿರುವುದು ಶ್ರೀಮಂತರಿಗೆ ಮಾತ್ರ. ಮೂರು ಸಲ ಗೆದ್ದಿದ್ದಾರಲ್ಲ ಅವರು ಏನ್ ಮಾಡಿದ್ದಾರೆ? ಸಿಎಎ ಕಾನೂನಿನ ಅಡಿಯಲ್ಲಿ ಶ್ರೀಲಂಕಾದ ತಮಿಳರನ್ನು ಏಕೆ ಸೇರಿಸಿಲ್ಲ. ಬಾಂಗ್ಲಾ, ಪಾಕಿಸ್ತಾನದಿಂದ ಬಂದವರಿಗೆ ಮಾತ್ರ ಕಾನೂನಿನಲ್ಲಿ ಅವಕಾಶ ಮಾಡಿದ್ದಾರೆ ಏಕೆ ? ಭಾವನಾತ್ಮಕ ವಿಚಾರ ಇಟ್ಟುಕೊಂಡು ಬೆಂಕಿ ಹಚ್ಚಿ ನೀವೇನೋ ಮನೆಗೆ ಹೋಗ್ತೀರಿ, ಆದ್ರೆ ಸಾಯೋದು ಹಿಂದೂ, ಮುಸ್ಲಿಂರ ಬಡವರ ಮಕ್ಕಳು ತಾನೇ? ನೀವು ಇಂತಹ ವಿಚಾರಗಳನ್ನು ಬಿಟ್ಟು, ಅಭಿವೃದ್ಧಿ ಮೇಲೆ ರಾಜಕಾರಣ ಮಾಡಿ ಎಂದರು.
ಮನ್ಸೂರ್ ಗೆದ್ದರೆ ಕೇಂದ್ರ ಸರಕಾರ ಬದಲು ಕೇಂದ್ರ ಲೋಕಸಭೆ ಕ್ಷೇತ್ರಕ್ಕೆ ಅದರದ್ದೇ ಆದ ಘನತೆಯಿದೆ. ಈ ಸಲ ನಮ್ಮ ಅಭ್ಯರ್ಥಿ ಮನ್ಸೂರ್ ಆಲಿಖಾನ್ ಗೆದ್ದರೆ, ಸರಕಾರವೇ ಬದಲಾಗುತ್ತದೆ. ಹೀಗಾಗಿ, ಇವರನ್ನು ಗೆಲ್ಲಿಸುವ ಕೆಲಸವನ್ನು ನಾವೆಲ್ಲ ಮಾಡೋಣ. ಅವರು ಗೆದ್ದರೆ ನಾನೇ ಗೆದ್ದಂತೆ. ನಿಮ್ಮ ಯಾವುದೃ ಸಮಸ್ಯೆಗಳಿಗೆ ಮುಂದೆ ನಿಂತು ಪರಿಹಾರ ಕೊಡಿಸುವ ಭರವಸೆ ನೀಡುತ್ತೇನೆ ಎಂದರು.
ಸಭೆಯಲ್ಲಿ ಮಾಜಿ ಪರಿಷತ್ ಸದಸ್ಯ ಎಂ.ನಾರಾಯಣ ಸ್ವಾಮಿ, ಸಿ.ವಿ.ರಾಮನ್ ನಗರ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಕುಮಾರ್, ಡಿಸಿಸಿ ಅಧ್ಯಕ್ಷ ನಂದಕುಮಾರ್, ಮಾಜಿ ಬಿಬಿಎಂಪಿ ಸದಸ್ಯರಾದ ಮೀನಾಕ್ಷಿ ಲಕ್ಷ್ಮೀಪತಿ, ಚಂದ್ರಪ್ಪ ರೆಡ್ಡಿ, ಶಿಲ್ಪಾ ಅಭಿಲಾಷ್ ರೆಡ್ಡಿ, ಕೆಪಿಸಿಸಿ ಕಾರ್ಮಿಕ ವಿಭಾಗದ ಲಕ್ಷ್ಮೀ ವೆಂಕಟೇಶ್, ಜಿ. ಶೇಖರ್ ಸೇರಿದಂತೆ ಅನೇಕ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.
LATEST KANNADA NEWS