ಬೆಂಗಳೂರು,ಏ.9: ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದ ಬಿಜೆಪಿಗೆ ತಿರುಗೇಟು ನೀಡುವ ಮೂಲಕ ಸೋಲಿನ ಮುಯ್ಯಿ ತೀರಿಸಿಕೊಳ್ಳಲು ಕಾಂಗ್ರೆಸ್ ಕಾರ್ಯತಂತ್ರ ರೂಪಿಸುತ್ತದೆ.
ಕಲಬುರ್ಗಿ ಕ್ಷೇತ್ರದಲ್ಲಿ ಈ ಬಾರಿ ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರು ಕಣಕ್ಕಿಳಿದಿದ್ದಾರೆ ಅವರನ್ನು ಶತಾಯಗತಾಯ ಗೆಲ್ಲಿಸುವ ಮೂಲಕ ಸಂದೇಶ ರವಾನಿಸಬೇಕು ಎಂದು ಟೊಂಕ ಕಟ್ಟಿ ನಿಂತಿರುವ ಖರ್ಗೆ ಅವರ ಪುತ್ರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.
ತಮ್ಮ ತಂದೆ ಅವರನ್ನು ಸೋಲಿಸಿ, ಮುಖಭಂಗ ಅನುಭವಿಸುವಂತೆ ಮಾಡಿದ ಸಂಸದ ಉಮೇಶ್ ಜಾದವ್ ಅವರನ್ನು ಸೋಲಿಸಬೇಕು ಎಂದು ಪಣತೊಟ್ಟವರಂತೆ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಪ್ರಭಾವಿ ನಾಯಕರ ಮನೆಗಳಿಗೆ ಎಡತಾಕುತ್ತಿದ್ದಾರೆ.
ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಜಾತ್ಯಾತೀತ ಜನತಾದಳ ಸಾಕಷ್ಟು ಪ್ರಭಾವ ಹೊಂದಿದೆ. ಈ ಪಕ್ಷ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ನಂತರ ಅನೇಕ ನಾಯಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಗುರುಮಠಕಲ್ ಶಾಸಕ ಶರಣ ಗೌಡ ಕುಂದಕೂರ ಅವರು ಈ ಮೈತ್ರಿ ವಿರುದ್ಧ ಬಹಿರಂಗವಾಗಿಯೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಜೆಡಿಎಸ್ ಬಿಜೆಪಿ ಮೈತ್ರಿಗೆ ತಮ್ಮ ಸಹಮತವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದರ ಲಾಭ ಪಡೆಯಲು ಮುಂದಾಗಿರುವ ಪ್ರಿಯಾಂಕ್ ಖರ್ಗೆ ಜಿಲ್ಲೆಯ ಎಲ್ಲಾ ಪ್ರಭಾವಿ ಜೆಡಿಎಸ್ ನಾಯಕರನ್ನು ಸಂಪರ್ಕಿಸಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಕೆಲಸ ಮಾಡುವಂತೆ ಮನವಿ ಮಾಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಕೆಲವು ಜೆಡಿಎಸ್ ನಾಯಕರನ್ನು ಸಂಪರ್ಕಿಸಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಕೆಲಸ ಮಾಡುವಂತೆ ಮನವಿ ಮಾಡಿದ್ದು ಜಿಲ್ಲೆಯ ರಾಜಕಾರಣದ ಚಿತ್ರಣದಲ್ಲಿ ಸಾಕಷ್ಟು ಬದಲಾವಣೆ ಉಂಟುಮಾಡುವ ಸಾಧ್ಯತೆಗಳು ಗೋಚರಿಸಿವೆ.
ಕಾಂಗ್ರೆಸ್ ನಾಯಕರು ಮನವಿ ಮಾಡಿರುವ ಬೆನ್ನಲ್ಲೇ, ಶಾಸಕ ಶರಣಗೌಡ ಕುಂದಕೂರ ಅವರು ಜಿಲ್ಲೆಯ ಜೆಡಿಎಸ್ ನಾಯಕರ ಸಭೆ ನಡೆಸಿದರು ಈ ಸಭೆಯಲ್ಲಿ ಜೇವರ್ಗಿ ಮಾಜಿ ಶಾಸಕ ದೊಡ್ಡಪ್ಪಗೌಡ ನರಬೋಳ, ಸೇಡಂ ಜೆಡಿಎಸ್ ಪರಾಜಿತ ಅಭ್ಯರ್ಥಿ ಬಾಲರಾಜ್ ಗುತ್ತೇದಾರ್, ಅಫಜಲಪುರ ಪರಾಜಿತ ಅಭ್ಯರ್ಥಿ ಶಿವಕುಮಾರ್ ನಾಟೀಕಾರ್, ಕಲಬುರಗಿ ದಕ್ಷಿಣ ಪರಾಜಿತ ಅಭ್ಯರ್ಥಿ ಕೃಷ್ಣಾರೆಡ್ಡಿ ಭಾಗಿಯಾಗಿದ್ದರು.
ಈ ನಾಯಕರು ಬಿಜೆಪಿ ಸಂಸದ ಉಮೇಶ್ ಜಾದವ್ ಸೇರಿದಂತೆ ಸ್ಥಳೀಯ ಬಿಜೆಪಿ ನಾಯಕರ ಕಾರ್ಯವ್ಯಕರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದ ಪ್ರಚಾರ ಸಭೆಗಳು ಸೇರಿದಂತೆ ಯಾವುದೇ ಸಭೆಗಳಿಗೆ ತಮ್ಮನ್ನು ಆಹ್ವಾನಿಸುತ್ತಿಲ್ಲ ಬಿಜೆಪಿ ಹಿರಿಯ ನಾಯಕರು ಬಂದರು ಕೂಡ ನಮ್ಮ ಬಗ್ಗೆ ವಿಚಾರಿಸುತ್ತಿಲ್ಲ. ಇಂತಹ ಅಪಮಾನ ಸಹಿಸಿಕೊಂಡು ತಾವು ಹೇಗೆ ಬಿಜೆಪಿ ಪರ ಕೆಲಸ ಮಾಡಬೇಕು ಎಂದು ಪ್ರಶ್ನಿಸಿದರು ಎನ್ನಲಾಗಿದೆ.
ಮತ್ತೊಂದೆಡೆಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮನ್ನು ಸಂಪರ್ಕಿಸಿ ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡುವಂತೆ ಮನವಿ ಮಾಡಿದ್ದಾರೆ ಹೀಗಾಗಿ ನಾವುಗಳು ಕಾಂಗ್ರೆಸ್ ಅಭ್ಯರ್ಥಿಗಳ ಪರ ಕೆಲಸ ಮಾಡುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು ಇದು ಬಿಜೆಪಿಗೆ ದೊಡ್ಡ ಹಿನ್ನಡೆ ಉಂಟು ಮಾಡುವ ಸಾಧ್ಯತೆ ಇದೆ.