ರಾಜಧಾನಿ ಬೆಂಗಳೂರಿನ ಸೆರಗಿಗೆ ಅಂಟಿಕೊಂಡಿರುವ ಕೋಲಾರ ಲೋಕಸಭಾ ಕ್ಷೇತ್ರ ಒಂದು ಕಡೆ ಆಂಧ್ರಪ್ರದೇಶ ಮತ್ತೊಂದು ಕಡೆ ತಮಿಳುನಾಡಿನ ಗಡಿಗೆ ಹೊಂದಿಕೊಂಡಿರುವಂತ ವಿಭಿನ್ನ ಭಾಷೆ ಮತ್ತು ಸಂಸ್ಕೃತಿಯ ಮೂಲಕ ಗಮನ ಸೆಳೆದಿರುವ ಕ್ಷೇತ್ರವಾಗಿದೆ.
ಈ ಲೋಕಸಭಾ ಕ್ಷೇತ್ರದಲ್ಲಿ ರಾಜಧಾನಿ ಬೆಂಗಳೂರಿನ ಎಲ್ಲ ರಾಜಕೀಯ ಪಟ್ಟಗಳು ನೆರೆಯ ತಮಿಳುನಾಡಿನ ರಾಜಕೀಯ ತಂತ್ರಗಾರಿಕೆ ಆಂಧ್ರಪ್ರದೇಶದ ರಾಜಕಾರಣದ ಮೇಲಾಟಗಳು ಇಲ್ಲಿ ದಟ್ಟವಾಗಿ ಗೋಚರಿಸುತ್ತದೆ. ನೆರೆಯ ರಾಜ್ಯಗಳಲ್ಲಿ ಕಂಡುಬರುವ ರಾಜಕೀಯ ಚರ್ಚೆಗಳು ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗಮನ ಸೆಳೆಯುತ್ತವೆ. ನೆರೆಯ ರಾಜ್ಯಗಳಲ್ಲಿನ ವಿದ್ಯಮಾನಗಳು ಇಲ್ಲಿನ ಚುನಾವಣೆಯ ಮೇಲೂ ಸಾಕಷ್ಟು ಪರಿಣಾಮ ಬೀರುತ್ತವೆ.
ಲೋಕಸಭಾ ಕ್ಷೇತ್ರದಲ್ಲಿ ಒಟ್ಟು; 17,08,565 ಮತದಾರರಿದ್ದಾರೆ ಇದರಲ್ಲಿ ಪುರುಷರು; 8,45,636 ಮತ್ತು ಮಹಿಳೆಯರು; 8,62,716ಲಿಂಗತ್ವ ಅಲ್ಪಸಂಖ್ಯಾತರು; 213 ಇದ್ದಾರೆ. ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿರುವುದು ಚುನಾವಣೆಯ ಫಲಿತಾಂಶದ ಮೇಲೆ ದೊಡ್ಡ ರೀತಿಯ ಪರಿಣಾಮ ಬೀರಲಿದೆ ಎಂದು ಲೆಕ್ಕಾಚಾರ ಹಾಕಲಾಗಿದೆ.
ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ, ಚಿಂತಾಮಣಿ ಕ್ಷೇತ್ರಗಳು ಹಾಗೂ ಕೋಲಾರ ಜಿಲ್ಲೆಯ ಶ್ರೀನಿವಾಸಪುರ, ಮುಳಬಾಗಿಲು, ಕೆಜಿಎಫ್, ಬಂಗಾರಪೇಟೆ, ಕೋಲಾರ ಹಾಗೂ ಮಾಲೂರು ವಿಧಾನಸಭಾ ಕ್ಷೇತ್ರಗಳು ಬರುತ್ತವೆ.
ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಕಾಂಗ್ರೆಸ್ ಜಯಶಾಲಿಯಾಗಿದ್ದರೆ, ಜೆಡಿಎಸ್ ಮೂರರಲ್ಲಿ ಗೆಲುವು ಸಾಧಿಸಿದೆ. ಇದಷ್ಟೇ ಅಲ್ಲದೆ ಕೋಲಾರ, ಬಂಗಾರಪೇಟೆ, ಮಾಲೂರು, ಚಿಂತಾಮಣಿಯಲ್ಲಿ ಜೆಡಿಎಸ್ ಸಾಕಷ್ಟು ಮತ ಗಳಿಸಿದೆ. ಜೆಡಿಎಸ್‌ನಲ್ಲಿ ಎಂಎಲ್‌ಸಿ ಇಂಚರ ಗೋವಿಂದರಾಜ್, ಸಿಎಂಆರ್ ಶ್ರೀನಾಥ್, ಶಾಸಕರಾದ ರವಿಕುಮಾರ್, ಸಮೃದ್ಧಿ ಮಂಜುನಾಥ್, ವೆಂಕಟಶಿವಾರೆಡ್ಡಿ ಅವರಂತಹ ಪ್ರಬಲ ನಾಯಕರಿದ್ದಾರೆ.
ಹೀಗಾಗಿಯೇ ಜೆಡಿಎಸ್ ಇಲ್ಲಿ ಸಾಕಷ್ಟು ಲೆಕ್ಕಾಚಾರ ಹಾಕಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ಸಿನ ಭದ್ರಕೋಟೆಯನ್ನು ಛಿದ್ರ ಮಾಡಿದ್ದರು.
ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಬೆಂಗಳೂರು ಮೂಲದ ಮುನಿಸ್ವಾಮಿ ಕಾಂಗ್ರೆಸ್ ಒಳಗುಂಪುಗಳ ಬೆಂಬಲ ಪಡೆದು ಲೋಕಸಭೆಗೆ ಆಯ್ಕೆಯಾಗುವ ಮೂಲಕ ಆಶ್ಚರ್ಯಕರ ಪಲಿತಾಂಶ ನೀಡಿದ್ದರು. ಮುನಿಸ್ವಾಮಿ ಈ ಕ್ಷೇತ್ರದ ಸಂಸದರಾದ ನಂತರ ಪಕ್ಷ ಸಂಘಟನೆಗೆ ಹೆಚ್ಚಿನ ಹೊತ್ತು ನೀಡಲಾಗಿತ್ತು. ಹೀಗಿದ್ದರೂ ಕೂಡ ಮಿತ್ರ ಪಕ್ಷದ ಕಾರ್ಯತಂತ್ರ ಹಾಗೂ ಒತ್ತಡಕ್ಕೆ ಮಣಿದ ಬಿಜೆಪಿ ಈ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಟ್ಟಿದೆ.
ಕಳೆದ ಲೋಕಸಭೆ ಚುನಾವಣೆ ಸಮಯದಲ್ಲಿ ತೀವ್ರ ಸ್ವರೂಪ ಪಡೆದುಕೊಂಡ ಕಾಂಗ್ರೆಸ್ಸಿನ ಒಳ ರಾಜಕಾರಣ ಇಲ್ಲಿಯ ವರೆಗೆ ನಿಂತಿಲ್ಲ. ರಾಜಕಾರಣದ ಪರಿಣಾಮವಾಗಿ ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ದಾಖಲೆ ವೀರ ಕೆಎಚ್ ಮುನಿಯಪ್ಪ ಸೋಲು ಅನುಭವಿಸಿದ್ದರು.
ಇದಾದ ನಂತರ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿನಲ್ಲಿನ ಆಂತರಿಕ ಬಿಕ್ಕಟ್ಟು ಬಗೆಹರಿಸಲು ಹೈಕಮಾಂಡ್ ಸಾಕಷ್ಟು ಪ್ರಯತ್ನ ನಡೆಸಿತು ಸೋಲಿನ ರುಚಿ ಅನುಭವಿಸಿದರು ಮುನಿಯಪ್ಪ ಅವರು ತಮ್ಮ ದ್ವೇಷ ಮರೆತು ಕಾಂಗ್ರೆಸ್ಸಿನ ಎಲ್ಲಾ ನಾಯಕರ ಮನೆ ಬಾಗಿಲಿಗೆ ಹೋದರೂ ಕೂಡ ಬಿಕ್ಕಟ್ಟು ಬಗೆಹರಿಯಲಿಲ್ಲ ಪರಿಣಾಮವಾಗಿ ಮುನಿಯಪ್ಪ ಅವರು ಕೋಲಾರ ಜಿಲ್ಲೆಯನ್ನು ತೊರೆದು ನೆರೆಯ ಚಿಕ್ಕಬಳ್ಳಾಪುರ ಜಿಲ್ಲೆಗೆ ವರ್ಗಾವಣೆಗೊಂಡು ದೇವನಹಳ್ಳಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದರು.
ಇದೀಗ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದಲ್ಲಿ ಆಹಾರ ಮಂತ್ರಿಯಾಗಿರುವ ಮುನಿಯಪ್ಪ ಮತ್ತೆ ಕೋಲಾರ ಜಿಲ್ಲೆಯ ಕಾಂಗ್ರೆಸ್ ರಾಜಕಾರಣದ ಮೇಲೆ ಹಿಡಿತ ಸಾಧಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಇದಕ್ಕೆ ಮಾಜಿ ಸಚಿವ ರಮೇಶ್ ಕುಮಾರ್ ವಿಧಾನ ಪರಿಷತ್ ಸದಸ್ಯ ನಸೀರ್ ಅಹಮದ್ ಶಾಸಕರಾದ ನಾರಾಯಣಸ್ವಾಮಿ ಕೊತ್ತೂರು ಮಂಜುನಾಥ್ ಅವಕಾಶ ನೀಡಿಲ್ಲ ಹೀಗಾಗಿ ಜಿಲ್ಲೆಯ ಕಾಂಗ್ರೆಸ್ ರಾಜಕಾರಣದ ಬಿಕ್ಕಟ್ಟು ದೊಡ್ಡ ರೀತಿಯಲ್ಲಿ ಸದ್ದು ಮಾಡುತ್ತಿದೆ.
ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ವಿಷಯವಾಗಿ ಕಾಂಗ್ರೆಸ್ಸಿನ ಈ ಬಣ ರಾಜಕಾರಣ ದೆಹಲಿಯ ಹೈಕಮಾಂಡ್ ಅಂಗಳ ತಲುಪಿದರು ಬಗೆಹರಿಯಲಿಲ್ಲ. ಕ್ಷೇತ್ರದ ಮೇಲೆ ತಮ್ಮ ಹಿಡಿತ ಸಾಧಿಸಲು ಮುಂದಾದ ಮುನಿಯಪ್ಪ ಅವರು ತಮ್ಮ ಸೋದರಳಿಯನಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದರು.
ಮುನಿಯಪ್ಪ ಅವರ ಕುಟುಂಬದವರಿಗೆ ಟಿಕೆಟ್ ನೀಡಬಾರದು ಎಂದು ಪಟ್ಟು ಹಿಡಿದಿದ್ದ ರಮೇಶ್ ಕುಮಾರ್ ಬಣ ಯಾವುದೇ ರಾಜಿ ಸಂಧಾನಗಳಿಗೆ ಮಣಿಯಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅವರು ಈ ಎರಡು ಬಣಗಳ ನಡುವೆ ಸಂದಾನ ಏರ್ಪಡಿಸಲು ಸಾಕಷ್ಟು ಬೆವರು ಹರಿಸಬೇಕಾಯಿತು.
ಅಂತಿಮವಾಗಿ ಎರಡೂ ಬಣಗಳಿಗೆ ಸೇರದ ಬೆಂಗಳೂರು ಮೂಲದ ಹಿರಿಯ ಕಾಂಗ್ರೆಸ್ ನಾಯಕ ಕೆ ಸಿ ವಿಜಯಕುಮಾರ್ ಅವರ ಪುತ್ರ ಕೆ.ವಿ. ಗೌತಮ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದಕ್ಕೆ ಪ್ರತಿಯಾಗಿ ಜೆಡಿಎಸ್ ಜನತಾ ಪರಿವಾರದ ಹಿರಿಯ ನಾಯಕಿ ಕೋಲಾರ ಜಿಲ್ಲಾ ಪಂಚಾಯತಿಯ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ ಅವರ ಪುತ್ರ ಮಲ್ಲೇಶ್ ಬಾಬು ಅವರನ್ನು ಕಣಕ್ಕಿಳಿಸುವ ಮೂಲಕ ಹೊಸ ರಾಜಕೀಯ ಲೆಕ್ಕಾಚಾರ ಹಾಕಿದೆ.
ಈ ಇಬ್ಬರು ಲೋಕಸಭೆ ಚುನಾವಣೆಗೆಸಮೊದಲ ಬಾರಿ ಸ್ಪರ್ಧಿಸುತ್ತಿದ್ದಾರೆ. ಕ್ಷೇತ್ರದ ಬಹುತೇಕ ಎಲ್ಲಾ ಕಡೆಗಳಲ್ಲೂ ಕಾಂಗ್ರೆಸ್‌ನ ಕೆ.ವಿ.ಗೌತಮ್ ಹಾಗೂ ಜೆಡಿಎಸ್‌ನ ಎಂ.ಮಲ್ಲೇಶ್ ಬಾಬು ನಡುವೆ ನೇರ ಪೈಪೋಟಿ ಕಂಡುಬರುತ್ತಿದೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪರಿಶಿಷ್ಟ ಜಾತಿಯ ಎಡಗೈ ಸಮುದಾಯದ ಗೌತಮ್ ಹೊರಗಿನವರು ಎಂಬ ಅಸ್ತ್ರ ಪ್ರಯೋಗಿಸುತ್ತಿರುವ ಜೆಡಿಎಸ್ ಈಗಲೇ ಸಜ್ಜಾದಂತಿದೆ. ‘ಸ್ಥಳೀಯರು ವರ್ಸಸ್ ಹೊರಗಿನವರು’ ಎಂಬ ಅಭಿಯಾನವನ್ನೇ ಆರಂಭಿಸಿದೆ. ಪರಿಶಿಷ್ಟ ಜಾತಿಯ ಭೋವಿ ಸಮುದಾಯದ ಮಲ್ಲೇಶ್ ಬಾಬು ಬಂಗಾರಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಎರಡು ಬಾರಿ ಸ್ಪರ್ಧಿಸಿ ಸೋಲು ಕಂಡಿದ್ದಾರೆ. ಇವರ ತಾಯಿ ಮಂಗಮ್ಮ ಮುನಿಸ್ವಾಮಿ ಅವರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಮಾಡಿದ್ದ ಕೆಲಸ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆಯನ್ನು ಮುಂದಿಟ್ಟುಕೊಂಡು ಮತಯಾಚಿಸುತಿದ್ದಾರೆ.
ಕೆಜಿಎಫ್, ಬಂಗಾರಪೇಟೆ, ಕೋಲಾರ, ಮತ್ತು ಮಾಲೂರು. ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೆಚ್ಚಿನ ಪ್ರಭಾವ ಹೊಂದಿದೆ ಇಲ್ಲಿಂದ ಗೆದ್ದಿರುವ ಕಾಂಗ್ರೆಸ್ ಶಾಸಕರು ಪಕ್ಷದ ಅಭ್ಯರ್ಥಿಯ ಪರವಾಗಿ ಬಿರುಸಿನ ಪ್ರಚಾರ ಮತ್ತು ಕಾರ್ಯತಂತ್ರದಲ್ಲಿ ತೊಡಗಿದ್ದಾರೆ.
ಅಭ್ಯರ್ಥಿ ಆಯ್ಕೆ ಕುರಿತಾಗಿ ಅಪಸ್ವರ ಎತ್ತಿದ್ದ ಸಚಿವ ಕೆಎಚ್ ಮುನಿಯಪ್ಪ ಅವರನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಉಸ್ತುವಾರಿಯನ್ನಾಗಿ ನೇಮಕ ಮಾಡಿ ಗೊಂದಲಗಳಿಗೆ ತೆರೆ ಎಳೆಯಲು ಹೈಕಮಾಂಡ್ ಮಾಡಿದ ಪ್ರಯತ್ನ ಸ್ವಲ್ಪಮಟ್ಟಿಗೆ ಯಶಸ್ಸು ತಂದುಕೊಟ್ಟಿದೆ.
ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಶಾಸಕರು ಇದೀಗ ಒಟ್ಟಾಗಿ ಕಾಂಗ್ರೆಸ್ ಅಭ್ಯರ್ಥಿಯ ಪರ ಕೆಲಸ ಮಾಡುತ್ತಿರುವುದು ಕೆವಿ ಗೌತಮ್ ಅವರಿಗೆ ಆನೆ ಬಲ ಬಂದಂತಾಗಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ಕ್ಷೇತ್ರಾದ್ಯಂತ ಹೆಚ್ಚಿನ ರೀತಿಯಲ್ಲಿ ಸದ್ದು ಮಾಡುತ್ತಿವೆ. ಮಹಿಳಾ ಮತದಾರರು ಗ್ಯಾರಂಟಿಗಳ ಪರವಾಗಿ ಮಾತನಾಡುತ್ತಿರುವುದು ಮತದಾನದ ಮೇಲೆ ದೊಡ್ಡ ರೀತಿಯ ಪರಿಣಾಮ ಬೀರುವ ಸಾಧ್ಯತೆಯಿದೆ. ಇಬ್ಬರು ಯುವ ನಾಯಕರ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದ್ದು, ಒಳ ಜಗಳ ಬಣ ರಾಜಕಾರಣದ ನಡುವೆ ಮಹಿಳಾ ಮತದಾರರ ಪಾತ್ರ ನಿರ್ಣಾಯಕವಾಗಲಿದೆ.