ಬೆಂಗಳೂರು, ಏ.23 – ಕೊಲೆ, ಕೊಲೆಯತ್ನ, ಕೊಲೆಬೆದರಿಕೆ,ದರೋಡೆಯತ್ನ,ಗಲಭೆ, ಹಲ್ಲೆ ಸೇರಿ 17 ಪ್ರಕರಣಗಳಲ್ಲಿ ಭಾಗಿಯಾಗಿ ಕುಖ್ಯಾತ ರೌಡಿ ಸೈಯದ್ ಮಜರ್ ಅಲಿಯಾಸ್ ಬಚ್ಚಾನನ್ನು ಬಂಧಿಸುವಲ್ಲಿ ಶಿವಾಜಿನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಶಿವಾಜಿನಗರದ ಸೈಯದ್ ಮಜರ್ ಅಲಿಯಾಸ್ ಬಚ್ಚಾ(32) ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದು,ಈತನ ವಿರುದ್ಧ ಮಾನ್ಯ ನ್ಯಾಯಾಲಯವು ವಾರೆಂಟ್ ಜಾರಿ ಮಾಡಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಏ.19 ರಂದು ಶಿವಾಜಿನಗರದ ಠಾಣಾ ಕಾಳಿಯಮ್ಮ ದೇವಸ್ಥಾನದ ಬಳಿ ಸ್ಕೂಟರ್ ನಲ್ಲಿ ಮಾರಕಾಸ್ತ್ರವನ್ನು ತೆಗೆದುಕೊಂಡು ಬಂದು ತಾನು ರೌಡಿ ಹಫ್ತಾ ಹಣ ಕೊಡಬೇಕೆಂದು ಸಾರ್ವಜನಿಕರಲ್ಲಿ ಗಲಾಟೆ ಮಾಡುತ್ತಿದ್ದ.
ಈ ಕುರಿತು ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಕೈಗೊಂಡು ಆತನನ್ನು ಸುತ್ತುವರೆದು ಸ್ಕೂಟರ್ ಹಾಗೂ ಮಾರಕಾಸ್ತ್ರದೊಂದಿಗೆ ಬಂಧಿಸಲಾಗಿದೆ. ಬಂಧಿತ ರೌಡಿ ಬಚ್ಚಾ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ರೌಡಿ ಪಟ್ಟಿಯವನಾಗಿರುತ್ತಾನೆ. ಆತನ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆಗೆ ಯತ್ನ, ಕೊಲೆಬೆದರಿಕೆ, ದರೋಡೆಗೆ ಯತ್ನ, ಗಲಭೆ, ಹಲ್ಲೆಯಂತಹ 17 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದರು.
ರೌಡಿ ಬಚ್ಚಾ ವಿರುದ್ಧ ಡಿ.ಜೆ.ಹಳ್ಳಿಯಲ್ಲಿ 10 ಅಡುಗೋಡಿಯಲ್ಲಿ 2 ಶಿವಾಜಿನಗರ, ಚಿಕ್ಕಜಾಲ, ಮೈಕೋ ಲೇಔಟ್, ಹೆಚ್.ಎ.ಎಲ್, ವಿಲ್ಸನ್‍ಗಾರ್ಡನ್ ನ ತಲಾ 1 ಸೇರಿ 17 ಪ್ರಕರಣಗಳು ದಾಖಲಾಗಿವೆ.
ನಗರ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ .ಕುಲದೀಪ್ ಕುಮಾರ್, ಪುಲಕೇಶಿನಗರ ಎಸಿಪಿ ಗೀತಾ.ಸಿ.ಆರ್ ನೇತೃತ್ವದಲ್ಲಿ ಶಿವಾಜಿನಗರ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತವರ ಸಿಬ್ಬಂದಿ ರೌಡಿ ಬಚ್ಚಾ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.