ಬೆಂಗಳೂರು, ಏ.23- ರಾಜ್ಯದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನಕ್ಕೆ ದಿನಗಣನೆ ಆರಂಭಗೊಂಡಿರುವ ಬೆನಲ್ಲೇ ಬಿಜೆಪಿಯಲ್ಲಿನ ಭಿನ್ನಮತ ಬಹಿರಂಗಗೊಂಡಿದ್ದು ವಿಶ್ವಕರ್ಮ ಸಮುದಾಯದ ಹಿರಿಯ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ ಕೆ.ಪಿ. ನಂಜುಂಡಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಅವರು ಇದೀಗ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ ಅಷ್ಟೇ ಅಲ್ಲ ಹುಬ್ಬಳ್ಳಿಗೆ ತೆರಳಿ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿ ಪರಿಷತ್ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ.
ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ನಂತರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಜವಾಬ್ದಾರಿ, ಸ್ಥಾನ ನೀಡಲಿಲ್ಲ. ಸಂಪೂರ್ಣವಾಗಿ ನಿರ್ಲಕ್ಷಿಸಿತು. ಇದರಿಂದ ಬೇಸರವಾಗಿ ಎಂ.ಎಲ್.ಸಿ ಸ್ಥಾನಕ್ಕೆ ಹಾಗೂ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ’ ಎಂದು ಹೇಳಿದರು.
ಕಳೆದ ಲೋಕಸಭೆ ಚುನಾವಣೆ ಸಮಯದಲ್ಲಿ ಕೆಪಿ ನಂಜುಂಡಿ ಅವರು ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿ ಬಿಜೆಪಿ ಸೇರ್ಪಡೆಯಾಗಿದ್ದರು ಆನಂತರ ಅವರನ್ನು ಬಿಜೆಪಿ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿತ್ತು. ಇದೀಗ ಮತ್ತೆ ಲೋಕಸಭೆ ಚುನಾವಣೆ ಸಮಯದಲ್ಲಿ ಬಿಜೆಪಿ ತೊರೆದಿರುವ ಅವರು ನಾಳೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ.
ಬಿಜೆಪಿಗೆ ಬೆಂಬಲ:
ವಿಶ್ವಕರ್ಮ ಸಮುದಾಯದ ಪ್ರಭಾವಿ ನಾಯಕ ರಾಗಿರುವ ಕೆಪಿ ನಂಜುಂಡಿ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿರುವುದಾಗಿ ಪ್ರಕಟಿಸಿದ ಬೆನ್ನಲ್ಲೇ ವಿಶ್ವಕರ್ಮ ಮಹಾಸಭಾ ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದೆ.
ಭಾರತಾದ್ಯಂತ ಸುಮಾರು 12 ಕೋಟಿ ಜನಸಂಖ್ಯೆ ಇರುವ ವಿಶ್ವಕರ್ಮ ಸಮಾಜಕ್ಕೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ವಿಶ್ವಕರ್ಮ ಸಮ್ಮಾನ್ ಯೋಜನೆಯನ್ನು ತಂದು ಲಕ್ಷಾಂತರ ಕುಟುಂಬಗಳಿಗೆ ನೆರವಾಗಿ, ನಮ್ಮ ಸಮಾಜವನ್ನು ಪ್ರಪಂಚಾದ್ಯಂತ ಗುರುತಿಸುವ ಹಾಗೆ ಮಾಡಿದ್ದಾರೆ. ಆದ್ದರಿಂದ ಬಿಜೆಪಿಗೆ ನಮ್ಮ ಸಮುದಾಯ ಬೆಂಬಲವಾಗಿ ನಿಲ್ಲಲಿದೆ ಎಂದು ಅಖಿಲ ಭಾರತ ವಿಶ್ವಕರ್ಮ ಮಹಾ ಸಂಘದ ಅಧ್ಯಕ್ಷ ಡಾ.ಜಯಂತ್ ಕೆ.ಎಂ. ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಮಾಜದ ಹಿತದೃಷ್ಟಿ ಎಂದರೆ ನಮ್ಮ ವಿಶ್ವಕರ್ಮ ಸಮಾಜವು ರಾಜಕೀಯ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಕಾರಣ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರು ನಮ್ಮ ಸಮಾಜವನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ನಮ್ಮ ಸಮಾಜಕ್ಕೆ ಬೆಂಬಲ ನೀಡುತ್ತಾರೆಂಬ ನಂಬಿಕೆ ಯಿಂದ ನಮ್ಮ ಸಂಘಟನೆ ಬೆಂಬಲವನ್ನು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ನೀಡುವ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದರು.
ಅಯೋಧ್ಯ ಶ್ರೀರಾಮನ ವಿಗ್ರಹವನ್ನು ಕೆತ್ತನೆ ಮಾಡಲು ನಮ್ಮ ಸಮಾಜದ ಶಿಲ್ಪಿ ಅರುಣ್ ಯೋಗಿರಾಜ್ ರವರಿಗೆ ಅವಕಾಶ ನೀಡುವ ಮುಖಾಂತರ ನಮ್ಮ ಸಮಾಜದ ಕೀರ್ತಿಯನ್ನು ರಾಷ್ಟ್ರ ಹಾಗೂ ವಿಶ್ವಕ್ಕೆ ತೋರಿಸುವಲ್ಲಿ ಮೋದಿಜಿರವರ ಸಹಕಾರ ಹೆಚ್ಚಿರುವ ಕಾರಣ ನಮ್ಮ ಸಮಾಜವು ಬಿ.ಜೆ.ಪಿ. ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಬೆಂಬಲ ನೀಡುವ ತೀರ್ಮಾನ ಮಾಡಿದೆ ಎಂದು ಹೇಳಿದರು.