ಬೆಂಗಳೂರು,ಮೇ.15:
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ದಿಕ್ಕು ದೆಸೆ ಒಂದೂ ಇಲ್ಲದಂತಾಗಿದೆ. ಆಡಳಿತ ಯಂತ್ರ ಸಂಪೂರ್ಣ ಹದಗೆಟ್ಟಿದ್ದು ಇವೆಂಟ್ ಮ್ಯಾನೇಜ್ಮೆಂಟ್ ನವರು ಆಡಳಿತ ಯಂತ್ರವನ್ನು ನಿಯಂತ್ರಿಸುತ್ತಿದ್ದಾರೆ ಎಂದು ಮಾಜಿ ಸಚಿವ ಸುನಿಲ್ ಕುಮಾರ್ ಆಪಾದಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದರೂ ಅಭಿವೃದ್ಧಿ ಕಾರ್ಯ ಶೂನ್ಯವಾಗಿದೆ. ನಾವೆಲ್ಲಾ ಶಾಸಕರು ಒಂದು ವರ್ಷದಿಂದ ಒಂದೇ ಒಂದು ಗುದ್ದಲಿ ಪೂಜೆ ಕೂಡ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿದೆ. ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಸರ್ಕಾರಿ ನೌಕರರು ಈ ತಿಂಗಳು ತಮಗೆ ಸಂಬಳ ಬರುತ್ತದೆಯೋ ಇಲ್ಲವೋ ಎಂಬ ಆತಂಕದಲ್ಲಿ ದಿನ ಕಳೆಯುವ ವಾತಾವರಣ ಉಂಟಾಗಿದೆ ಎಂದು ವಿಷಾದಿಸಿದರು.
ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಯಾವ
ಯಾವ ಯೋಜನೆಗಳಿಗೆ ಎಷ್ಟು ಅನುದಾನ ನೀಡಲಾಗಿದೆ ಎಂಬುದರ ಬಗ್ಗೆ ಲೆಕ್ಕ ಬಿಡುಗಡೆ ಮಾಡಲಿ. ಈ ಸರ್ಕಾರದಿಂದ ಅನುದಾನ ಬರುವುದಿಲ್ಲ ಎಂಬ ಅಭಿಪ್ರಾಯ ಜನರಲ್ಲಿ ಕೇಂದ್ರೀಕೃತವಾಗಿದೆ ಎಂದರು.
ಇಡೀ ಸಚಿವ ಸಂಪುಟವೇ ಅಸಮರ್ಥ ಸಂಪುಟವಾಗಿದೆ. ಸಚಿವರ ಮೇಲೆ ಹಿಡಿತ ಇಲ್ಲದಂತಾಗಿದೆ. ಕಾನೂನು ದಿನದಿಂದ ದಿನಕ್ಕೆ ಕಾನೂನು ಸುವ್ಯವಸ್ಥೆ ಹದಗೆಡುತ್ತಿದ್ದು, ಗೃಹಸಚಿವರು ಇದರಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.
ಪಿಎಲ್ ಡಿ ಬ್ಯಾಂಕುಗಳಲ್ಲಿ ರೈತರಿಗೆ ಮರು ಸಾಲ ಸಿಗುತ್ತಿಲ್ಲ. ಕೃಷಿ, ಸಹಕಾರ, ಇಂಧನ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ನಗರಾಭಿವೃದ್ಧಿ ಸಚಿವರಿಗೆ ಸಂಬಂಧಿಸಿದ ಯಾವುದೇ ಕೆಲಸಗಳಾಗುತ್ತಿಲ್ಲ. ಬ್ರಾಂಡ್ ಬೆಂಗಳೂರು ಈಗ ದಿಕ್ಕೆಟ್ಟ ಬೆಂಗಳೂರು ಆಗಿದೆ. ಕರ್ನಾಟಕದಲ್ಲಿ ಆಡಳಿತವನ್ನು ಕೆಲವು ಕುಟುಂಬದ ಸದಸ್ಯರು, ಇವೆಂಟ್ ಮ್ಯಾನೇಜ್ಮೆಂಟ್ ನ ಸದಸ್ಯರು ನಡೆಸುತ್ತಿದ್ದಾರೆಂದು ಲೇವಡಿ ಮಾಡಿದರು.
ವಿಧಾನಸೌಧದ ಆಡಳಿತ ಯಾರದೋ ಮನೆಯ ಕಿಚನ್ನಲ್ಲಿ ನಡೆಯುತ್ತಿರುವಂತೆ ಭಾಸವಾಗುತ್ತಿದೆ. ಜನಪ್ರತಿನಿಧಿಗಳಿಗೆ ಅಪಮಾನವಾಗುವಂತಹ ರೀತಿ ಆಡಳಿತ ನಡೆಸುತ್ತಿದೆ. ಇದರ ವಿರುದ್ಧ ಬಿಜೆಪಿ ಜನಾಂಧೋಲನ ಆರಂಭ ಮಾಡಲಿದೆ ಎಂದರು.

