28-05-2024, ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಆಗಿದೆ. ಒಂದು ವರ್ಷದ ಅವಧಿಯಲ್ಲಿ ಈ ಸರಕಾರದ ಸಾಧನೆ ಶೂನ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಟೀಕಿಸಿದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಮಾನ್ಯ ಮುಖ್ಯಮಂತ್ರಿಗಳು, ಯಾರೇ ಒಬ್ಬ ಸಚಿವರು ಒಂದೇ ಒಂದು ಗುದ್ದಲಿಪೂಜೆ ಮಾಡಿಲ್ಲ; ಒಂದೇ ಒಂದು ಶಂಕುಸ್ಥಾಪನೆ ಆಗಿಲ್ಲ. ಹೊಸ ಯೋಜನೆಗಳನ್ನು ಘೋಷಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ರಾಜ್ಯವು ಭೀಕರ ಬರಗಾಲದಿಂದ ತತ್ತರಿಸಿದೆ. ಕೇಂದ್ರ ಸರಕಾರದಿಂದ ಅನುದಾನ ಬಂದರೂ ತಾಂತ್ರಿಕ ಕಾರಣಗಳನ್ನು ಒಡ್ಡಿ ರೈತರಿಗೆ ಇನ್ನೂ ಸರಿಯಾದ ರೀತಿಯಲ್ಲಿ ಪರಿಹಾರ ಮೊತ್ತವನ್ನು ನೀಡಿಲ್ಲ. ಬೆಳೆ ವಿಮೆಯನ್ನೂ ಕೊಟ್ಟಿಲ್ಲ. ಇದು ರೈತರಲ್ಲಿ ಸಾಕಷ್ಟು ಆತಂಕ ಉಂಟುಮಾಡಿದೆ ಎಂದು ವಿವರಿಸಿದರು.
ಈ ರಾಜ್ಯ ಸರಕಾರಕ್ಕೆ ರೈತಪರ ಕಾಳಜಿ ಇಲ್ಲದೇ ಇರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಕರ್ನಾಟಕದ ಕಾನೂನು ಸುವ್ಯವಸ್ಥೆ ಕುಸಿತದ ಕುರಿತು ಇಡೀ ದೇಶದಲ್ಲಿ ಚರ್ಚೆ ಆಗಿದೆ. ಎಲ್ಲಿ ನೋಡಿದರೂ ಕೊಲೆಗಳು ನಡೆಯುತ್ತಿವೆ. ಚನ್ನಗಿರಿಯಲ್ಲಿ ಪೊಲೀಸರಿಗೇ ಪೊಲೀಸರು ರಕ್ಷಣೆ ಕೊಡಬೇಕಾದ ಸಂದರ್ಭ ಸೃಷ್ಟಿ ಆಗಿದೆ. ಮಟ್ಕಾ ದಂಧೆ ಯಥೇಚ್ಛವಾಗಿ ರಾಜ್ಯಾದ್ಯಂತ ನಡೆದಿದೆ. ಕಾನೂನುಬಾಹಿರ ದುಷ್ಕøತ್ಯಗಳು ಯಾರ ಭಯವೂ ಇಲ್ಲದೇ ನಡೆಯುತ್ತಿವೆ ಎಂದು ತಿಳಿಸಿದರು.