ಬೆಂಗಳೂರು, ಜೂ.3:
ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಣ ವರ್ಗಾವಣೆಗೆ ಸಂಬಂಧಪಟ್ಟಂತೆ ಸಚಿವ ನಾಗೇಂದ್ರ ಅವರಿಂದ ನಾವು ರಾಜೀನಾಮೆ ಕೇಳಿಲ್ಲ. ತನಿಖೆ ಮುಗಿದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಹಣ ವರ್ಗಾವಣೆಗೆ ಸಂಬಂಧಪಟ್ಟಂತೆ ತನಿಖೆಗೆ ಮೊನ್ನೆಯಷ್ಟೇ ಎಸ್‌ಐಟಿ ರಚನೆ ಮಾಡಲಾಗಿದೆ. ಇನ್ನೂ ಯಾವುದೇ ವರದಿ ಬಂದಿಲ್ಲ. ಪ್ರಾಥಮಿಕ ವರದಿ ಬರಲಿ. ಅದರಲ್ಲಿ ಏನಿರುತ್ತದೆ ಎಂದು ನೋಡಿದ ಬಳಿಕ ನಿರ್ಧಾರ ತೆಗೆದುಕೊಳ್ಳುತ್ತೇವೆ. ನಾಗೇಂದ್ರ ಅವರಿಂದ ತಾವು ಯಾವುದೇ ವಿವರಣೆ ಕೇಳಿಲ್ಲ, ವರದಿ ಬರುವವರೆಗೂ ಕಾಯುತ್ತೇವೆ ಎಂದರು.
ನಾಗೇಂದ್ರ ಅವರ ರಾಜೀನಾಮೆಗೆ ಬಿಜೆಪಿ ಜೂ.6ರವರೆಗೆ ಗಡುವು ನೀಡುವ ಕುರಿತು ಕಿಡಿಕಾರದ ಅವರು ನಮಗೆ ಗಡುವು ನೀಡಲು ಅವರು ಯಾರು ಪ್ರಶ್ನಿಸಿದರು.ವಿರೋಧಪಕ್ಷಗಳಿರುವುದೇ ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕೆಂದು. ಆದರೆ ಸುಳ್ಳು ಹೇಳಿಕೊಂಡು ಹೋರಾಟ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾರು ಮಾಡಿದರೂ ತಪ್ಪೇ:
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿ, ತಪ್ಪನ್ನು ಯಾರೇ ಮಾಡಿದರೂ ಅದು ತಪ್ಪು. ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಲೋಪಗಳಾಗಿದ್ದರೆ ಅದನ್ನು ಪರಿಶೀಲಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಬಿಜೆಪಿಯವರಿಗೆ ಟೀಕೆ ಮಾಡುವ ನೈತಿಕತೆ ಇಲ್ಲ ಎಂದು ತಿರುಗೇಟು ನೀಡಿದರು.
ಬಿಜೆಪಿಯ ಅಧಿಕಾರವಧಿಯಲ್ಲಿ ಹಲವು ರೀತಿಯ ಹಗರಣಗಳಾಗಿದ್ದವು. ತಪ್ಪು ಯಾರೇ ಮಾಡಿದ್ದರೂ ಅದು ತಪ್ಪು,ಬಿಜೆಪಿ ಸರ್ಕಾರದ 4 ವರ್ಷದ ಆಡಳಿತದಲ್ಲಿ ಜವಳಿ ನಿಗಮದಲ್ಲಿ ಮೈಸೂರು ಸ್ಯಾಂಡಲ್ ಸೋಪು ನಿಗಮದಲ್ಲಿ ಸೇರಿದಂತೆ ಪ್ರತಿ ಮಂಡಳಿಯಲ್ಲೂ ಹಗರಣಗಳಾಗಿದ್ದವು. ಹಿಂದೆ ಲೋಪಗಳಾಗಿದ್ದವು ಎಂಬ ಕಾರಣಕ್ಕೆ ಅದು ಮುಂದುವರೆಯಬೇಕು ಎಂದು ನಾವು ಬಯಸುವುದಿಲ್ಲ ಎಂದರು.
Previous Articleವಿಧಾನ ಪರಿಷತ್ ಗೆ ಅವಿರೋಧ ಆಯ್ಕೆ.
Next Article ಪರಿಷತ್ ಚುನಾವಣೆ ಶಾಂತಿಯುತ ಮುಕ್ತಾಯ.