ಬೆಳಗಾವಿ,ಜೂ.10-
ಮಕ್ಕಳ ಮಾರಾಟ ಜಾಲವನ್ನು ಬೇಧಿಸಿರುವ ಬೆಳಗಾವಿಯ ಮಾಳಮಾರುತಿ ಠಾಣೆ ಪೊಲೀಸರು ಆರ್‌ಎಂಪಿ ವೈದ್ಯ ಸೇರಿ ಐವರನ್ನು ಬಂಧಿಸುವಲ್ಲಿ
ಯಶಸ್ವಿಯಾಗಿದ್ದಾರೆ.
ಜಾಲದ ಕಿಂಗ್ ಪಿನ್ ಕಿತ್ತೂರಿನ ಡಾ.ಅಬ್ದುಲ್ ಗಫಾರ್ ಲಾಡಖಾನ್, ನೇಗಿನಹಾಳದ ಮಹಾದೇವಿ ಜೈನ್, ಚಂದನ ಸುಬೇದಾರ್, ಪವಿತ್ರಾ ಹಾಗೂ ಪ್ರವೀಣ್ ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳು ಮದುವೆಗೂ ಮುನ್ನ ಗರ್ಭಿಣಿಯಾಗಿ ಗರ್ಭಪಾತ ಮಾಡಿಸಿಕೊಳ್ಳಬೇಕು ಎನ್ನುವ ಯುವತಿಯರನ್ನು ಹಾಗೂ ಬಡತನದ ಕಾರಣಕ್ಕೆ ಗರ್ಭಪಾತ ಮಾಡಿಸಿಕೊಳ್ಳಲು ಬರುತ್ತಿದ್ದವರನ್ನು ಗುರಿಯಾಗಿಸಿಕೊಂಡು ಅವರ ಮನವೊಲಿಸಿ ಕೃತ್ಯ ನಡೆಸುತ್ತಿದ್ದರು.
ಏಳು, ಎಂಟು ತಿಂಗಳ ಅವಿವಾಹಿತ ಗರ್ಭಿಣಿಯರ ಆಪರೇಷನ್ ಮಾಡಿ ಮಗು ರಕ್ಷಣೆ ಮಾಡಿ ತಾವೇ ಸಾಕುವುದಾಗಿ ಹೇಳಿ ಮಗುವನ್ನು ತಮ್ಮ ಬಳಿಯೇ ಉಳಿಸಿಕೊಳ್ಳುತ್ತಿದ್ದರು.ಆನಂತರ ಮಗುವನ್ನು ಮಕ್ಕಳಿಲ್ಲದವರಿಗೆ ಮಾರಾಟ ಮಾಡಿ ಹಣ ಮಾಡುತ್ತಿದ್ದರು. ಈ ಬಗ್ಗೆ ಖಚಿತವಾದ ಮಾಹಿತಿಯನ್ನು ಆಧರಿಸಿ ಮಕ್ಕಳ ಮಾರಾಟ ಜಾಲವನ್ನು ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇದಲ್ಲದೆ ಗರ್ಭಿಣಿಯಾಗಿ ಮಗುವನ್ನು ಸಾಕಲಾಗದೆ ನರಳಾಡುವ ಅಸಹಾಯಕ ಬಡ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ಆರ್‌ಎಂಪಿ ವೈದ್ಯ ಅಬ್ದುಲ್ ಆಪರೇಷನ್ ಮಾಡಿ ಮಗುವನ್ನು ತಾವೇ ಸಾಕುವುದಾಗಿ ಹೇಳಿ ಮಗುವನ್ನು ರಕ್ಷಿಸುತ್ತಿದ್ದರು. ಬಳಿಕ ಎರಡ್ಮೂರು ತಿಂಗಳು ಮಗು ಆರೈಕೆ ಮಾಡಿ ಮಗುವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿತ್ತು. ಮಕ್ಕಳಿಲ್ಲದವರಿಗೆ ಅರವತ್ತು ಸಾವಿರದಿಂದ ಒಂದೂವರೆ ಲಕ್ಷ ಹಣಕ್ಕೆ ಮಾರಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಮಕ್ಕಳ ಮಾರಾಟ ಜಾಲದ ವಿಚಾರ ತಿಳಿದು ಮಕ್ಕಳ ಮಾರಾಟ ಗ್ಯಾಂಗ್ ಹಿಂದೆ ಬಿದ್ದಿದ್ದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ಮತ್ತು ಕೇಂದ್ರ ಸಂಯೋಜಕರ ತಂಡವು ಪೊಲೀಸರ ನೆರವಿನೊಂದಿಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ಮತ್ತು ಕೇಂದ್ರ ಸಂಯೋಜಕರ ತಂಡ ಈ ಜಾಲವನ್ನು ಭೇದಿಸಲು ಮುಂದಾದ ತಂಡ ತಾವು ಮಗು ಖರೀದಿ ಮಾಡಲು ಬಂದಿರುವಂತೆ ತಂತ್ರ ರೂಪಿಸಿದೆ. ಈ ತಂಡ ಮೊದಲು ಮಕ್ಕಳ ಮಾರಾಟ ಜಾಲದ ಮಹಾದೇವಿ ಜೈನ್ ಅವರನ್ನು ಸಂಪರ್ಕಿಸಿದೆ.
ಈ ವೇಳೆ ಆರೋಪಿ ಮಹಾದೇವಿ 1ಲಕ್ಷ 40 ಸಾವಿರ ರೂಗೆ ಮಗು ನೀಡುವುದಾಗಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಳು. ಇದಕ್ಕೆ ಒಪ್ಪಿ ಬೆಳಗಾವಿಯ ರಾಮತೀರ್ಥನಗರಕ್ಕೆ ಮಗು ತರುವಂತೆ ಅಧಿಕಾರಿಗಳು ಹೇಳಿದ್ದರು.
ಈ ವೇಳೆ ಮಗುವಿನ ಜೊತೆಗೆ ಬಂದು ಮಹಾದೇವಿ ಸಿಕ್ಕಿಬಿದ್ದಿದೆ. ಕಿಂಗ್ ಪಿನ್ ವೈದ್ಯ ಅಬ್ದಲ್ ಗಫಾರ್ ಖಾನ್ ನಿಂದ ಅರವತ್ತು ಸಾವಿರಕ್ಕೆ ಮಗು ಖರೀದಿ ಮಾಡಿದ್ದ ಮಹಾದೇವಿ ಅಲಿಯಾಸ್ ಪ್ರಿಯಾಂಕಾ ಜೈನ್, ಬಳಿಕ 1ಲಕ್ಷ 40ಸಾವಿರ ಹಣಕ್ಕೆ ಮಗು ಮಾರಾಟ ಮಾಡಲು ಯತ್ನಿಸಿ ಜೈಲು ಸೇರಿದ್ದಾರೆ.