ಬೆಂಗಳೂರು,ಜು.26:
ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸೇರಿಕೊಂಡು ನನ್ನ ಜೀವಮಾನದಲ್ಲೆ ಕಾಣದಷ್ಟು ಕೆಟ್ಟ ರಾಜಕಾರಣವನ್ನು ಮಾಡುತ್ತಿವೆ. ವಿಚಾರವೇ ಇಲ್ಲದೆ ವೈಯಕ್ತಿಕವಾಗಿ ತೇಜೋವಧೆ ಮಾಡುವ ಕೆಲಸವನ್ನು ಮಾಡುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಕುರಿತು ವಿಧಾನಮಂಡಲದ ಅಧಿವೇಶನದಲ್ಲಿ ಪ್ರತಿಪಕ್ಷಗಳು ಮಾಡಿದ ಆರೋಪಗಳಿಗೆ ಸುದ್ದಿಗೋಷ್ಠಿಯಲ್ಲಿ ಸುಧೀರ್ಘ ಉತ್ತರ ನೀಡಿದ ಅವರು,ರಾಜ್ಯದಲ್ಲಿ ಕುಸಿದು ಹೋಗುತ್ತಿರುವ ಜನಪ್ರಿಯತೆಯನ್ನು ಮರುಸ್ಥಾಪಿಸಿಕೊಳ್ಳಲು ಕಾಗಕ್ಕ-ಗೂಬಕ್ಕನ ಕಥೆ ಕಟ್ಟಿ ಜನರನ್ನು ನಂಬಿಸಲು ಹೊರಟಿದ್ದಾರೆ ಎಂದು ದೂರಿದರು.
ಸಾವಿರ ಸಲ ಸುಳ್ಳನ್ನು ಸತ್ಯ ಎಂದು ಹೇಳಿದರೆ ಸುಳ್ಳೂ ನಿಜವಾಗಲಿದೆ ಎಂಬ ಹಿಟ್ಲರ್‌ವಾದಿ ಹಾಗೂ ಭಾರತದ ಪೇಶ್ವೆವಾದಿ ಮನಸ್ಥಿತಿಯನ್ನು ಹೊಂದಿರುವ ಬಿಜೆಪಿಯವರು ಅದನ್ನು ನಮ್ಮ ರಾಜ್ಯದಲ್ಲಿ ಪ್ರತಿಪಾದಿಸುತ್ತಿದ್ದಾರೆ. ಹಿಂದೆ ದೇವರಾಜ ಅರಸು ,ಧರ್ಮಸಿಂಗ್ ಅವರ ವಿಚಾರದಲ್ಲೂ ಹೀಗೆ ಆಯಿತು. ಅದಕ್ಕೂ ಮೊದಲು ಕಲ್ಯಾಣದ ಬಿಜ್ಜಳನನ್ನು ಇದೆ ಪೇಶ್ವೆ ಮನಸ್ಥಿತಿಯ ಜನರೆ ಕೊಲೆ ಮಾಡಿದರು. ಈಗ ನನ್ನ ವಿಚಾರಕ್ಕೂ ಬಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದಕ್ಕೆ ಅಡ್ಡಿಯಿಲ್ಲ ಬನ್ನಿ, ಬಂದದ್ದು ಒಳ್ಳೆಯದೆ ಆಯಿತು. ರಾಜ್ಯದ ಜನ ನೋಡುತ್ತಿದ್ದಾರೆ. ದಮನಿತ ವರ್ಗಗಳ ಜನಸಮೂಹದಿಂದ ಬಂದವರು ರಾಜಕಾರಣವನ್ನೆ ಮಾಡಬಾರದೆಂಬ ನಿಲುವು ನಿಮ್ಮದಾಗಿದೆ ಆದ್ದರಿಂದಲೆ ಈ ರೀತಿ ಮುಡಾ ವಿಚಾರದಲ್ಲಿ ಒಂದು ಗುಲಗಂಜಿಯಷ್ಟು ನ್ಯೂನ್ಯತೆಯಿಲ್ಲದಿದ್ದರೂ ದೊಡ್ಡ ಸುದ್ದಿ ಮಾಡಿಕೊಂಡು ಕೂತಿದ್ದಾರೆ ಎಂದು ಆಪಾದಿಸಿದರು
ಸದನದಲ್ಲಿ ಗಲಾಟೆ ಮಾಡಿದ್ದು, ಅಸಂಸದೀಯವಾಗಿ ನಡೆದುಕೊಂಡಿದ್ದು, ಸಾರ್ವಜನಿಕರ ಹಣ ಪೋಲು ಮಾಡಿದ್ದು ಬಿಟ್ಟರೆ ಒಂದೇ ಒಂದು ದಾಖಲೆ ನೀಡಲಿಲ್ಲ. ದಾಖಲೆ ನೀಡದೆ, ಏನಾದರೂ ದಾಖಲೆಗಳಿದ್ದರೆ ಅವುಗಳನ್ನು ಬಿಡುಗಡೆ ಮಾಡದೆ ಬರೀ ಜಕ್ಕರಾಯನಕೆರೆ ಭಾಷಣ ಮಾಡುವ ಮೂಲಕ ಕಾಲಹರಣ ಮಾಡಿದರು ಎಂದು ದೂರಿದರು.
ಬಿಜೆಪಿ ಜೆಡಿಎಸ್‌ನವರು ಯಾವುದೇ ದಾಖಲೆಗಳಿಲ್ಲದೆ ಎರಡು ವಾರಗಳ ಕಾಲ ಸದನವನ್ನು ದಿಕ್ಕುತಪ್ಪಿಸಿದರು. ಸಂಸದೀಯ ಪ್ರಜಾಪ್ರಭುತ್ವವು ಯಾವುದಕ್ಕೆ ಮಾದರಿಯಾಗಬಾರದೊ ಅದಕ್ಕೆ ಬಿಜೆಪಿಯವರು ಮಾದರಿಯಾದರು. ಇಂಥ ಬೇಜವಾಬ್ಧಾರಿ ವರ್ತನೆಯ ವಿರೋಧ ಪಕ್ಷವನ್ನು ನಾನು ನೋಡಿಯೇ ಇಲ್ಲ ಎಂದು ಕಿಡಿಕಾರಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ತಮ್ಮ ಪತ್ನಿಗೆ ಬದಲಿ ನಿವೇಶನ ಹಂಚಿಕೆ ಮಾಡಿರುವುದರಲ್ಲಿ ಯಾವ ಅಕ್ರಮವೂ ನಡೆದಿಲ್ಲ. ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ತಮ್ಮ ಪಾತ್ರವೂ ಇಲ್ಲ ಎಂದು ಸ್ಪಷ್ಟಪಡಿಸಿದರು
ಮೈಸೂರಿನ ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿ ನನ್ನ ಪತ್ನಿ ಪಾರ್ವತಿ ಹೆಸರಿನಲ್ಲಿದ್ದ 3 ಎಕರೆ 16 ಗುಂಟೆ ಜಮೀನನ್ನು ಮುಡಾ ಒತ್ತುವರಿ ಮಾಡಿಕೊಂಡು ಬಡಾವಣೆ ನಿರ್ಮಿಸಿತ್ತು.ಅದಕ್ಕೆ ಪರಿಹಾರವಾಗಿ ಬದಲಿ ನಿವೇಶನ ಹಂಚಿಕೆ ಮಾಡಿದೆ. ಇದರಲ್ಲಿ ಅಕ್ರಮ ಏನಿದೆ’ ಎಂದು ಪ್ರಶ್ನಿಸಿದರು.
ಪರಿಶಿಷ್ಟ ಜಾತಿಯ ಜವರ ಎಂಬುವವರು 1935ರಲ್ಲಿ ಸರ್ಕಾರಿ ಹರಾಜಿನಲ್ಲಿ ಸದರಿ ಜಮೀನನ್ನು ಖರೀದಿಸಿದ್ದರು. ಅವರಿಗೆ ಮೂರು ಜನ ಮಕ್ಕಳಿದ್ದರು. ಜವರ ಮೃತರಾದ ಬಳಿಕ ಕುಟುಂಬದ ಇತರ ಸದಸ್ಯರ ಒಪ್ಪಿಗೆ ಮೇರೆಗೆ ದೇವರಾಜು ಎಂಬ ಮಗನಿಗೆ ಜಮೀನಿನ ಖಾತೆ ವರ್ಗಾವಣೆ ಆಗಿತ್ತು. ಅವರಿಂದ ನನ್ನ ಪತ್ನಿಯ ಅಣ್ಣ ಮಲ್ಲಿಕಾರ್ಜುನಸ್ವಾಮಿ ಖರೀದಿಸಿದ್ದರು. ಇದು ಹರಾಜಿನಲ್ಲಿ ಖರೀದಿಸಿದ ಜಮೀನು ಆಗಿರುವುದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಜಮೀನು ಖರೀದಿ ನಿಷೇಧ (ಪಿಟಿಸಿಎಲ್) ಕಾಯ್ದೆ ಅನ್ವಯ ಆಗುವುದಿಲ್ಲ ಎಂದು ವಿವರಿಸಿದರು.
ಕೆಸರೆ ಗ್ರಾಮದ 3 ಎಕರೆ 16 ಗುಂಟೆ ಜಮೀನಿನ ಸ್ವಾಧೀನಕ್ಕೆ ಮುಡಾ 1992ರಲ್ಲಿ ಪ್ರಾಥಮಿಕ ಅಧಿಸೂಚನೆ ಮತ್ತು 1997ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿತ್ತು. ಜಮೀನು ಮಾಲೀಕರ ಮನವಿಯಂತೆ ಸದರಿ ಜಮೀನನ್ನು ಡಿನೋಟಿಫೈ ಮಾಡಿ 1997ರಲ್ಲಿ ಆದೇಶ ಹೊರಡಿಸಲಾಗಿತ್ತು ಎಂದು ದಾಖಲೆ ಪ್ರದರ್ಶಿಸಿದರು.
2005ರಲ್ಲಿ ಈ ಜಮೀನು ಖರೀದಿಸಿದ್ದ ಮಲ್ಲಿಕಾರ್ಜುನ ಸ್ವಾಮಿ, ಭೂ ಪರಿವರ್ತನೆಯನ್ನೂ ಮಾಡಿಸಿದ್ದರು. 2006ರಲ್ಲಿ ತಮ್ಮ ಪತ್ನಿ ಪಾರ್ವತಿ ಅವರಿಗೆ ದಾನಪತ್ರ ಮಾಡಿಕೊಟ್ಟಿದ್ದರು ಎಂದರು.
ಈ ಜಮೀನನ್ನು ಮುಡಾ ಒತ್ತುವರಿ ಮಾಡಿರುವುದು 2013ರಲ್ಲಿ ನಮ್ಮ ಕುಟುಂಬಕ್ಕೆ ಗೊತ್ತಾಯಿತು. ಬಳಿಕ ಬದಲಿ ಜಮೀನು ಕೊಡುವಂತೆ ಪಾರ್ವತಿ ಮುಡಾಕ್ಕೆ ಅರ್ಜಿ ಸಲ್ಲಿಸಿದ್ದರು. 2014 ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಬದಲಿ ನಿವೇಶನ ಕೋರಿರುವ ವಿಷಯವನ್ನು ಪತ್ನಿ ತಿಳಿಸಿದ್ದರು. ಮುಖ್ಯಮಂತ್ರಿ ಹುದ್ದೆಯಲ್ಲಿದ್ದು ಆ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ ಎಂದಿದ್ದೆ. ಸದರಿ ಕಡತದ ಬಗ್ಗೆ ನನ್ನ ಬಳಿ ಚರ್ಚಿಸದಂತೆಯೂ ಅಧಿಕಾರಿಗಳಿಗೆ ಸೂಚಿಸಿದ್ದೆ’ ಎಂದು ತಿಳಿಸಿದರು.
ಬದಲಿ ನಿವೇಶನ ಹಂಚಿಕೆ ಮಾಡಿರುವುದು ಬಿಜೆಪಿ ಆಡಳಿತದ ಅವಧಿಯಲ್ಲಿ. ಬಿಜೆಪಿ ಶಾಸಕರಾಗಿದ್ದ ಎಸ್.ಎ. ರಾಮದಾಸ್, ನಾಗೇಂದ್ರ, ಜೆಡಿಎಸ್ ಶಾಸಕರಾಗಿದ್ದ ಜಿ.ಟಿ. ದೇವೇಗೌಡ ಉಪಸ್ಥಿತರಿದ್ದ ಮುಡಾ ಆಡಳಿತ ಮಂಡಳಿ ಸಭೆಯಲ್ಲಿ ನಿವೇಶನ ಹಂಚಿಕೆ ನಿರ್ಣಯ ಕೈಗೊಳ್ಳಲಾಗಿತ್ತು’ ಎಂದರು.
ಇಂತಹದ್ದೇ ಪ್ರಕರಣದಲ್ಲಿ ಸುಂದರಮ್ಮ ಎಂಬುವವರಿಗೆ ಪೂರ್ಣ ವಿಸ್ತೀರ್ಣದ ಜಮೀನು ಪರಿಹಾರ ನೀಡಲಾಗಿದೆ. ತಮ್ಮ ಪತ್ನಿಗೆ ಶೇಕಡ 50ರಷ್ಟು ಪರಿಹಾರ ಮಾತ್ರ ನೀಡಲಾಗಿದೆ. ಇದರಲ್ಲಿ ತಮ್ಮ ತಪ್ಪೇನಿದೆ ಎಂದು ಪ್ರಶ್ನಿಸಿದರು.
2023ರ ವಿಧಾನಸಭಾ ಚುನಾವಣೆ ಬಳಿಕ ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಹತಾಶರಾಗಿದ್ದಾರೆ. ಆ ಕಾರಣದಿಂದ ತಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ. ಅದರ ಭಾಗವಾಗಿಯೇ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕುಟುಂಬದಲ್ಲಿ ಅನ್ಯೋನ್ಯರಾಗಿದ್ದವರನ್ನು ಪರಸ್ಪರ ಎತ್ತಿ ಕಟ್ಟಿ ಮನೆ ಮುರುಕ ರಾಜಕಾರಣ ಮಾಡಿದರೆ ರಾಜ್ಯದ ಜನತೆ ಯಾವುದೇ ಕಾರಣಕ್ಕೂ ಸಹಿಸಲ್ಲ. ಇದರಲ್ಲಿ ನನ್ನದಾಗಲಿ, ನಮ್ಮ ಪತ್ನಿಯವರದ್ದಾಗಲಿ, ನಮ್ಮ ಬಾಮೈದುನನ ಪಾತ್ರ ಎಲ್ಲಿದೆ ಹೇಳಿ” ಎಂದು ಪ್ರಶ್ನಿಸಿದರು
Previous Articleಸಂಸತ್ ಭವನದ ಮುಂದೆ ರಾಜ್ಯ ಬಿಜೆಪಿ ಸಂಸದರ ಧರಣಿ.
Next Article ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟ ಮತ್ತೊಮ್ಮೆ ಬಹಿರಂಗ.