ಬೆಂಗಳೂರು,ಆ. 9-
ನಿವೇಶನ ಹಂಚಿಕೆ ಕರ್ಮಕಾಂಡ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆಯಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿಯಾಗುವ ಕಾಲ ಹತ್ತಿರ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಮಿಸಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಯಾರು ನಿವೃತ್ತಿಯಾಗುತ್ತಾರೆ ಏನಾಗುತ್ತಾರೆ ಎನ್ನುವುದು ಮುಂದೆ ಗೊತ್ತಾಗುತ್ತದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ನಿವೃತ್ತಿಯ ಬಗ್ಗೆ ಹೇಳಿದ್ದಾರೆ ಯಾರಾದರೂ ನಿವೃತ್ತಿ ಪಡೆಯುವಾಗ ಇನ್ನೊಬ್ಬರ ಬಗ್ಗೆ ಮಾತನಾಡುವುದು ಸ್ವಾಭಾವಿಕ. ಹೀಗಾಗಿ ಸಿದ್ದರಾಮಯ್ಯ ಕೂಡ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಮಾಜಿ ಆಗಿ ಮನೆಗೆ ಹೋಗುವ ಕಾಲ ಸನ್ನಿಹಿತವಾಗಿ ಹೀಗಾಗಿ ಮನಬಂದಂತೆ ಮಾತನಾಡುತ್ತಿದ್ದಾರೆ ಅವರು ಮಾತನಾಡಲಿ ಬಿಡಿ ಎಂದರು.
ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಜನ ಸಿಡಿದೆದ್ದಿದ್ದಾರೆ ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆಗೆ ಅತ್ಯುತ್ತಮ ಜನಬೆಂಬಲ ವ್ಯಕ್ತವಾಗಿದೆ ಈ ಸರ್ಕಾರ ಯಾವಾಗ ಹೋಗುತ್ತದೆಯೋ ಎಂದು ಕಾಯುತ್ತಿದ್ದಾರೆ ಎಂದು ತಿಳಿಸಿದರು.
ತಮ್ಮ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣದ ಬಗ್ಗೆ ಕೋರ್ಟ್ ನಲ್ಲಿ ತೀರ್ಮಾನ ಹೊರಬೀಳುತ್ತದೆ ಆಗ ಎಲ್ಲವೂ ಬಹಿರಂಗವಾಗುತ್ತದೆ ಅಲ್ಲಿಯವರೆಗೆ ಕಾದು ನೋಡಬೇಕು ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು