ಬೆಂಗಳೂರು.ಆ,28
ಖಾದ್ಯ ವಸ್ತುಗಳ ತಯಾರಿಕೆಯಲ್ಲಿ ಮನುಷ್ಯನ ದೇಹದ ಮೇಲೆ ಗಂಭೀರ ಪರಿಣಾಮ ಬೀರುವ ರಾಸಾಯನಿಕ ಬಳಕೆ ಕ್ರಮದ ವಿರುದ್ಧ ಸಮರ ಸಾರಿರುವ ರಾಜ್ಯ ಸರ್ಕಾರ ಇದೀಗ cಗುಣಮಟ್ಟ ಪರೀಕ್ಷೆಗೆ ಮುಂದಾಗಿದೆ.
ಕಾಟನ್ ಕ್ಯಾಂಡಿ, ಕಬಾಬ್ ಗೋಬಿಮಂಚೂರಿ ಮೊದಲಾದ ತಿನಿಸುಗಳಲ್ಲಿ ಕೃತಕ ಬಣ್ಣ ಬಳಸುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಅಜಿನೋ ಮೋಟೋ ಸೇರಿದಂತೆ ಕೆಲವು ರಾಸಾಯನಿಕಗಳನ್ನು ಬಳಸದಂತೆ ನಿಷೇಧ ವಿಧಿಸಿದೆ.
ಹಳದಿ ಮತ್ತು ಕೇಸರಿ ಮಿಶ್ರಿತ ಬಣ್ಣಗಳನ್ನು ಕೆಲವು ಖಾದ್ಯಗಳ ತಯಾರಿಕೆಯಲ್ಲಿ ಬಳಸುತ್ತಿದ್ದು ಅವುಗಳ ಸೇವನೆಯಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಪ್ರಯೋಗಾಲಯದ ವರದಿಯನ್ನು ಆಧರಿಸಿ ಇವುಗಳ ಮೇಲೆ ಆರೋಗ್ಯ ಇಲಾಖೆ ನಿಷೇಧ ವಿಧಿಸಿದೆ.
ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೆಲವು ಪನೀರ್ ,ಚೀಸ್ ಮತ್ತು ಕೋವಾದ ಕೆಲವು ಮಾದರಿಗಳನ್ನು ಸಂಗ್ರಹಿಸಿ ಅವುಗಳ ಗುಣಮಟ್ಟದ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಇವುಗಳ ವರದಿ ಬಂದ ನಂತರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಆರೋಗ್ಯ ಇಲಾಖೆ ಮುಂದಾಗಿದೆ.
ಆಹಾರ ವಸ್ತುಗಳ ಗುಣಮಟ್ಟ ಕುರಿತಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಆಹಾರ ತಜ್ಞರೊಂದಿಗೆ ಸಮಾಲೋಚನೆ ನಡೆಸಿದರು.
ಇದಾದ ಬಳಿಕ ಇಲಾಖೆ ಕೈಗೊಂಡಿರುವ ಕ್ರಮಗಳನ್ನು ಸುದ್ದಿಗಾರರಿಗೆ ವಿವರಿಸಿದ ಅವರು ಸೇವಿಸಲು ಯೋಗ್ಯವಾದ ಆಹಾರದ ಗುಣಮಟ್ಟದ ಕುರಿತಂತೆ ಕೆಲವೊಂದು ಮಾನದಂಡಗಳನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗಿದೆ ಅವುಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು ತಪ್ಪಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಇನ್ನು ಕೆಲವು ಹೋಟೆಲ್ ಗಳಲ್ಲಿ ಅಸುರಕ್ಷಿತವಾದ ರಾಸಾಯನಿಕಗಳನ್ನು ಆಹಾರ ವಸ್ತುಗಳ ತಯಾರಿಕೆಯಲ್ಲಿ ಬಳಸಲಾಗುತ್ತಿದೆ ಎಂಬ ವರದಿಗಳಿವೆ ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಆಗಸ್ 30 ಮತ್ತು 31 ರಂದು ಹೋಟೆಲ್ ಗಳಿಗೆ ಭೇಟಿ ನೀಡಿ ಅಲ್ಲಿ ತಯಾರಿಸಲಾಗುವ ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನಿಸಲಾಗುವುದು ಅದೇ ರೀತಿ ಮಾಂಸ ಮತ್ತು ಮೀನು ಮಾರುಕಟ್ಟೆಗೂ ಭೇಟಿ ನೀಡಿ ಅವುಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು.