ಕೋಲಾರ: ನಗರದಲ್ಲಿ ಹಲವು ವರುಷಗಳಿಂದ ಮೀಟರ್ ಬಡ್ಡಿ ದಂಧೆಯನ್ನು ನಡೆಸುತ್ತಾ ಅಕ್ರಮ ಆಸ್ತಿ ಹಾಗು ಕೋಟ್ಯಾಂತರ ರೂಪಾಯಿ ಹಣ ಸಂಪಾದನೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಕಳೆದ ರಾತ್ರಿ ಗಲ್ಫೇಟೆ ಪೋಲೀಸರು ಬಂಧಿಸಿ ಆತನಿಂದ ಅಪಾರ ಮೊತ್ತದ ದಾಖಲೆಗಳು, ಖಾಲಿ ಚೆಕ್ ಗಳುˌ ಆಂಡಿಮೆಂಟ್ ಪೇಪರ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಕಾರಂಜಿಕಟ್ಟೆಯ ನಿವಾಸಿ ಶಿವಕುಮಾರ್ ಬಂಧಿತ ಆರೋಪಿಯಾಗಿದ್ದು ಈತ ಕಾರಂಜಿ ಕಟ್ಟೆಯಲ್ಲಿ ಐಷಾರಾಮಿ ಮನೆ ಹಾಗೂ ಸುಣಕಲ್ಲು ಪೇಟೆಯಲ್ಲಿ ಒಂದಷ್ಟು ಮನೆಗಳನ್ನು ಹೊಂದಿದ್ದು ಈತ ಹಲವು ವರುಷಗಳಿಂದ ಮೀಟರ್ ಬಡ್ಡಿ ದಂಧೆಯಲ್ಲಿ ತೊಡಗಿಕೊಂಡು ವಾರಕ್ಕೆ ಹಾಗೂ ಹದಿನೈದು ದಿನಕ್ಕೆ ಇಪ್ಪತ್ತು ಪರ್ಸೆಂಟ್ ಬಡ್ಡಿದರ ದಲ್ಲಿ ಬಡ್ಡಿಗೆ ನಿಡಿ ಹಣಕ್ಕಾಗಿ ಹಿಂಸಿಸುತ್ತಿದ್ದನೆನ್ನಲಾಗಿದೆ.
ಈತನ ಈ ರೀತಿಯ ಹಿಂಸೆ ತಾಳಲಾರದೇ ಕಾರ್ತಿಕ್ ಎಂಬುವರು ದಾಖಲೆ ಸಮೇತ ಜಿಲ್ಲಾ ರಕ್ಷಣಾಧಿಕಾರಿ ದೇವರಾಜ್ ಅವರಿಗೆ ದೂರು ನೀಡಿದ್ದು ಅಡಿಷನಲ್ ಎಸ್ಪಿ ಸಚಿನ್ ಘೋರ್ಪಡೆ ತಮ್ಮ ತಂಡದೊಂದಿಗೆ ರಾತ್ರಿ ಶಿವ ಕುಮಾರ್ ಹಾಗು ಈತನೊಂದಿಗಿದ್ದ ಇಬ್ಬರನ್ನು ಬಂಧಿಸಿದ್ದಾರೆನ್ನಲಾಗಿದೆ.
ದಂಧೆಕೋರ ಶಿವಕುಮಾರ್ ನನ್ನು ಬಂಧಿಸಿ ಹಲವು ದಾಖಲೆಗಳು, ಖಾಲಿ ಚೆಕ್ ಗಳ ಜೊತೆಗೆ ಮೊಬೈಲ್ ನ್ನು ವಶಕ್ಕೆ ಪಡೆದುಕೊಳ್ಳುತ್ತಿರುವಂತೆಯೇ ಇತ್ತ ಆರೋಪಿಯ ಸಹೋದರಿ ಕೆಲವು ಮಹತ್ವ ದಾಖಲೆಗಳೊಂದಿಗೆ ಪರಾರಿಯಾಗಿದ್ದು ಆಕೆಯ ಶೋಧ ಕಾರ್ಯ ಮುಂದುವರೆದಿದೆ.
ಆರೋಪಿ ಶಿವಕುಮಾರ್ ನನ್ನು ಗಲ್ ಪೇಟೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ರಾತ್ರಿಯೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆಂದು ಮೂಲಗಳು ತಿಳಿಸಿವೆ. ಈತನ ಬಂಧನವಾಗುತ್ತಿದ್ದಂತೆಯೇ ಇದೇ ರೀತಿ ಮೀಟರ್ ಬಡ್ಡಿ ದಂಧೆಯಲ್ಲಿ ತೊಡಗಿಸಿಕೊಂಡಿರುವ ಒಂದಷ್ಟು ಮಾಫಿಯಾ ದೊರೆಗಳು ನಮ್ಮ ಬುಡಕ್ಕೆ ಯಾವಾಗ ಬಿಸಿ ನೀರು ಹರಿಯುತ್ತದೆಯೋ ಎಂಬ ಆತಂಕದಲ್ಲಿದ್ದಾರೆನ್ನಲಾಗಿದ್ದು ರಕ್ಷಣಾಧಿಕಾರಿ ದೇವರಾಜ್ ರವರ ಈ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಕಾರಣವಾಗಿದೆ.