ಬೆಂಗಳೂರು,ಅ.16-
ಮನೆಯ ನೆಲಮಹಡಿಯ ಕಿಟಕಿ ಗ್ರಿಲ್ ಮುರಿದು ಒಳನುಗ್ಗಿ ಕನ್ನ ಕಳವು ಮಾಡಿದ್ದ ಇಬ್ಬರು ಖತರ್ನಾಕ್ ಕ್ಯಾಬ್ ಚಾಲಕರನ್ನು ಬಂಧಿಸಿರುವ ಬೆಂಗಳೂರಿನ ವಿವಿಪುರಂ ಠಾಣೆ ಪೊಲೀಸರು ಬಂಧಿತರಿಂದ 1.22 ಕೋಟಿ 78 ಸಾವಿರ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಮಹಾರಾಷ್ಟ್ರದ ಕೊಲ್ಲಾಪುರದ ಕೇಶವಪಾಟೀಲ್ (32)ಹಾಗೂ ಸತಾರದ ನಿತಿನ್ ಉತ್ತಮ್ ಕಾಳೆ(31) ಎಂದು ಗುರುತಿಸಲಾಗಿದೆ.
ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಬಂಧಿತ ಆರೋಪಿಗಳಿಂದ 1.22 ಕೋಟಿ 78 ಸಾವಿರ ಮೌಲ್ಯದ 1 ಕೆ.ಜಿ 570 ಗ್ರಾಂ ಚಿನ್ನಾಭರಣಗಳು ಮತ್ತು ವಜ್ರದ ಆಭರಣಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಚಾಮರಾಜಪೇಟೆಯ ವ್ಯಕ್ತಿಯೊಬ್ಬರು ಕಳೆದ ಸೆ.8 ರಂದು ವ್ಯವಹಾರದ ನಿಮಿತ್ತ ಕೇರಳಕ್ಕೆ ಹೋದರೆ,ಮನೆಯಲ್ಲಿದ್ದ ಪತ್ನಿ ಹಾಗೂ ತಂದೆಯವರು ಅದೇ ದಿನ ಮಗಳ ಮನೆಗೆ ಹೋಗಿದ್ದಾಗ ಮನೆಯ ಸೆಲ್ಲರ್ ನಲ್ಲಿನ ಕಿಟಕಿಯ ಗ್ರಿಲ್ ಮುರಿದು ಪ್ರವೇಶಿಸಿ ಮನೆಯ ಕೊಠಡಿಯ ಬೀರುವಿನಲ್ಲಿಟ್ಟಿದ್ದ ಸುಮಾರು 2 ಕೆ.ಜಿ ಚಿನ್ನ ಮತ್ತು ವಜ್ರದ ಆಭರಣಗಳನ್ನು ಕಳವು ಮಾಡಲಾಗಿತ್ತು.
ಈ ಸಂಬಂಧ ನೀಡಿದ ದೂರು ಆಧರಿಸಿ ಪ್ರಕರಣವನ್ನು ದಾಖಲಿಸಿದ ವಿ.ವಿ.ಪುರಂ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಖಚಿತ ಮಾಹಿತಿಯನ್ನು ಕಲೆಹಾಕಿ ಹಿಂದೆ ಕಳವುಗೊಂಡ ಮನೆಯಲ್ಲಿ ಕಾರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಸೆ.31ರಂದು ಮಹಾರಾಷ್ಟ್ರದ ಸತಾರ ಜಿಲ್ಲೆಯ ಗೋಂದಲಿ ಗ್ರಾಮದಲ್ಲಿ ಕಾರ್ಯಾಚರಣೆ ಕೈಗೊಂಡು ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. .
ಬಂಧಿತರಲ್ಲಿ ಓರ್ವ ಜಕ್ಕೂರಿನಲ್ಲಿರುವ ತನ್ನ ಅಕ್ಕನ ಮನೆಯಲ್ಲಿ ಕಳವು ಮಾಡಿದ್ದ ಸುಮಾರು 652 ಗ್ರಾಂ ಚಿನ್ನದ ಆಭರಣಗಳು ಮತ್ತು ವಜ್ರದ ಆಭರಣಗಳನ್ನು ಬಚ್ಚಿಟ್ಟಿದ್ದು ಅವುಗಳನ್ನು ಜಪ್ತಿ ಮಾಡಲಾಗಿದೆ. ಮತ್ತೋರ್ವ ಆರೋಪಿಯು ಮಹಾರಾಷ್ರ್ಟದ ನವಿ ಮುಂಬೈ ನಲ್ಲಿರುವ ಆತನ ಅಕ್ಕನ ಮನೆಯಲ್ಲಿ ಹಾಗೂ ಕೊಲ್ಲಾಪುರದಲ್ಲಿನ ಸೊಂಡೊಲಿ ಗ್ರಾಮದ ಸ್ನೇಹಿತನ ಮನೆಯಲ್ಲಿ ಕಳವು ಮಾಡಿದ್ದ ಚಿನ್ನಾಭರಣಗಳನ್ನು ಇಟ್ಟಿರುವುದಾಗಿ ತಿಳಿಸಿದ್ದು ಅಲ್ಲಿಂದ ಸುಮಾರು 354 ಗ್ರಾಂ ಚಿನ್ನದ ಆಭರಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಆರೋಪಿಗಳಿಬ್ಬರು ಕೆಲಸದ ವೇಳೆ ಪರಿಚಯವಾಗಿ ಸ್ನೇಹಿತರಾಗಿದ್ದು,ಹಣದಾಸೆಗೆ ಕಳ್ಳತನ ಮಾಡಿ ಪರಾರಿಯಾಗಿದ್ದರು.ಈ ಕಾರ್ಯಾಚರಣೆಯನ್ನು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ ಭರಮಪ್ಪ ಜಗಳಸರ್, ಎಸಿಪಿ ಶಾಮಿದ್ ಬಾಷಾ ರವರ ನೇತೃತ್ವದಲ್ಲಿ, ವಿ.ವಿ.ಪುರಂ ಪೊಲೀಸ್ ಇನ್ಸ್‌ಪೆಕ್ಟರ್ ಟಿ.ಎಂ.ಧರ್ಮೇಂದ ಮತ್ತವರ ಸಿಬ್ಬಂದಿ ಕೈಗೊಂಡಿದ್ದು ತಂಡಕ್ಕೆ ನಗದು ಬಹುಮಾನವನ್ನು ಕಮೀಷನರ್ ಘೋಷಿಸಿದರು.
Previous Article2024 ರ ನೊಬೆಲ್ ಪ್ರಶಸ್ತಿ ವಿಜೇತರು ಇವರೇ ನೋಡಿ
Next Article ಕರ್ನಾಟಕದ ಬೈ ಎಲೆಕ್ಷನ್ ಗೆ ಮುಹೂರ್ತ ಫಿಕ್ಸ್