ಬೆಂಗಳೂರು,ಅ.22:
ಬೆಂಗಳೂರು ಮೈಸೂರು ಹಾಸನ ಮಡಿಕೇರಿ, ಮಂಗಳೂರು ಬೆಳಗಾವಿ ಹುಬ್ಬಳ್ಳಿ ಧಾರವಾಡ ಸೇರಿದಂತೆ ರಾಜ್ಯದ ಹಲವಡೆ ಅಕ್ರಮವಾಗಿ ಬಾಂಗ್ಲಾದೇಶದ ನಿವಾಸಿಗಳು ವಾಸ್ತವ್ಯ ಹೂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಅವರ ಪತ್ತೆಗಾಗಿ ರಾಜ್ಯ ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ.
ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಗಡಿಯ ಮೂಲಕ ಭಾರತ ದೇಶದೊಳಗೆ ನುಸುಳಿರುವ ಬಾಂಗ್ಲಾದೇಶದ ಪ್ರಜೆಗಳು ಇಲ್ಲಿನ ತೋಟಗಳು ಕಬ್ಬಿನ ಗದ್ದೆ ಕಾಫಿ ತೋಟ ಮತ್ತು ಕಟ್ಟಡ ನಿರ್ಮಾಣ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.
ಮಧ್ಯವರ್ತಿಗಳ ಮೂಲಕ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ನಿವಾಸಿಗಳು ಎಂಬ ರೀತಿಯಲ್ಲಿ ಆಧಾರ್ ಕಾರ್ಡ್ ಗಳನ್ನು ಮಾಡಿಸಿಕೊಂಡು ಕರ್ನಾಟಕದ ಹಲವು ಪ್ರಮುಖ ನಗರಗಳಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂಬ ಖಚಿತ ಮಾಹಿತಿ ಆದರಿಸಿ ಇದೀಗ ಪೊಲೀಸರು ಇವರ ಪತ್ತೆಗಾಗಿ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ.
ಕಾಫಿ ತೋಟ ಕಬ್ಬಿನ ಗದ್ದೆ ಮತ್ತು ಕಟ್ಟಡ ನಿರ್ಮಾಣ ಸ್ಥಳಗಳಿಗೆ ತೆರಳಿರುವ ಪೊಲೀಸರು ಅಲ್ಲಿರುವ ಕಾರ್ಮಿಕರ ವಿವರಗಳನ್ನು ಸಂಗ್ರಹಿಸಲು ಮುಂದಾಗಿದ್ದಾರೆ ಕೆಲವು ಕಡೆ, ಬಾಂಗ್ಲಾ ದೇಶದ ನಿವಾಸಿಗಳು ಅಲೆಮಾರಿಗಳಂತೆ ವಾಸ್ತವ್ಯ ಹೂಡುತ್ತಿದ್ದು ಅವರ ಪತ್ತೆ ಪೊಲೀಸರಿಗೆ ಸವಾಲಾಗಿದೆ.
ಬಾಂಗ್ಲಾದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ನಿರುದ್ಯೋಗ ಕಾಡುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಜನತೆ ಗಡಿಯೊಳಗೆ ಅಕ್ರಮವಾಗಿ ನುಸುಳಿ ದಕ್ಷಿಣ ಭಾರತದತ್ತ ಬರುತ್ತಿದ್ದಾರೆ ಎಂಬ ಮಾಹಿತಿಯನ್ನು ಕೇಂದ್ರ ಗುಪ್ತದಳ ರವಾನಿಸಿದೆ
ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿರುವ ಕರ್ನಾಟಕದ ಪೊಲೀಸರು ಉಡುಪಿ ಜಿಲ್ಲೆಯಲ್ಲಿ ಹತ್ತು ಮಂದಿ, ಹಾಸನದಲ್ಲಿ ಮೂವರು ಹಾಗೂ ಶಿವಮೊಗ್ಗದಲ್ಲೂ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಗಳನ್ನು ಬಂಧಿಸಿದ್ದಾರೆ
ಹಾಸನದಲ್ಲಿ ಇದೀಗ ಮತ್ತೆ ಮೂವರು ಬಾಂಗ್ಲಾ ಪ್ರಜೆಗಳನ್ನು ಪತ್ತೆ ಮಾಡಿ ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಮಾಲ್ ಅಲಿ, ಫಾರೂಕ್ ಅಲಿ, ಅಕ್ಕಲ್ ಹೊಕ್ಯು ಬಂಧಿತ ಬಾಂಗ್ಲಾದೇಶದ ಪ್ರಜೆಗಳು.
ನಗರದ 80 ಅಡಿ ರಸ್ತೆಯ ಗದ್ದೆಹಳ್ಳದ ನಾಲ್ಕನೇ ಅಡ್ಡ ರಸ್ತೆಯಲ್ಲಿರುವ ಜುಬೇರ್ ಮನೆ ಕಟ್ಟಡ ಕಾಮಗಾರಿ ಕೆಲಸದಲ್ಲಿ ನಿರತರಾಗಿದ್ದರು.
ಅದೇ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಒಬ್ಬ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದರೆ, ಉಳಿದ ಇಬ್ಬರು ಗಾರೆ ಕೆಲಸ ಮಾಡಿಕೊಂಡಿದ್ದರು.
ಖಚಿತವಾದ ಮಾಹಿತಿಯನ್ನು ಆಧರಿಸಿ ಪರಿಶೀಲನೆ ಕೈಗೆತ್ತಿಕೊಂಡಾಗ 80 ಅಡಿ ರಸ್ತೆಯಲ್ಲಿರುವುದು ಪತ್ತೆಯಾಗಿದೆ. ಮೂವರನ್ನು ವಶಕ್ಕೆ ಪಡೆದಿರುವ ಪೊಲೀಸರು ಪೆನ್ನನ್ ಮೊಹಲ್ಲಾ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ ನಂತರ ಎಫ್‌ಐಆರ್ ದಾಖಲಿಸಿದ್ದಾರೆ.
ಮೂವರು ಬಾಂಗ್ಲಾ ಪ್ರಜೆಗಳಾಗಿದ್ದು ಪಶ್ಚಿಮ ಬಂಗಾಳದ ವಿಳಾಸ ಹೊಂದಿರುವ ಆಧಾರ್ ಕಾರ್ಡ್ ಹೊಂದಿದ್ದಾರೆ. ಆದರೆ ಅದು ನಕಲಿ ಎಂಬುದು ದೃಢಪಟ್ಟಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.