ಬೆಂಗಳೂರು:
ರಾಜ್ಯದಲ್ಲಿ ಪರಿಸರಸ್ನೇಹಿ ಇಂಧನ ಕ್ಷೇತ್ರದಲ್ಲಿ ಹೂಡಿಕೆ ಮತ್ತು ಉತ್ಪಾದನೆಗೆ ಯಥೇಚ್ಛ ಅವಕಾಶಗಳಿವೆ ಹೀಗಾಗಿ ಈ ವಲಯದ ಉತ್ತೇಜನಕ್ಕಾಗಿ ಇಂಧನ ಮತ್ತು ಕೈಗಾರಿಕೆ ಇಲಾಖೆ, ಜೊತೆಯಾಗಿ ಪರಿಸರಸ್ನೇಹಿ ಇಂಧನ ನೀತಿಯೊಂದನ್ನು ರೂಪಿಸಲು ಮುಂದಾಗಿವೆ
ಈ ವಲಯದಲ್ಲಿ ಹೂಡಿಕೆ ಹೆಚ್ಚಾಗಿ ಉದ್ಯೋಗ ಸೃಷ್ಟಿಯಾಗಬೇಕಿದೆ ಇದನ್ನು ಬೃಹತ್ ಕೈಗಾರಿಕೆ ಇಲಾಖೆ ಮತ್ತು ಇಂಧನ ಇಲಾಖೆ ಎರಡೂ ಜತೆಗೂಡಿ ಸಾಧಿಸಬೇಕಾಗಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ
ಈ ದೃಷ್ಟಿಯಿಂದ ಇಂಧನ ಸಚಿವ ಕೆ ಜೆ ಜಾರ್ಜ್ ಜತೆ ಉದ್ಯಮಿಗಳು ಮತ್ತು ಆಸಕ್ತ ಹೂಡಿಕೆದಾರರ ಸಭೆಯನ್ನು ಸದ್ಯದಲ್ಲೇ ಏರ್ಪಡಿಸಲಾಗುವುದು ಎಂದು ಹೇಳಿದ್ದಾರೆ.
ಕೈಗಾರಿಕಾ ಇಲಾಖೆ ಆಯೋಜಿಸಿದ್ದ ಗ್ರೀನ್ ಎನರ್ಜಿ ಮತ್ತು ಕೋರ್ ಮ್ಯಾನುಫ್ಯಾಕ್ಚರಿಂಗ್ ವಲಯಗಳಿಗೆ ಸಂಬಂಧಪಟ್ಟ ಸರಕಾರದ ವಿಷನ್ ಗ್ರೂಪ್ ಗಳ ಚೊಚ್ಚಲ ಸಭೆಯಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಪರಿಣತ ಉದ್ಯಮಿಗಳು ಗ್ರೀನ್ ಎನರ್ಜಿ ಕ್ಷೇತ್ರದಲ್ಲಿರುವ ಸಾಧ್ಯತೆ, ಅಗತ್ಯ, ಬೇಡಿಕೆ, ನೀತಿ ನಿರೂಪಣೆ, ರಿಯಾಯಿತಿ ಇತ್ಯಾದಿಗಳನ್ನು ಕುರಿತು ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ಈ ವಲಯವನ್ನು ಬೆಳೆಸಬೇಕೆಂಬುದು ಸರಕಾರದ ಮುಕ್ತ ನಿಲುವಾಗಿದೆ. ಮುಂದಿನ ಹೆಜ್ಜೆಯಾಗಿ ಇಂಧನ ಸಚಿವರ ಜತೆ ಮಾತುಕತೆ ನಡೆಸಲಾಗುವುದು. ಏಕೆಂದರೆ, ಇಂಧನ ಇಲಾಖೆ ಇದರಲ್ಲಿ ಪ್ರಮುಖ ಪಾಲು ಹೊಂದಿದೆ ಎಂದು ತಿಳಿಸಿದರು.
`ಅವಾಡಾ’ ಕಂಪನಿಯ ಸಿಇಒ ಕಿಶೋರ್ ನಾಯರ್ ಮಾತನಾಡಿ, `ಗ್ರೀನ್ ಹೈಡ್ರೋಜನ್ ಉತ್ಪಾದನೆಗಾಗಿ ನಾವು ರಾಜ್ಯ ಸರಕಾರದ ಜತೆ 45 ಸಾವಿರ ಕೋಟಿ ರೂ. ಹೂಡಿಕೆಯ ಒಡಂಬಡಿಕೆ ಮಾಡಿಕೊಂಡಿದ್ದೇವೆ. ಸರಕಾರವು ಸೂಕ್ತ ಪ್ರೋತ್ಸಾಹಕ ಭತ್ಯೆ ಮತ್ತು ನೀತಿ ಜಾರಿಗೆ ತಂದರೆ ನಾವು ಎಲೆಕ್ಟ್ರೋಲೈಟ್ ಮತ್ತು ಬ್ಯಾಟರಿ ಉತ್ಪಾದನೆಯ ಕಡೆಗೆ ಗಮನ ಹರಿಸಬಹುದು. ಜತೆಗೆ ರಾಜ್ಯದಲ್ಲಿ ಅಪಾರ ಪ್ರಮಾಣದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಆದ್ದರಿಂದ, ಪರಿಸರಸ್ನೇಹಿ ಮೆಥನಾಲ್ ಮತ್ತು ಪರಿಸರಸ್ನೇಹಿ ಜಲಜನಕ(ಗ್ರೀನ್ ಹೈಡ್ರೋಜನ್)ದ ಉತ್ಪಾದನೆಗೂ ಆದ್ಯತೆ ಕೊಡಬಹುದು. ರಾಜಾಸ್ಥಾನ ಮತ್ತು ಮಹಾರಾಷ್ಟ್ರ ಈಗಾಗಲೇ ಈ ಸಂಬಂಧ ನೀತಿಗಳನ್ನು ಜಾರಿಗೆ ತಂದಿವೆ’ ಎಂದರು.
ಇದಕ್ಕೆ ಸ್ಪಂದಿಸಿದ ಸಚಿವರು, `ಉದ್ಯಮಿಗಳು 5-6 ಮಿಲಿಯನ್ ಡಾಲರ್ ಹಣ ಮತ್ತು 5 ಗಿಗಾವ್ಯಾಟ್ ವಿದ್ಯುತ್ತಿನ ಅಗತ್ಯದ ಬಗ್ಗೆ ಗಮನ ಸೆಳೆದಿದ್ದಾರೆ. ಜೊತೆಗೆ, ಇದಕ್ಕೆ ಮಂಗಳೂರು ಬಂದರಿನ ಸುತ್ತಮುತ್ತಲಿನ 20 ಕಿ.ಮೀ. ಪ್ರದೇಶ ಸೂಕ್ತ ತಾಣವಾಗಿದೆ ಎಂದು ತಿಳಿಸಿದ್ದಾರೆ. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಲಿದೆ. ಇದನ್ನು ಈಡೇರಿಸಿದರೆ ಪರಿಸರಸ್ನೇಹಿ ಅಮೋನಿಯಾ ಮತ್ತು ಜಲಜನಕಗಳ ಉತ್ಪಾದನೆ ಸುಗಮವಾಗಲಿದೆ. ಈ ಬಗ್ಗೆ ಸರಕಾರವು ಸಕಾರಾತ್ಮಕ ಭಾವನೆ ಹೊಂದಿದೆ’ ಎಂದು ನುಡಿದರು.
ಇದಲ್ಲದೆ, ರಾಜ್ಯದಲ್ಲಿ `ಗ್ರೀನ್ ಇಂಡಸ್ಟ್ರಿಯಲ್ ಪಾರ್ಕುಗಳನ್ನು ಸ್ಥಾಪಿಸಿದರೆ ಈ ವಲಯದಲ್ಲಿ ಹೂಡಿಕೆಯನ್ನು ಆಕರ್ಷಿಸಬಹುದು ಎನ್ನುವ ಸಲಹೆಯೂ ಬಂದಿದೆ. ನೆರೆಯ ಆಂಧ್ರಪ್ರದೇಶದಲ್ಲಿ ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪರಿಣಾಮಕಾರಿ ನೀತಿ ಇರುವುದು ಗೊತ್ತಾಗಿದೆ. ಇಂತಹ ಕೈಗಾರಿಕೆಗಳಿಗೆ ನೀರು ಮತ್ತು ವಿದ್ಯುತ್ತಿನ ಪೂರೈಕೆ ಸುಗಮವಾಗಿ ಇರಬೇಕಾಗುತ್ತದೆ. ಇದಕ್ಕಾಗಿಯೇ ರಾಜ್ಯ ಸರಕಾರವು ಕೈಗಾರಿಕಾ ಪ್ರದೇಶಗಳಿಗೆ ನದೀಮೂಲಗಳಿಂದ ಅಗತ್ಯ ಪ್ರಮಾಣದ ನೀರನ್ನು ಪೂರೈಸುವ ಉಪಕ್ರಮವನ್ನು ಈಗಾಗಲೇ ಘೋಷಿಸಿದೆ. ಪರಿಸರಸ್ನೇಹಿ ಜಲಜನಕ ಮತ್ತು ಸೌರಕೋಶ ಉತ್ಪಾದನಾ ಘಟಕಗಳಿಗೆ ಈಗಾಗಲೇ ಜಿಎಸ್ಟಿಯಲ್ಲಿ ಸಾಕಷ್ಟು ರಿಯಾಯಿತಿಗಳನ್ನು ಕೊಡಲಾಗುತ್ತಿದೆ ಎಂದು ವಿವರಿಸಿದ್ದಾರೆ.
Previous Articleಬಾಂಗ್ಲಾದೇಶಿಯರ ಅಡಗುದಾಣವಾದ ಕರ್ನಾಟಕ.
Next Article ನಟ, ರಾಜಕಾರಣಿ ಸಿ.ಪಿ. ಯೋಗೇಶ್ವರ್