(ಚುನಾವಣೆ ಸಮೀಕ್ಷೆ
ಆರ್.ಎಚ್.ನಟರಾಜ್, ಹಿರಿಯ ಪತ್ರಕರ್ತ.)
ಬೊಂಬೆ ನಗರಿ ಚನ್ನಪಟ್ಟಣ ರಾಮನಗರ ಜಿಲ್ಲೆಯ ಅತ್ಯಂತ ಪ್ರಮುಖ ನಗರ ರಾಜಕೀಯವಾಗಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಈ ಕ್ಷೇತ್ರವನ್ನು ಜನತಾ ಪರಿವಾರ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು ಆದರೆ ಮತ್ತೆ ಸಾದತ್ ಅಲಿ ಖಾನ್ ಅವರು ಈ ಕ್ಷೇತ್ರವನ್ನು ಕಾಂಗ್ರೆಸ್ ತೆಕ್ಕೆಗೆ ಬರುವಂತೆ ಮಾಡಿದ್ದರು.
ಆದರೆ 1999ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಉದ್ಯಮಿ ಹಾಗೂ ಚಿತ್ರನಟ ಕಾಂಗ್ರೆಸ್ ಟಿಕೆಟ್ ಸಿಗದೇ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಗಳಿಸುವ ಮೂಲಕ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ರಾಜಕೀಯ ಚಿತ್ರಣವನ್ನು ಬದಲಾಯಿಸಿದರು. ಈ ಕ್ಷೇತ್ರವನ್ನು ಪಕ್ಷರಾಜಕಾರಣದ ಮುಷ್ಟಿಯಿಂದ ಹೊರಗೆಳೆದು ವ್ಯಕ್ತಿಗತ ರಾಜಕಾರಣದ ಅಖಾಡವಾಗಿ ಪರಿವರ್ತಿಸಿದರು.
ಅಂದಿನಿಂದ ಇಂದಿನವರೆಗೆ ಈ ಕ್ಷೇತ್ರ ರಾಜಕೀಯ ಪಕ್ಷದ ಬದಲಾಗಿ ವ್ಯಕ್ತಿ ಪ್ರತಿಷ್ಠೆಯ ಅಖಾಡವಾಗಿ ಪರಿಣಮಿಸಿದೆ. ಅದರಲ್ಲೂ ಸಿಪಿ ಯೋಗೇಶ್ವರ್ ಈ ಕ್ಷೇತ್ರದ ಅತ್ಯಂತ ಪ್ರಭಾವಿ ವ್ಯಕ್ತಿ ಎನಿಸಿಕೊಂಡರೆ ಇವರಿಗೆ ತೀವ್ರ ಪೈಪೋಟಿ ನೀಡುತ್ತಿರುವುದು ಜೆಡಿಎಸ್ ನಾಯಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ.
ಚನ್ನಪಟ್ಟಣ ಕ್ಷೇತ್ರದಲ್ಲಿ ಯೋಗೇಶ್ವರ್ ಪ್ರಾಬಲ್ಯ ಸಾಧಿಸುತ್ತಿದ್ದಂತೆ ಇಲ್ಲಿ ಕಾಂಗ್ರೆಸ್ ತನ್ನ ವರ್ಚಸ್ಸು ಕಳೆದುಕೊಂಡಿತು. ಯೋಗೇಶ್ವರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ ಸಮಯದಲ್ಲಿ ದಾಖಲೆ ಅಂತರದೊಂದಿಗೆ ಕಾಂಗ್ರೆಸ್ ಜಯಗಳಿಸಿದೆ. ಯೋಗೇಶ್ವರ್ ಕಾಂಗ್ರೆಸ್ ಬಿಟ್ಟ ಸಮಯದಲ್ಲಿ ಪಕ್ಷದ ಸಾಧನೆ ಶೋಚನೀಯವಾಗಿದೆ.
ಈ ಬಾರಿ ವಿಭಿನ್ನ ರೀತಿಯ ಚುನಾವಣೆ ನಡೆಯುತ್ತಿದೆ ಯೋಗೇಶ್ವರ್ ಜೆಡಿಎಸ್ ನ ದೊಡ್ಡ ಕುಟುಂಬದ ಮೂರನೇ ವ್ಯಕ್ತಿಯ ವಿರುದ್ಧ ಸೆಣೆಸುತ್ತಿದ್ದಾರೆ. ಮೊದಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ವಿರುದ್ಧ ಕಣಕ್ಕಿಳಿದು ಅವರನ್ನು ಮಣಿಸಿದ ಯೋಗೇಶ್ವರ್ ನಂತರ ಕುಮಾರಸ್ವಾಮಿ ವಿರುದ್ಧ ಸ್ಪರ್ಧೆ ಮಾಡಿ ಸೋಲು ಅನುಭವಿಸಿದ್ದಾರೆ ಇದೀಗ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸ್ಪರ್ಧೆ ಮಾಡುತ್ತಿದ್ದಾರೆ.
ಕ್ಷೇತ್ರದಲ್ಲಿ ಒಟ್ಟು 2,17,573 ಮತದಾರರಿದ್ದಾರೆ ಇದರಲ್ಲಿ ಒಕ್ಕಲಿಗ ಸಮುದಾಯಕ್ಕೆ ಸೇರಿದ 1,05,000, ಮತದಾರರಿದ್ದರೆ,ಪರಿಶಿಷ್ಟ ಜಾತಿಯ 40,000, ಮುಸ್ಲಿಂ ಸಮುದಾಯದ 35,000, ಲಿಂಗಾಯತರ 11,000, ಹಾಗೂ ಕುರುಬ ಸಮಾಜದ 8,000 ಮಾತುಗಳಿವೆ.ಇತರೆ ವರ್ಗದ 31,000 ಮತಗಳಿವೆ. ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿರುವುದು ಈ ಕ್ಷೇತ್ರದ ವೈಶಿಷ್ಟ್ಯ.
ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಸಮಯದಲ್ಲಿ ಯೋಗೇಶ್ವರ್ ಎರಡು ಬಾರಿ ಜೆಡಿಎಸ್ ನ ಎಂ ಸಿ ಅಶ್ವತ್ ಅವರನ್ನು ಮಣಿಸಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿದಾಗ ಎಂ ಸಿ ಅಶ್ವಥ್ ಎದುರು ಸೋಲು ಅನುಭವಿಸಿದ್ದಾರೆ.
2011ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ ಯೋಗೇಶ್ವರ್ ಜೆಡಿಎಸ್‌ನ ಸಿ.ಲಿಂ. ನಾಗರಾಜು ಅವರನ್ನು 17,803 ಮತಗಳ ಅಂತರದಿಂದ ಸೋಲಿಸಿದರು.
ಸಮಾಜವಾದಿ ಪಕ್ಷದಿಂದ ಕಣಕ್ಕಿಳಿದ ಯೋಗೇಶ್ವರ್ ಜೆಡಿಎಸ್ ನ ಅನಿತಾ ಕುಮಾರಸ್ವಾಮಿ ಅವರನ್ನು 8,000 ಮತಗಳ ಅಂತರದಿಂದ ಸೋಲಿಸಿದರು.
ನಂತರ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಯೋಗೀಶ್ವರ್ ಅವರನ್ನು ಕುಮಾರಸ್ವಾಮಿ ಸೋಲಿಸಿದರು.
ಇದೀಗ ಬದಲಾದ ಲೆಕ್ಕಾಚಾರದೊಂದಿಗೆ ಚನ್ನಪಟ್ಟಣದಲ್ಲಿ ಚುನಾವಣೆ ನಡೆಯುತ್ತಿದೆ. ಮುಸ್ಲಿಂ ಮತ್ತು ಕುರುಬ ಸಮುದಾಯ ಪ್ರಬಲವಾಗಿ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದೆ. ಈ ಹಿಂದೆ ಅಲ್ಪಸಂಖ್ಯಾತ ಸಮುದಾಯ ಜೆಡಿಎಸ್ ಬೆಂಬಲಕ್ಕೆ ನಿಲ್ಲುತ್ತಿತ್ತು. ಆದರೆ ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಪರಿಣಾಮ ಈ ಸಮುದಾಯ ಇದೀಗ ಬಿಜೆಪಿಯಂತೆ ಜೆಡಿಎಸ್ ನಿಂದ ದೂರ ಉಳಿದಿದೆ .
ಹೀಗಾಗಿ ಪರಿಶಿಷ್ಟ ಜಾತಿ ಇತರೆ ಹಿಂದುಳಿದ ಮತ್ತು ಒಕ್ಕಲಿಗ ಸಮುದಾಯದ ಹೆಚ್ಚಿನ ಮತಗಳನ್ನು ಪಡೆಯಲು ಜೆಡಿಎಸ್ ರಣತಂತ್ರ ರೂಪಿಸಿದೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡ ಚುನಾವಣೆ ತಂತ್ರಗಾರಿಕೆ ಹೆಣೆಯುವಲ್ಲಿ ಅತ್ಯಂತ ಚಾಣಾಕ್ಷರು ಹೀಗಾಗಿ ಕ್ಷೇತ್ರದಲ್ಲಿ ಮೇಲ್ನೋಟಕ್ಕೆ ಯೋಗೇಶ್ವರ್ ಪರ ವಾತಾವರಣ ಇದ್ದಂತೆ ಕಂಡು ಬಂದರೂ ಕೂಡ ರಾಜಕೀಯ ಚಾಣಾಕ್ಷರ ತಂತ್ರ ಇವರಿಗೆ ದೊಡ್ಡ ಸವಾಲಾಗಿದೆ.