ಬೆಂಗಳೂರು, ಡಿ.5:
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಅಕ್ರಮ ಆರೋಪ ಕುರಿತಂತೆ ತಮ್ಮ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲದ ಕ್ರಮ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜನವರಿ 25ಕ್ಕೆ ಮುಂದೂಡಿದೆ.
ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ಪೀಠ ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಆದೇಶ ನೀಡಿರುವ ಏಕ ಸದಸ್ಯ ಪೀಠದ ತೀರ್ಪಿಗೆ ತಡೆ ನೀಡಲು ನಿರಾಕರಿಸಿ ರಾಜ್ಯಪಾಲರಿಗೆ ನೋಟಿ ಜಾರಿಗೊಳಿಸಲು ಆದೇಶಿಸಿತು.
ಇದೇ ವೇಳೆ ವಿವಾದಿತ ಜಮೀನಿನ ಮೂಲ ಮಾಲೀಕ ಜೆ.ದೇವರಾಜು ಸಲ್ಲಿಸಿರುವ ಪ್ರತ್ಯೇಕ ಅರ್ಜಿಗೆ ಸಂಬಂಧಿಸಿದಂತೆ ಪ್ರತಿವಾದಿ ಸಿಬಿಐ ಮತ್ತು ಲೋಕಾಯುಕ್ತಕ್ಕೆ ನೋಟಿಸ್ ಜಾರಿಗೊಳಿಸಲು ಆದೇಶಿಸಲಾಗಿದ್ದು, ವಿಚಾರಣೆಯನ್ನು 2025ರ ಜನವರಿ 25ಕ್ಕೆ ಮುಂದೂಡಲಾಗಿದೆ.
ಜೆ.ದೇವರಾಜು ಪರ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ದುಷ್ಯಂತ ದವೆ ಹಾಜರಾಗಿ, “ನನ್ನನ್ನು ವಿನಾಕಾರಣ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ನನಗೀಗ 80 ವರ್ಷ. ನಾನೊಬ್ಬ ಬಡಪಾಯಿ. ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ ಅಥವಾ ಈ ಕ್ರಿಮಿನಲ್ ಆರೋಪಗಳ ಭಾಗೀದಾರನೂ ಅಲ್ಲ. ಏಕಸದಸ್ಯ ನ್ಯಾಯಪೀಠದ ತೀರ್ಪಿನಲ್ಲಿ ನನ್ನನ್ನೂ ಉಲ್ಲೇಖಿಸಲಾಗಿದೆ. ಅಂತೆಯೇ, ಈ ಪ್ರಕರಣವನ್ನು ಸಿಬಿಐ ಗೆ ಒಪ್ಪಿಸುವಂತೆ ಕೋರಿ ಏಕಸದಸ್ಯ ನ್ಯಾಯಪೀಠದ ಮುಂದೆ ಈಗಾಗಲೇ ಅರ್ಜಿಯೊಂದನ್ನು ಸಲ್ಲಿಸಲಾಗಿದೆ. ಈ ಅರ್ಜಿ ಇದೇ 10ಕ್ಕೆ ವಿಚಾರಣೆಗೆ ನಿಗದಿಯಾಗಿದೆ. ಇದಕ್ಕೆ ತಡೆ ನೀಡಬೇಕು. ಇಲ್ಲವಾದಲ್ಲಿ ಅನಗತ್ಯವಾಗಿ ನಾನು ತನಿಖೆಗೆ ಒಳಗಾಗಬೇಕಾಗುತ್ತದೆ” ಎಂದು ಮನವಿ ಮಾಡಿದರು.
ಆದರೆ ಮುಖ್ಯ ನ್ಯಾಯಮೂರ್ತಿಗಳು, “ಸದ್ಯ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡೋಣ. ಮುಂದೆ ನಿಮ್ಮ ಅಹವಾಲು ಪರಿಶೀಲನೆ ಮಾಡಲಾಗುವುದು” ಎಂದು ತಿಳಿಸಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿದರು.
ಸಿದ್ದರಾಮಯ್ಯ ಪರ ಸುಪ್ರೀಂ ಕೋರ್ಟ್ ನ ಹಿರಿಯ ಅಭಿಷೇಕ್ ಮನು ಸಿಂಘ್ವಿ, ರಾಜ್ಯ ಸರ್ಕಾರದ ಪರ ಸುಪ್ರೀಂ ಕೋರ್ಟ್ ನ ಹಿರಿಯ ವಕೀಲ ಕಪಿಲ್ ಸಿಬಲ್, ದೂರುದಾರ ಸ್ನೇಹಮಯಿ ಕೃಷ್ಣ ಪರ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಮಣಿಂದರ್ ಸಿಂಗ್ ಮತ್ತು ಇತರರು ಇದ್ದರು.
Previous Articleಆನೆ ಹಾವಳಿ ತಡೆಗೆ ತಮಿಳುನಾಡು ಮಾದರಿ
Next Article ಗೌಡರ ತವರಿನಲ್ಲಿ ಗುಡುಗಿದ ಸಿದ್ದರಾಮಯ್ಯ.