ಬೆಂಗಳೂರು.
ಇದು ಅಂತಿಂಥ ಗ್ಯಾಂಗ್ ಅಲ್ಲ ನೀವು ಕೇಳಿದ ಕ್ಷಣ ಮಾತ್ರದಲ್ಲಿ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಆರ್.ಟಿ.ಸಿ. ರೇಷನ್ ಕಾರ್ಡ್ ಹೀಗೆ ಯಾವುದೇ ದಾಖಲೆ ಕೇಳಿದರೂ ಅದನ್ನು ಸೃಷ್ಟಿಸಿ ಕೊಡುತ್ತದೆ. ಅಷ್ಟೇ ಅಲ್ಲ ಕೋರ್ಟುಗಳಿಗೆ ಜಾಮೀನು ನೀಡಲು ಬೇಕಾದ ದಾಖಲೆ ನಕಲಿಯಾಗಿ ಸೃಷ್ಟಿಸಿ ಕೊಡುತ್ತಿದ್ದ ಈ ಗ್ಯಾಂಗ್ ಬೇನಾಮಿ ವ್ಯಕ್ತಿಗಳನ್ನು ಜಾಮೀನಿಗೆ ನೀಡುತ್ತಿತ್ತು.
ಇಂತಹ ಐನಾತಿ ಗ್ಯಾಂಗ್ ಸದಸ್ಯರು ಇದೀಗ ಬೆಂಗಳೂರಿನ ಹಲಸೂರು ಗೇಟ್ ಠಾಣೆ ಪೊಲೀಸರ ಅತಿಥಿಯಾಗಿದ್ದಾರೆ.
ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋರ್ಟಿಗೆ ವಂಚನೆ ಮಾಡುತ್ತಿರುವ ಗ್ಯಾಂಗ್ ಒಂದು ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಎಂಬ ಮಾಹಿತಿ ಪೊಲೀಸರನ್ನು ತಲುಪಿತ್ತು. ಅಷ್ಟೇ ಅಲ್ಲ ಈ ಗ್ಯಾಂಗ್ ನ ಸದಸ್ಯರು ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಮ್ಯಾಜೆಸ್ಟ್ರೇಟ್ ಕೋರ್ಟ್ ನ ಮುಂಭಾಗದ ಪುಟ್ ಪಾತ್ ನಲ್ಲಿ ನಿಂತಿದ್ದಾರೆ ಎಂದು ಪೊಲೀಸ್ ಬಾತ್ಮೀಧಾರರು ಮಾಹಿತಿ ರವಾನಿಸಿದ್ದರು.
ಈ ಮಾಹಿತಿಯ ಎಳೆ ಹಿಡಿದುಕೊಂಡು ಸ್ಥಳಕ್ಕೆ ಧಾವಿಸಿದ ಹಲಸೂರು ಗೇಟ್ ಠಾಣೆ ಪೊಲೀಸರು
ಪರಿಶೀಲಿಸಿ 5ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ವಂಚನೆ ಮಾಡಿರುವುದು ಗೊತ್ತಾಗಿದೆ. ಈ ಪ್ರಕರಣದಲ್ಲಿ ಇನ್ನೂ 7 ಮಂದಿ ಬಾಗಿಯಾಗಿರುವುದಾಗಿ ಆರೋಪಿಗಳು ನೀಡಿದ ಮಾಹಿತಿಯ ಮೇರೆಗೆ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ನಾಲ್ವರನ್ನು ಹಾಗೂ ಮೆಜೆಸ್ಟಿಕ್ ನ ಸೈಬರ್ ಸೆಂಟರ್ ವೊಂದರಲ್ಲಿ ಒಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಈ ಪ್ರಕರಣದಲ್ಲಿ ಭಾಗಿಯಾಗಿರುವುದನ್ನು ಪತ್ತೆಹಚ್ಚಿದ್ದಾರೆ
ಈ ತಂಡ ನಕಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್,.ಆರ್ ಟಿ ಸಿಗಳು, ಆರೋಪಿಗಳಿಗೆ ಜಾಮೀನು ಮಂಜೂರ ಆದ್ಮೇಲೆ ಶ್ಯೂರಿಟಿ ಕೊಡಲು ನಕಲಿ ದಾಖಲೆ ಸೃಷ್ಠಿಸುತ್ತಿದ್ದ ಗ್ಯಾಂಗ್. ಶ್ಯೂರಿಟಿ ಜೊತೆಗೆ ನಕಲಿ ವ್ಯಕ್ತಿಯನ್ನ ಕೂಡ ಕಳುಹಿಸುತ್ತಿದ್ದರು. ಕ್ಯಾಟರಿಂಗ್ಗಳಲ್ಲಿ ಕೆಲಸ ಮಾಡ್ತಿದ್ದ ಅಡುಗೆ ಕೆಲಸದವರನ್ನ, ಜೊತೆಗೆ ಸಿನಿಮಾದಲ್ಲಿನ ಸೈಡ್ ಆಕ್ಟರ್ಗಳನ್ನ ಕರೆತರುತ್ತಿದ್ದ ಆರೋಪಿಗಳು ಬಳಿಕ
ನಕಲಿ ಆಧಾರ್ ಕಾರ್ಡ್ ಮೂಲಕ ಪಹಣಿ ಪತ್ರ ನೀಡಿ ಜಾಮೀನು ಕೊಡುಸುತ್ತಿದ್ದರು. ನಕಲಿ ಕಾರ್ಡ್ ಗಳನ್ನು ಸೃಷ್ಟಿ ಮಾಡ್ತಿದ್ದ ಗ್ಯಾಂಗ್ ಕಿಂಗ್ ಪಿನ್ ಮಂಜುನಾಥ್ ಸೇರಿ ಮಂಜುನಾಥ್, ಸಂತೋಷ್, ಆನಂದ್, ಸ್ವರೂಪ್, ಇಂದ್ರೇಶ್, ಪುನೀತ್, ಮನೋಜ್, ಕಲಾಂದರ್, ವಿನಾಯಕ್, ಕೆಂಪೇಗೌಡ ಸೇರಿ ಒಟ್ಟು 12 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರಿಂದ 43 ರೇಷನ್ ಕಾರ್ಡ್, 139 ಆಧಾರ್ ಕಾರ್ಡ್, 16 ಪಾನ್ ಕಾರ್ಡ್, 35 ಆರ್ ಟಿಸಿ ವಶಕ್ಕೆ ಪಡೆಯಲಾಗಿದೆ.
Previous Articleಅಲ್ಲು ಅರ್ಜುನ್ ಬಂಧನ.
Next Article ಪಂಚಮಸಾಲಿ ಶ್ರೀ ಗಳು ಸುಪಾರಿ ಪಡೆದಿದ್ದಾರಾ..?