ಬೆಂಗಳೂರು
ತೃತೀಯ ಲಿಂಗಿ ಅಥವಾ ಮಂಗಳಮುಖಿ ಎಂದು ಕರೆಯಿಸಿಕೊಳ್ಳುವವರನ್ನು ಸಮಾಜ ತೀರಾ ಕಡೆಗಣನೆಯಿಂದ ನೋಡುತ್ತದೆ ಈ ಸಮುದಾಯಕ್ಕೆ ಸೇರಿದವರು ತಮ್ಮ ಬದುಕಿನ ಬಂಡಿಯನ್ನು ಎಳೆಯಲು ಭಿಕ್ಷಾಟನೆ ವೇಶ್ಯಾವಾಟಿಕೆಯಂತಹ ಚಟುವಟಿಕೆಯಲ್ಲಿ ತೊಡಗುವುದು ಮಾಮೂಲಿನ ಸಂಗತಿಯಾಗಿದೆ.
ಇತ್ತೀಚೆಗೆ ಈ ಸಮುದಾಯ ನಮಗೂ ಎಲ್ಲರಂತೆ ಬದುಕುವ ಹಕ್ಕಿದೆ ನಮಗೂ ಈ ಎಲ್ಲ ಅವಕಾಶಗಳು ಬೇಕು ಎಂದು ತಮ್ಮ ಹಕ್ಕು ಪಡೆಯಲು ಹೋರಾಟ ಆರಂಭಿಸಿದೆ ಇದರ ನಡುವೆ ಸರಕಾರಗಳು ಕೂಡ ಇವರ ಬೇಡಿಕೆಗೆ ಸ್ಪಂದಿಸುತ್ತಿದ್ದು ಮತದಾರರ ಗುರುತಿನ ಪತ್ರ ಸೇರಿದಂತೆ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಸಮಾಜದ ಮುಖ್ಯ ವಾಹಿನಿಯಲ್ಲಿ ಎಲ್ಲರಂತೆ ಬೆರೆಯುವ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೆಲವು ಯೋಜನೆಗಳನ್ನು ಪ್ರಕಟಿಸಿದೆ.
ಇಂತಹ ಪ್ರಯತ್ನದ ಫಲವಾಗಿ ಅಲ್ಲೊಬ್ಬರು ಇನ್ನೊಬ್ಬರು ಎಂಬಂತೆ ಈ ಸಮುದಾಯಕ್ಕೆ ಸೇರಿದವರು ಕೆಲವು ಹುದ್ದೆಗಳನ್ನು ಅಲಂಕರಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಇದೀಗ ಮಂಗಳಮುಖಿಯೊಬ್ಬರು ರಾಜ್ಯದ ವಿಶ್ವ ವಿದ್ಯಾಲಯವೊಂದರ ಅರೆ ಕಾಲಿಕ ಪ್ರಾಧ್ಯಾಪಕಿಯಾಗಿ ನೇಮಕಗೊಳ್ಳುವ ಮೂಲಕ
ಹೊಸ ಬದುಕು ಆರಂಭಿಸಿದ್ದಾರೆ.
ಶಿಕ್ಷಣದ ಬಲವೊಂದಿದ್ದರೆ ಸಾಕು ಬದುಕಿನ ಅನೇಕ ಸಂಕಷ್ಟಗಳ ಹಾದಿಯನ್ನು ಸಲೀಸಾಗಿ ದಾಟಬಹುದು ಎಂಬುದನ್ನು ಸಾಬೀತುಗೊಳಿಸಿದ್ದಾರೆ.ಬಳ್ಳಾರಿ ಜಿಲ್ಲೆಯ ಕುರುಗೋಡು ಪಟ್ಟಣದ ರೇಣುಕಾ ಪೂಜಾರಿ ಎಂಬವರು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಕನ್ನಡ ಅಧ್ಯಾಪಕಿಯಾಗಿ ಸೇವೆ ಆರಂಭಿಸಿದ್ದಾರೆ.
ಮಂಗಳಮುಖಿಯೊಬ್ಬರು ವಿಶ್ವ ವಿದ್ಯಾಲಯವೊಂದರಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಮಾಡಲು ಅವಕಾಶ ಪಡೆದುಕೊಂಡಿರುವುದು ರಾಜ್ಯದಲ್ಲಿ ಇದೇ ಮೊದಲು. ಶಿಕ್ಷಕರಾಗಿ ವಿವಿಧ ಶಾಲೆಗಳಲ್ಲಿ ಮೂವರು ಮಂಗಳಮುಖಿಯ ರು ರಾಜ್ಯದ ವಿವಿಧೆಡೆ ಸೇವೆ ಸಲ್ಲಿ ಸುತ್ತಿದ್ದರಾದರೂ ಉನ್ನತ ಶಿಕ್ಷಣ ಪಡೆದು ಪ್ರಾಧ್ಯಾಪಕಿಯಾಗಿದ್ದು ಇದೇ ಪ್ರಥಮ ಎನ್ನಲಾಗಿದೆ.