ಬೆಂಗಳೂರು:ದೇಶದ ಕಾನೂನು, ಸಂವಿಧಾನದಲ್ಲಿ ಡಿಜಿಟಲ್ ಅರೆಸ್ಟ್ ಎನ್ನುವ ವಿಧಾನವೇ ಇಲ್ಲ. ಮುಂಬಯಿ ಸೇರಿದಂತೆ ಎಲ್ಲಿಯೂ ಯಾವುದೇ ತನಿಖಾ ಸಂಸ್ಥೆಗಳು ಡಿಜಿಟಲ್ ಅರೆಸ್ಟ್ ಮಾಡುವುದಿಲ್ಲ ಇದರ ಬಗ್ಗೆ ಜನರಿಗೆ ಸಾಮಾನ್ಯ ಜ್ಞಾನ ಇರಬೇಕಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಯಾವುದೇ ತನಿಖಾ ಸಂಸ್ಥೆಗಳು ಡಿಜಿಟಲ್ ಅರೆಸ್ಟ್ ಮಾಡುವುದಿಲ್ಲ. ಈ ಬೆದರಿಕೆ ಕರೆಗಳ ಕುರಿತು ಸಾರ್ವಜನಿಕರು ತಿಳಿದುಕೊಳ್ಳಬೇಕಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕಮೀಷನರ್ ತಿಳಿಸಿದರು.
ಕಾನೂನಿನ ಪ್ರಕಾರ, ಯಾವುದೇ ವ್ಯಕ್ತಿಗೆ ನೋಟಿಸ್ ನೀಡಿ ಅಥವಾ ನೇರವಾಗಿ ಅವರನ್ನು ಭೇಟಿಯಾಗಿ ವಶಕ್ಕೆ ಪಡೆದು ಬಳಿಕ ಬಂಧಿಸುವ ಪದ್ಧತಿಯಿದೆ. ಬಂಧಿಸಿದ ಆರೋಪಿಯನ್ನು 24 ಗಂಟೆಗಳೊಳಗಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂಬ ಕಠಿಣ ಕಾನೂನಿದೆ. ಆದರೆ ಡಿಜಿಟಲ್ ಅರೆಸ್ಟ್ ಎಂಬ ಪದ್ಧತಿ ನಮ್ಮ ಕಾನೂನಿನಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸಾರ್ವಜನಿಕರು ಸ್ವಲ್ಪ ಮಟ್ಟಿನ ಕಾನೂನಿನ ಅರಿವು ಹೊಂದಿದರೆ ವಂಚಕರ ಜಾಲದಲ್ಲಿ ಸಿಲುಕುವ ಪ್ರಮೇಯವೇ ಬರುವುದಿಲ್ಲ. ಅನುಮಾನಾಸ್ಪದ ಕರೆಗಳು ಬಂದಾಗ ಸಮೀಪದ ಪೊಲೀಸ್ ಠಾಣೆಗೆ ಒಂದು ಕರೆ ಮಾಡಿದರೂ ಸಹ ಸೂಕ್ತ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದರು.
ಸ್ಥಳೀಯ ಪೊಲೀಸರಿಗೆ ತಿಳಿಸಿ:
ಸರ್ಕಾರದ ಯಾವುದೇ ತನಿಖಾ ಸಂಸ್ಥೆಗಳು ವಿಡಿಯೋ ಕರೆಯ ಮೂಲಕ ತನಿಖೆ ಕೈಗೊಳ್ಳುವುದಿಲ್ಲ. ಮೊದಲು ನೋಟಿಸ್ ನೀಡಿ ಇಲ್ಲವೇ ನೇರವಾಗಿ ಬಂದು ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತವೆ. ಆದ್ದರಿಂದ ಮೊಬೈಲ್ ಕರೆಗಳ ಮೂಲಕ ಯಾರಾದರೂ ಸಂಪರ್ಕಿಸಿ ಡಿಜಿಟಲ್ ಅರೆಸ್ಟ್ ಎಂದು ಬೆದರಿಕೆ ಹಾಕಿದರೆ ಜನರು ಎಚ್ಚೆತ್ತುಕೊಂಡು ಸ್ಥಳೀಯ ಪೊಲೀಸರಿಗೆ ತಿಳಿಸುವುದು ಸೂಕ್ತ” ಎಂದರು.
Previous Articleಶಿವಕುಮಾರ್ ಗೆ ಯಶಸ್ಸಿ ಶಸ್ತ್ರ ಚಿಕಿತ್ಸೆ .
Next Article ಸಿ.ಟಿ.ರವಿ ಪ್ರಕರಣ: ಪೊಲೀಸ್ ಅಧಿಕಾರಿ ಸಸ್ಪೆಂಡ್.