ಬೆಂಗಳೂರು,ಜ.10:
ನಾಯಕತ್ವ ಬದಲಾವಣೆ ಸೇರಿದಂತೆ ಹಲವಾರು ವಿಷಯಗಳ ಕುರಿತಂತೆ ಬಿಜೆಪಿಯಲ್ಲಿ ಭಿನ್ನಮತ ತೀವ್ರ ಸ್ವರೂಪ ಪಡೆದುಕೊಂಡಿದೆ.
ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಸಮರ ಸಾರಿರುವ ಹಿರಿಯ ನಾಯಕ ಬಸನಗೌಡ ಪಾಟೀಲ ಯತ್ನಾಳ ಮತ್ತು ರಮೇಶ್ ಜಾರಕಿಹೊಳಿ ಬಣ ವಿಜಯೇಂದ್ರ ಪದಚ್ಯುತಿಗೆ ಪಟ್ಟು ಹಿಡಿದಿದೆ. ಮತ್ತೊಂದೆಡೆ ಈ ಭಿನ್ನರ ವಿರುದ್ಧ ಕ್ರಮಕ್ಕೆ ವಿಜಯೇಂದ್ರ ಆಪ್ತರು ಲಾಭಿ ನಡೆಸುತ್ತಿದ್ದಾರೆ. ಇದೆಲ್ಲದರ ನಡುವೆ ತಟಸ್ಥರ ಬಣ ಕೂಡ ಅಸ್ತಿತ್ವಕ್ಕೆ ಬಂದಿದ್ದು ರಾಜ್ಯ ಬಿಜೆಪಿ ವಿದ್ಯಮಾನಗಳು ಗೊಂದಲ ಗೋಜಲಾಗಿ ಪರಿಣಮಿಸಿದೆ.
ಈ ವಿದ್ಯಮಾನಗಳ ನಡೆದ ಹೈಕಮಾಂಡ್ ಮುಂದೆ ಯಾರು ಪ್ರಬಲರು ಎಂಬ ವಿಷಯ ಚರ್ಚೆಗೆ ಬಂದಿದ್ದು ರಾಜ್ಯ ಬಿಜೆಪಿಯ ಯಾವುದೇ ನಾಯಕರು ಹೈಕಮಾಂಡ್ ಮುಂದೆ ತಮ್ಮ ಪ್ರಭಾವ ಬಳಸಲು ಸಾಧ್ಯವಾಗುತ್ತಿಲ್ಲ ಎಂಬ ಸತ್ಯ ಬೆಳಕಿಗೆ ಬಂದಿದೆ.
ಬಿಜೆಪಿಯ ರಾಜ್ಯ ನಾಯಕರ ಬದಲಾಗಿ ಹೈಕಮಾಂಡ್ ನಾಯಕರು ಜೆಡಿಎಸ್ ನಾಯಕ ಹಾಗೂ ಕೇಂದ್ರ ಮಂತ್ರಿ ಕುಮಾರಸ್ವಾಮಿ ಅವರ ಅಭಿಪ್ರಾಯ ಮತ್ತು ಮಾತಿಗೆ ಹೆಚ್ಚಿನ ಮನ್ನಣೆ ನೀಡುತ್ತಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ವಿಜಯೇಂದ್ರ ವಿರುದ್ಧ ಸಮರ ಕಾರಿರುವ ಭಿನ್ನರ ಗುಂಪು ಇದೀಗ ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಕುಮಾರಸ್ವಾಮಿಯವರ ಮೊರೆ ಹೋಗಿದ್ದಾರೆ.
ವಕ್ಫ್ ಕುರಿತುಂತೆ ವರದಿ ನೀಡಲು ದೆಹಲಿಗೆ ತೆರಳಿದ್ದ ಮಾಜಿ ಸಚಿವ ರಮೇಶ ಜಾರಕಿಹೊಳಿ, ಅರವಿಂದ ಲಿಂಬಾವಳಿ ನೇತೃತ್ವ ತಂಡ ಕೇಂದ್ರ ಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಸುಧೀರ್ಘ ಅವಧಿವರೆಗೆ ಚರ್ಚೆ ನಡೆಸಿದೆ
ಪ್ರಸಕ್ತ ಬಿಜೆಪಿಯಲ್ಲಿನ ಭಿನ್ನಮತ, ವಿಜಯೇಂದ್ರ ಅವರ ಕಾರ್ಯವೈಖರಿ ಬಗ್ಗೆ ರಮೇಶ್ ಜಾರಕಿಹೊಳಿ ಅವರು ಪ್ರಸ್ತಾಪಿಸಿ ಮಧ್ಯಸ್ಥಿಕೆ ವಹಿಸುವಂತೆ ಕುಮಾರಸ್ವಾಮಿ ಅವರಲ್ಲೂ ಮನವಿ ಮಾಡಿದ್ದಾರೆ. ಇದಕ್ಕೆ ತಾತ್ವಿಕವಾಗಿ ಒಪ್ಪಿ ಕೊಂಡಿರುವ ಕುಮಾರಸ್ವಾಮಿ ಅವರು ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವರೂ ಆಗಿರುವ ಬಿಜೆಪಿ ರಾಷ್ಟ್ರೀಯ ಘಟಕದ ಪ್ರಭಾವಿ ನಾಯಕ ಅಮಿತ್ ಶಾರೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸುವುದಾಗಿ ಆಶ್ವಾಸನೆ ನೀಡಿದ್ದಾರೆ ಎನ್ನಲಾಗಿದೆ.
ಈ ಮಾತುಕತೆಯ ವೇಳೆ ಬಿಜೆಪಿ ಭಿನ್ನಮತಿಯ ನಾಯಕರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಮಗೆ 100 ಕ್ಷೇತ್ರಗಳ ಜವಾಬ್ದಾರಿ ನೀಡಲಿ ಅಲ್ಲಿ ಅಭ್ಯರ್ಥಿಗಳ ಆಯ್ಕೆ ಚುನಾವಣೆಯ ಪ್ರಚಾರ ತಂತ್ರ ಖರ್ಚು ವೆಚ್ಚ ಎಲ್ಲವನ್ನು ನಾವೇ ನೋಡಿಕೊಳ್ಳುತ್ತೇವೆ ಈ ಕಾರಣಕ್ಕಾಗಿ ವಿಜಯೇಂದ್ರ ಮತ್ತು ಯಡಿಯೂರಪ್ಪ ಮೇಲೆ ಹೆಚ್ಚಿನ ಅವಲಂಬನೆ ಬೇಡ ಎಂಬ ಅಂಶವನ್ನು ಹೈಕಮಾಂಡ್ ಹೀಗೆ ಮನದಟ್ಟು ಮಾಡಿ ಎಂದು ಕುಮಾರಸ್ವಾಮಿ ಅವರಲ್ಲಿ ಕೋರಿದರು ಎನ್ನಲಾಗಿದೆ.
ವಿಜಯೇಂದ್ರ ಅವರ ಮೇಲೆ ಚುನಾವಣೆಯ ಜವಾಬ್ದಾರಿ ಹೋರಿಸಿದರೆ ಆನಂತರದಲ್ಲಿ ಅವರು ಹೈಕಮಾಂಡ್ ಮೇಲೆ ಒತ್ತಡ ಏರುತ್ತಾರೆ ಇದರಿಂದ ಅನಗತ್ಯ ಗೊಂದಲಗಳು ಸೃಷ್ಟಿಯಾಗುತ್ತವೆ ಇದಕ್ಕೆ ಅವಕಾಶ ನೀಡಿದಂತೆ ಸಾಮೂಹಿಕ ನಾಯಕತ್ವದಲ್ಲಿ ಪಕ್ಷ ಸಂಘಟನೆ ಮತ್ತು ಚುನಾವಣೆ ಎದುರಿಸಲು ನಾವು ಸಿದ್ಧ ಅದಕ್ಕೆ ಅನುಕೂಲಕರವಾಗುವಂತೆ ತೀರ್ಮಾನ ತೆಗೆದುಕೊಳ್ಳಲು ಹೈಕಮಾಂಡ್ ಗೆ ಸಲಹೆ ಮಾಡಲು ಮಾನವಿ ಮಾಡಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.
ಈ ಎಲ್ಲಾ ಅಂಶಗಳ ಬಗ್ಗೆ ಕೂಲಂಕುಶ ಚರ್ಚೆ ನಡೆಸಿದ ಕುಮಾರಸ್ವಾಮಿ ನೀವು ಹೇಳಿರುವ ಎಲ್ಲ ವಿಷಯಗಳನ್ನು ಹೈಕಮಾಂಡ್ ಗಮನಕ್ಕೆ ತರುತ್ತೇನೆ ಈ ವಿಚಾರವಾಗಿ ಯಾವುದೇ ಗೊಂದಲ ಮತ್ತು ಅಪನಂಬಿಕೆ ಬೇಡ ಒಟ್ಟಾಗಿ ಹೋರಾಟ ನಡೆಸಿ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ತೊಲಗಿಸೋಣ ಈ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಜನಾಂದೋಲನ ಮೂಡಿಸಲು ಸಜ್ಜಾಗಿ ಸಂಕ್ರಾಂತಿ ಮುಗಿದ ನಂತರ ತಾವು ಕೂಡ ಈ ವಿಷಯದಲ್ಲಿ ಹೆಚ್ಚು ಗಮನ ಹರಿಸುತ್ತೇನೆ ಎಂದು ಭರವಸೆ ನೀಡಿರುವುದಾಗಿ ತಿಳಿದು ಬಂದಿದೆ.
Previous Articleವಿಶೇಷ ಪೂಜೆ ಕಾರಣ ಬಹಿರಂಗ ಪಡಿಸಿದ ಶಿವಕುಮಾರ್
Next Article ಸಿದ್ದರಾಮಯ್ಯ ನಂತರ ಸಿಎಂ ಯಾರು ಗೊತ್ತಾ