ಮಂಗಳೂರು,ಜ. 21-
ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಮಂಗಳೂರಿನ
ಉಳ್ಳಾಲದ ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು ತಮಿಳುನಾಡು ಮೂಲದ ಮೂವರು ಕಳ್ಳರನ್ನು ಬಂಧಿಸಿದ್ದಾರೆ.
ವಿಶೇಷವೆಂದರೆ ಬ್ಯಾಂಕ್ ನಲ್ಲಿ ಕದ್ದ ನಗದು ಮತ್ತು ಚಿನ್ನವನ್ನು ಕದ್ದ ಈ ಕಳ್ಳರು ಅದನ್ನು ಗೋಣಿ ಚೀಲದಲ್ಲಿಟ್ಟುಕೊಂಡು 700 ಕಿ.ಮೀ ಕಾರಿನಲ್ಲೇ ಪ್ರಯಾಣಿಸಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಕಳ್ಳತನದ ನಂತರ ಮಂಗಳೂರಿನಿಂದ ಫಿಯೇಟ್ ಕಾರಿನಲ್ಲಿ ಪರಾರಿಯಾಗಿದ್ದ ದರೋಡೆಕೋರರು ತಮಿಳುನಾಡಿನ ತಿರುನಲ್ವೇಲಿಗೆ ಪ್ರಯಾಣಿಸಿದ್ದರು. ತಮಿಳುನಾಡು ತಲುಪಿದ ಬಳಿಕ ಅಜ್ಞಾತ ಸ್ಥಳದಲ್ಲಿ ಕಾರು ಬಿಟ್ಟು ಚಿನ್ನದ ಜೊತೆ ಪರಾರಿಯಾಗಿದ್ದರು.
ದರೋಡೆಕೋರರ ಜಾಡು ಹಿಡಿದು ಹೊರಟಿದ್ದ ನಗರ ಪೊಲೀಸರಿಗೆ ತಮಿಳುನಾಡಿನಲ್ಲಿ ಕಾರು ಪತ್ತೆಯಾಗಿದೆ. ನಂತರ ಕಾರಿನ ಚಾಸಿ ನಂಬರ್ ಆಧಾರದಲ್ಲಿ ಕಾರಿನ ನೈಜ ಮಾಲೀಕನ ಮಾಹಿತಿ ಸಂಗ್ರಹಿಸಿದ್ದಾರೆ. ಆ ಬಳಿಕ ತಮಿಳುನಾಡಿನಲ್ಲಿ ಜಾಲಾಡಿದ ಮಂಗಳೂರು ಪೊಲೀಸರಿಗೆ ಮೂವರು ಆಗಂತುಕರ ಜಾಡು ಪತ್ತೆಯಾಗಿದೆ. ಇದರ ಆಧಾರದಲ್ಲಿ ತಮಿಳುನಾಡಿನ ತಿರುನಲ್ವೇಲಿ ಬಳಿ ಮೂವರು ದರೋಡೆಕೋರರನ್ನು ಬಂಧಿಸಲಾಗಿದೆ.
ಪ್ರಮುಖ ಅರೋಪಿ ಮುರುಗಂಡಿ ದೇವರ್ ತಿರುನಲ್ವೇಲಿ ತನಕ ಕಾರು ಚಲಾಯಿಸಿದ್ದ. ದರೋಡೆಕೋರರು ಪರಾರಿಯಾಗಲು ಬಳಸಿದ್ದು ಮಹಾರಾಷ್ಟ್ರ ಮೂಲದ ಫಿಯೇಟ್ ಕಾರು ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಮುಂಬೈ ಹಾಗೂ ತಮಿಳುನಾಡು ಮೂಲದ ನಟೋರಿಯಸ್ ಗ್ಯಾಂಗ್ ದರೋಡೆ ಮಾಡಿದೆ.
ಎರಡು ತಿಂಗಳಿಂದ ಸಂಚು:
ಕೋಟೆಕಾರು ಬ್ಯಾಂಕ್ ದರೋಡೆಯ ಕಿಂಗ್ಪಿನ್ ಮುರುಗಂಡಿ ದೇವರ್ ಎರಡು ತಿಂಗಳ ಹಿಂದೆಯೇ ಮಂಗಳೂರಿಗೆ ಬಂದಿದ್ದ. ಕೋಟೆಕಾರು ಬ್ಯಾಂಕ್ ಪರಿಸರದಲ್ಲಿ ಸುತ್ತಾಡಿ ಮಾಹಿತಿ ಕಲೆ ಹಾಕಿದ್ದ. ಆ ಬಳಿಕ ನಿಖರವಾದ ಸ್ಕೆಚ್ ತಯಾರಿಸಿ ಮತ್ತೆ ತಮಿಳುನಾಡಿಗೆ ತೆರಳಿದ್ದ. ಆ ಬಳಿಕ ದರೋಡೆಗೆ ಪಕ್ಕಾ ಪ್ಲಾನ್ ಮಾಡಿಕೊಂಡು ತಂಡದ ಜೊತೆ ಬಂದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದರೋಡೆ ಮಾಡುವುದಕ್ಕೆಂದು ರಾಜೇಂದ್ರನ್, ಕಣ್ಣನ್ ಮಣಿ ಹಾಗೂ ಇತರೆ ಅರು ಜನರ ಜೊತೆ ಮುರುಗಂಡಿ ದೇವರ್ ಬಂದಿದ್ದ. ಆದರೆ, ಐದು ಜನರಷ್ಟೇ ಫಿಯೇಟ್ ಕಾರಿನಲ್ಲಿ ಬಂದು ದರೋಡೆ ಮಾಡಿದ್ದರು. ಓರ್ವ ಬೇರೆ ಜಾಗದಲ್ಲಿ ನಿಂತು ದರೋಡೆಗೆ ನೆರವು ನೀಡಿರುವುದು ಪತ್ತೆಯಾಗಿದೆ.
ದರೋಡೆಕೋರರ ಬಂಧನದ ಬಗ್ಗೆ ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ನಿನ್ನೆ ಮಾಹಿತಿ ನೀಡಿ ದರೋಡೆಕೋರರನ್ನು ಹೇಗೆ ಟ್ರ್ಯಾಕ್ ಮಾಡಿ ಬಂಧಿಸಲಾಗಿದೆ ಎಂಬುದನ್ನು ವಿವರಿಸಿದ್ದಾರೆ.
ಕರ್ನಾಟಕ ಗುಪ್ತಚರ ಇಲಾಖೆ ಕೂಡ ಬ್ಯಾಂಕ್ ದರೋಡೆ ಪ್ರಕರಣ ಭೇದಿಸಲು ಸಹಾಯ ಮಾಡಿತ್ತು. ಬಂಧಿತರಿಂದ ಚಿನ್ನದ ಜತೆಗೆ ತಲ್ವಾರ್ ಮತ್ತು ಪಿಸ್ತೂಲ್ ವಶಪಡಿಸಿಕೊಳ್ಳಲಾಗಿತ್ತು.
Previous Articleಜೆಡಿಎಸ್ ನ ಶರವಣ ಅವರಿಗೆ ಪಂಗನಾಮ..
Next Article ನಟ ದರ್ಶನ್ ಗನ್ ಲೈಸೆನ್ಸ್ ರದ್ದು