ಬೆಂಗಳೂರು,ಫೆ.6-
ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿರುವ ಬಿಟ್ ಕಾಯಿನ್ ಹಗರಣದ ಸುಳಿಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಹ್ಯಾರೀಸ್ ಸಿಲುಕಿದ್ದಾರೆ.
ಹಗರಣದ ಪ್ರಮುಖ ಆರೋಪಿ ಹ್ಯಾಕರ್ ಶ್ರೀ ಕೃಷ್ಣ ಅಲಿಯಾಸ್ ಶ್ರೀಕಿ ಜೊತೆಗೆ ಮೊಹಮ್ಮದ್ ನಲಪಾಡ್ ವ್ಯವಹಾರಿಕ ನಂಟು ಹೊಂದಿದ್ದಾರೆ ಎಂಬ ಅಂಶವನ್ನು ಪತ್ತೆ ಹಚ್ಚಿರುವ ತನಿಖಾ ತಂಡ ಇವರ ವಿರುದ್ಧ ಪ್ರಕರಣ ದಾಖಲಿಸಿದೆ.
ಈ ಹಿಂದೆ ಹಿಂದೆ ಸಿಐಡಿ ಕಚೇರಿಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಅವರನ್ನು ವಿಚಾರಣೆ ಮಾಡಲಾಗಿತ್ತು. ಹೇಳಿಕೆ ದಾಖಲು ಮಾಡಿಕೊಂಡ ಬಳಿಕ ಪ್ರಕರಣದಲ್ಲಿ ನಲಪಾಡ್ ಅವರನ್ನೂ ಆರೋಪಿಯನ್ನಾಗಿ ಮಾಡಲಾಗಿದೆ. ನಾಳೆ ಅವರನ್ನು ವಿಚಾರಣೆಗೆ ಬರುವಂತೆ ಸೂಚಿಸಿ ಸಿಐಡಿ ಪೋಲೀಸರು ನೋಟಿಸ್ ನೀಡಿದ್ದಾರೆ
ಸಿಐಡಿ ಅಧಿಕಾರಿಗಳು ಪ್ರಸಕ್ತ ನೀಡಿರುವ ನೋಟಿಸ್ ಅನ್ವಯ ವಿಚಾರಣೆಗೆ ಹಾಜರಾದ ಬಳಿಕ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎಂದು ಕಾನೂನು ತಜ್ಞರು ಹೇಳಿರುವ ಹಿನ್ನೆಲೆಯಲ್ಲಿ ನಲಪಾಡ್ ಒತ್ತಡಕ್ಕೆ ಸಿಲುಕಿದ್ದಾರೆ
ನೋಟೀಸ್ ರವಾನೆಯಾಗುತ್ತಿದ್ದಂತೆ ಅವರು ಉಪಮುಖ್ಯಮಂತ್ರಿ ಹಾಗೂ ತಮ್ಮ ರಾಜಕೀಯ ಗುರು ಡಿ.ಕೆ.ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ಮಾತುಕತೆ ನಡೆಸಿದ್ದಾರೆ.
ಕಾನೂನು ಕ್ರಮ:
ಎಸ್ಐಟಿ ನೋಟೀಸ್ ಕುರಿತು ಗೃಹಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಅದು ತನಿಖೆಯ ಭಾಗ. ಯಾರನ್ನು ಕರೆಸಬೇಕು, ಯಾರನ್ನು ವಿಚಾರಣೆ ಮಾಡಬೇಕು, ಯಾವ ಮಾಹಿತಿ ಪಡೆಯಬೇಕು ಎಂಬುದನ್ನು ತನಿಖಾ„ಕಾರಿಗಳು ನಿರ್ಧರಿಸುತ್ತಾರೆ. ನಾನು ಆ ಕುರಿತು ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದರು.
ಒಂದೊಂದು ಹಂತದಲ್ಲಿ ಒಬ್ಬೊಬ್ಬರನ್ನು ಕರೆಸಿ ವಿಚಾರಣೆ ಮಾಡಲಾಗುತ್ತಿದೆ. ಎಲ್ಲದಕ್ಕೂ ನಾನು ಪ್ರತಿಕ್ರಿಯಿಸುವುದು ಸರಿಯಲ್ಲ ಎಂದು ಗೃಹಸಚಿವರು ಹೇಳಿದ್ದಾರೆ.