ಬೆಂಗಳೂರು,ಫೆ.25-
ಅವನಿಲ್ಲಿ.. ಅವಳಲ್ಲಿ ಮಾತಿಲ್ಲ, ಕತೆಯಿಲ್ಲ.ಎದುರೆದರು ಬಂದಾಗ.. ಎಂಬ ಸಿನಿಮಾ ಹಾಡು ಕೋರ್ಟ್ ನಲ್ಲಿ ಸತ್ಯವಾಗಿದೆ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಇಂದು ನಗರದ ನ್ಯಾಯಾಲಯದಲ್ಲಿ ಮುಖಾಮುಖಿಯಾಗಿದ್ದು, ಒಬ್ಬರಿಗೊಬ್ಬರು ಮಾತನಾಡಲಿಲ್ಲ.!
ಕೋರ್ಟ್ ನಿಂದ ಹೊರಬರುವಾಗ ಪವಿತ್ರಾ ಗೌಡ ಕಣ್ಣೀರು ಹಾಕುತ್ತಾ ಕಾರು ಹತ್ತಿದರೆ, ದರ್ಶನ್ ನಿರ್ಲಿಪ್ತನಾಗಿ ಮನೆಯ ಹಾದಿ ಹಿಡಿದರು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾದ ದರ್ಶನ್, ಪವಿತ್ರ ಸೇರಿ ಇನ್ನಿತರರಿಗೆ ಹೈಕೋರ್ಟ್ ಜಾಮೀನು ನೀಡಿತ್ತು. ಷರತ್ತುಗಳ ಪ್ರಕಾರ ವಿಚಾರಣೆ ವೇಳೆ ಕೋರ್ಟ್ ಗೆ ಬಂದು ಹಾಜರಿ ಹಾಕಬೇಕಿತ್ತು. ಅಂತೆಯೇ, ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ನಲ್ಲಿ 17 ಆರೋಪಿಗಳ ವಿಚಾರಣೆ ನಡೆಯುತ್ತಿದೆ
ಮೊದಲು ನ್ಯಾಯಮೂರ್ತಿಗಳು ಎಲ್ಲಾ ಆರೋಪಿಗಳ ಹೆಸರು ಕರೆದಿದ್ದಾರೆ.
ಆ ಬಳಿಕ ಕೋರ್ಟ್ ನಲ್ಲಿ ಆರೋಪಿ ದರ್ಶನ್, ಪವಿತ್ರಾಗೌಡ ಮುಖಾಮುಖಿ ಆಗಿದ್ದಾರೆ. ಕೋರ್ಟ್ ನಲ್ಲಿ ಮುಖಾಮುಖಿ ಆದರೂ ಇಬ್ಬರೂ ಮಾತನಾಡಿಲ್ಲ. ಕಳೆದ ಬಾರಿ ಕೋರ್ಟ್ ಗೆ ಬಂದಾಗ ದರ್ಶನ್ ಹಾಗೂ ಪವಿತ್ರಾ ಪರಸ್ಪರ ಕೆಲ ಹೊತ್ತು ಮಾತನಾಡಿದ್ದರು. ಆದರೆ ಈ ಬಾರಿ ಕೋರ್ಟ್ ನಲ್ಲಿ ಇಬ್ಬರೂ ಮಾತನಾಡಿಲ್ಲ. ಈ ವಿಚಾರ ಸಾಕಷ್ಟು ಕುತೂಹಲ ಮೂಡಿಸಿದೆ.
ವಕೀಲರ ಆರೋಪ:
ಈ ನಡುವೆ ಪ್ರಕರಣದಲ್ಲಿ ಅ ಪ್ರೂವರ್ ಆಗುವಂತೆ ಇತರೆ ಆರೋಪಿಗಳಿಗೆ ಪೊಲೀಸರು ಒತ್ತಡ ಹೇರುತ್ತಿದ್ದಾರೆ ಎಂದು ದರ್ಶನ್ ಪರ ವಕೀಲ ಸುನೀಲ್ ಕೋರ್ಟ್ ನಲ್ಲಿ ಆರೋಪಿಸಿದ್ದಾರೆ. ‘ಮಾಫಿ ಸಾಕ್ಷಿಯಾಗುವಂತೆ ಪೊಲೀಸರಿಂದ ಒತ್ತಡ ಬಂದಿದೆ’ ಎಂದು ಸುನೀಲ್ ಹೇಳಿದರು.
ಇದಕ್ಕೆ ಉತ್ತರಿಸಿ ಜಡ್ಜ್ ಜೈಶಂಕರ್, ‘ಅಪ್ರೂವರ್ ಆಗಲು ಕೋರ್ಟ್ ಅನುಮತಿ ಬೇಕು. ಒತ್ತಡದಿಂದ ಮಾಫಿ ಸಾಕ್ಷಿಯಾಗಿ ಮಾಡಲಾಗದು. ನೀವು ಅರ್ಜಿ ಹಾಕಿದರೆ ಈ ಬಗ್ಗೆ ವಿಚಾರಣೆ ನಡೆಸಬಹುದು’ ಎಂದು ಜಡ್ಜ್ ಹೇಳಿ ವಿಚಾರಣೆಯನ್ನು ಏಪ್ರಿಲ್8 ಕ್ಕೆ ಮುಂದೂಡಿದ್ದಾರೆ.