ಬೆಂಗಳೂರು,ಮಾ.13-ವಿದೇಶದಿಂದ ಚಿನ್ನಕಳ್ಳಸಾಗಾಣೆ ಮಾಡಿ ಸಿಕ್ಕಿಬಿದ್ದಿರುವ ನಟಿ ಡಿಜಿಪಿ ರಾಮಚಂದ್ರರಾವ್ ಮಲಮಗಳು ರನ್ಯಾ ರಾವ್ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್ ಐ) ಅಧಿಕಾರಿಗಳ ವಿಚಾರಣೆಯಲ್ಲಿ ದುಬೈನಿಂದ ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದು ಇದೇ ಮೊದಲು ಎಂದು ಹೇಳಿಕೆ ನೀಡಿದ್ದಾಳೆ. ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಚಿನ್ನವನ್ನು ಮರೆಮಾಡುವುದನ್ನು ಕಲಿತೆ ಎಂದು ರನ್ಯಾ ಬಾಯ್ಬಿಟ್ಟಿದ್ದಾಳೆ.
ಮಾರ್ಚ್ 1ರಂದು ನನಗೆ ವಿದೇಶಿ ಫೋನ್ ಸಂಖ್ಯೆಯಿಂದ ಕರೆ ಬಂದಿತು. ಕಳೆದ ಎರಡು ವಾರಗಳಿಂದ ನನಗೆ ಅಪರಿಚಿತ ವಿದೇಶಿ ಸಂಖ್ಯೆಗಳಿಂದ ಸಾಕಷ್ಟು ಕರೆಗಳು ಬಂದಿವೆ. ಫೋನ್ ಮಾಡಿದವರು ದುಬೈ ವಿಮಾನ ನಿಲ್ದಾಣದ ಟರ್ಮಿನಲ್ 3ರ ಗೇಟ್ ಎ ಗೆ ಹೋಗಲು ನನಗೆ ಸೂಚಿಸಿದರು.
ದುಬೈ ವಿಮಾನ ನಿಲ್ದಾಣದಲ್ಲಿ ಚಿನ್ನವನ್ನು ಸಂಗ್ರಹಿಸಿ ಬೆಂಗಳೂರಿನಲ್ಲಿ ತಲುಪಿಸಲು ನನಗೆ ತಿಳಿಸಿದರು. ನಾನು ದುಬೈನಿಂದ ಬೆಂಗಳೂರಿಗೆ ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದು ಇದೇ ಮೊದಲು. ನಾನು ಇದುವರೆಗೆ ದುಬೈನಿಂದ ಚಿನ್ನವನ್ನು ತಂದಿರಲಿಲ್ಲ ಅಥವಾ ಖರೀದಿಸಿಯೂ ಇಲ್ಲ ಎಂದು ರನ್ಯಾ ರಾವ್ ಡಿಆರ್‌ಐ ಅಧಿಕಾರಿಗಳಿಗೆ ಹೇಳಿದರು.
ಅಂದಹಾಗೆ ಮಾ.3ರಂದು ದುಬೈ ವಿಮಾನ ನಿಲ್ದಾಣದ ಟರ್ಮಿನಲ್ 3ರಲ್ಲಿ ರನ್ಯಾ ರಾವ್‌ಗೆ ಬಿಳಿ ಮೈಕಟ್ಟಿನ ಎತ್ತರದ ಮನುಷ್ಯನೊಬ್ಬ 17 ಗಟ್ಟಿಯಿದ್ದ ಚಿನ್ನದ ಬಾಕ್ಸ್ ಕೊಟ್ಟು ಹೊರಗೆ ಸಾಗಿಸಬೇಕು ಎಂದು ಹೇಳುತ್ತಾನೆ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹೊರಗಡೆ ಹೋದ ಮೇಲೆ ಸರ್ವಿಸ್ ರಸ್ತೆಯಲ್ಲಿ ಆಟೋ ಒಂದು ನಿಂತಿರುತ್ತೆ, ಅದರಲ್ಲಿ ಇರುವ ವ್ಯಕ್ತಿಗೆ ಚಿನ್ನ ಕೊಡಬೇಕು ಎಂದು ಹೇಳಿ ಅಲ್ಲಿಂದ ಹೊರಟ್ಟಿದ್ದಾನೆ. ಆ ಬಾಕ್ಸ್ ಜತೆಗೆ ಬ್ಯಾಂಡೇಜ್ ತೆಗೆದುಕೊಂಡು ಶೌಚಗೃಹಕ್ಕೆ ಹೋಗಿ ಮೈತುಂಬ ಅಂಟಿಸಿಕೊಂಡು ಬರುವಾಗ ಡಿಆರ್‌ಐ ಅಧಿಕಾರಿಗಳಿಗೆ ಸೆರೆ ಆಗಿರುವುದಾಗಿ ರನ್ಯಾ ರಾವ್ ತನ್ನ ಹೇಳಿಕೆ ದಾಖಲಿಸಿದ್ದಾಳೆ.
ಚಿನ್ನವು ಎರಡು ಪ್ಲಾಸ್ಟಿಕ್ ಹೊದಿಕೆಯ ಪ್ಯಾಕೆಟ್‌ಗಳಲ್ಲಿತ್ತು. ನಾನು ವಿಮಾನ ನಿಲ್ದಾಣದ ಶೌಚಾಲಯಕ್ಕೆ ಹೋಗಿ ನನ್ನ ದೇಹಕ್ಕೆ ಚಿನ್ನದ ಬಾರ್‌ಗಳನ್ನು ಜೋಡಿಸಿದೆ. ಚಿನ್ನವನ್ನು ನನ್ನ ಜೀನ್ಸ್ ಮತ್ತು ಶೂಗಳಿಂದ ಮರೆಮಾಡಿದೆ. ಇದನ್ನು ಹೇಗೆ ಮಾಡಬೇಕೆಂದು ನಾನು ಯೂಟ್ಯೂಬ್ ವಿಡಿಯೋಗಳಿಂದ ಕಲಿತುಕೊಂಡೆ ಎಂದು ಕಂದಾಯ ಗುಪ್ತಚರ ಅಧಿಕಾರಿಗಳಿಗೆ ರನ್ಯಾ ತಿಳಿಸಿದ್ದಾರೆ.