ಬೆಂಗಳೂರು,ಏ.18-
ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಶಿಕ್ಷಣ ಕೋರ್ಸುಗಳ ಪ್ರವೇಶಕ್ಕೆ ನಡೆಸಲಾದ ಸಿಇಟಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಹಾಕಿಕೊಂಡಿದ್ದ ಜನಿವಾರವನ್ನು ಪರೀಕ್ಷೆಗೆ ಮುನ್ನ ತೆಗೆಸಿದ ಕ್ರಮ ವಿವಾದ ಸೃಷ್ಟಿಸಿದೆ.
ಶಿವಮೊಗ್ಗ ಹಾಗೂ ಬೀದರ್‌ನಲ್ಲಿ ಸಿಇಟಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗಳು ಹಾಕಿಕೊಂಡಿದ್ದ ಜನಿವಾರ ತೆಗೆಯುವಂತೆ ಪರೀಕ್ಷೆಯ ಮೇಲ್ವಿಚಾರಕರು ಸೂಚಿಸಿದ್ದರು. ಪರೀಕ್ಷೆಗೆ ಸಿಇಟಿ ಪ್ರಾಧಿಕಾರ ಹೊರಡಿಸಿರುವ ಮಾರ್ಗಸೂಚಿ ಅನುಸಾರ ತಾವು ಕ್ರಮ ಕೈಗೊಂಡಿರುವಾಗಿ ಅಧಿಕಾರಿಗಳು ತಿಳಿಸಿದ್ದರು
ಈ ಪ್ರಕರಣಕ್ಕೆ ರಾಜ್ಯಾದ್ಯಂತ ಖಂಡನೆ ವ್ಯಕ್ತವಾಗಿದೆ. ಜನಿವಾರ ತೆಗೆಸಿದ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯಗಳು ಕೇಳಿ ಬಂದಿದೆ. ಇದರ ಬೆನ್ನಲ್ಲೇ ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ಈ ಪ್ರಕರಣದ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜನಿವಾರ ತೆಗೆಸಿದ ಪ್ರಕರಣ ಕುರಿತಂತೆ ಉನ್ನತ
ಅಧಿಕಾರಿಗಳಿಂದ ವರದಿ ಪಡೆದು ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. ಮತ್ತೊಂದೆಡೆ, ಶಿವಮೊಗ್ಗದಲ್ಲಿ ಜನಿವಾರ ತೆಗೆಸಿದ ಅಧಿಕಾರಿಯ ಅಮಾನತಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸೂಚಿಸಿದ್ದಾರೆ.
ವಿದ್ಯಾರ್ಥಿಯ ಜನಿವಾರ ತೆಗೆಯುವ ಅಧಿಕಾರ ಯಾವ ಅಧಿಕಾರಿಗೂ ಇಲ್ಲ ಈ ರೀತಿ ಮಾಡಿರುವುದು ಸರಿಯಲ್ಲ. ಈ ವಿಚಾರ ತಮ್ಮ ವ್ಯಾಪ್ತಿಗೆ ಬರದಿದ್ದರೂ ಶಿವಮೊಗ್ಗ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿರುವುದರಿಂದ ಅಧಿಕಾರಿಯ ಅಮಾನತ್ತಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು,