ಬೆಂಗಳೂರು,ಜೂ.26:
ಈ ವರ್ಷಾಂತ್ಯಕ್ಕೆ ರಾಜ್ಯ ಸರ್ಕಾರದಲ್ಲಿ ಕೆಲವು ಬದಲಾವಣೆಗಳಾಗಲಿವೆ.ಆದರೆ ಮುಖ್ಯಮಂತ್ರಿ ಹುದ್ದೆಯಂತಹ ದೊಡ್ಡ ಬದಲಾವಣೆ ಇಲ್ಲ ಎಂದು ಲೋಕೋಪಯೋಗಿ ಮಂತ್ರಿ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಾವು ಸೇರಿದಂತೆ ಕೆಲವು ಮಂತ್ರಿಗಳು ದೆಹಲಿಗೆ ತೆರಳಿದ್ದರಲ್ಲಿ ವಿಶೇಷ ಏನೂ ಇಲ್ಲ. ಮುಖ್ಯಮಂತ್ರಿ ಜೊತೆ ದೆಹಲಿಗೆ ಹೋಗಿದ್ದೆವು ಅಷ್ಟೆ. ರಾಷ್ಟ್ರಪತಿಯವರನ್ನು ಭೇಟಿ ಮಾಡಿದ್ದೆವು. ದೆಹಲಿಗೆ ಹೋದಾಗಲೆಲ್ಲಾ ವರಿಷ್ಠರನ್ನು ಭೇಟಿ ಮಾಡುತ್ತೇವೆ. ಮುಖ್ಯಮಂತ್ರಿಯವರು ವೈಯಕ್ತಿಕವಾಗಿ ಭೇಟಿಯಾಗಿದ್ದಾರೆ. ನಾವು ಎಲ್ಲರನ್ನೂ ಒಟ್ಟಿಗೆ ಭೇಟಿ ಮಾಡಿದೆವು’ ಎಂದು ತಿಳಿಸಿದರು.
ದೆಹಲಿಗೆ ಹೋದ ಮೇಲೆ ಸಕ್ರಿಯವಾಗುವುದು ಸ್ವಾಭಾವಿಕ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ ಆಗಿಲ್ಲ. ಯುದ್ಧ ಇದ್ದಾಗ ಶಸ್ತ್ರ ಹಿಡಿಯಬೇಕು. ಯುದ್ಧ ಇಲ್ಲದೇ ಇರುವಾಗ ಶಸ್ತ್ರ ಹಿಡಿಯುವ ಅಗತ್ಯ ಇಲ್ಲ’ ಎಂದೂ ಹೇಳಿದರು
ನಾನು ಈಗ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ.ಇದಕ್ಕಾಗಿ ಯಾವುದೇ ಪ್ರಯತ್ನ ನಡೆಸುತ್ತಿಲ್ಲ
‘ವರಿಷ್ಠರು ಎಲ್ಲವನ್ನೂ ಗಮನಿಸುತ್ತಾರೆ. ಯಾರಿಗೆ ಏನು ಕೊಡಬೇಕೆಂದು ಹೈಕಮಾಂಡ್‌ಗೆ ಗೊತ್ತಿದೆ’ ಎಂದರು.
ಶಾಸಕ ಬಿ.ಆರ್. ಪಾಟೀಲ ಅವರ ಹೇಳಿಕೆ ವಿಚಾರವೂ ದೆಹಲಿಯಲ್ಲಿ ಚರ್ಚೆ ಆಗಿದೆ. ಈ ಬಗ್ಗೆ ಮುಖ್ಯಮಂತ್ರಿ ಜೊತೆ ವರಿಷ್ಠರು ಮಾತನಾಡಿದ್ದಾರೆ.
‘ಅನುದಾನ, ವರ್ಗಾವಣೆ ಎಂದು ಹೇಳಲು ಆಗುವುದಿಲ್ಲ. ಕ್ಷೇತ್ರದಲ್ಲಿ ಬೇರೆ ಬೇರೆ ಸಮಸ್ಯೆಗಳು ಇರುತ್ತದೆ. ಶಾಸಕ ರಾಜು ಕಾಗೆ ಅವರು ಒಂದು ವರ್ಷದಿಂದ ನನ್ನ ಬಳಿಯೂ ಸಾಕಷ್ಟು ಹೇಳಿದ್ದಾರೆ. ಹಾಗೆಂದು, ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ. ಮುಖ್ಯಮಂತ್ರಿ ಎಲ್ಲವನ್ನೂ ಸರಿ ಮಾಡುತ್ತಾರೆ’ ಎಂದು ಹೇಳಿದರು
ಜಲಸಂಪನ್ಮೂಲ ಇಲಾಖೆಯಿಂದ ಅನುದಾನ ಸಿಕ್ಕಿಲ್ಲ’ ಎಂಬ ಶಾಸಕರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನೀರಾವರಿ ಸಮಸ್ಯೆ ಬಗ್ಗೆ ಶಾಸಕ ರಾಜು ಕಾಗೆ ಮೊದಲಿನಿಂದಲೂ ಹೇಳುತ್ತಲೇ ಇದ್ದಾರೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ಬಂದಿದೆ. ಈ ಬಗ್ಗೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಕರೆದು ಮುಖ್ಯಮಂತ್ರಿ ಹೇಳುತ್ತಾರೆ’ ಎಂದರು.
ಜಲಸಂಪನ್ಮೂಲ ಇಲಾಖೆಯಲ್ಲಿ ಹಣ ಇಲ್ಲ ಎಂದವರು ಯಾರು? ಇಲಾಖೆಯಲ್ಲಿ 25 ಸಾವಿರ ಕೋಟಿ ಹಣ ಇದೆ. ಬಾಕಿ ಬಿಲ್‌ಗಳೂ ಕೂಡ ಇವೆ. ಯಾವ ಸರ್ಕಾರ ಬಂದರೂ ಆರಂಭದ ಮೂರು ವರ್ಷದಷ್ಟು ಬಿಲ್ ಬಾಕಿ ಇದ್ದೆ ಇರುತ್ತದೆ’ ಎಂದು ಸ್ಪಷ್ಟಪಡಿಸಿದರು.
Previous Articleಆಡಳಿತದಲ್ಲಿ ಪೂರ್ಣ ಪ್ರಮಾಣದಲ್ಲಿರಲಿ ಕನ್ನಡ
Next Article ಮಂತ್ರಿ ಕೆ.ಎನ್.ರಾಜಣ್ಣ ಹೇಳಿದ ಭವಿಷ್ಯ