ಬೆಂಗಳೂರು,ಆ.25:
ಅಸಹಜ ಸಾವುಗಳ ಆರೋಪದ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳದ ಪಾವಿತ್ರಕ್ಕೆ ಧಕ್ಕೆ ತರುವ ಪ್ರಯತ್ನ ನಡೆದಿದೆ ಜೊತೆಗೆ ಹಿಂದೂ ಧರ್ಮಕ್ಕೆ ಅಪಚಾರ ವೆಸಗಲು ದೊಡ್ಡ ಪ್ರಮಾಣದ ಪಿತೂರಿ ನಡೆದಿದ್ದು ಈ ಬಗ್ಗೆ ರಾಷ್ಟ್ರೀಯ ತನಿಖಾ ಆಯೋಗದ ಮೂಲಕ ತನಿಕೆ ನಡೆಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಧರ್ಮಸ್ಥಳದ ವಿರುದ್ಧ ಮಾಡಲಾದ ಆರೋಪಗಳಿಂದ ಜನರ ಮನಸ್ಸಿನಲ್ಲಿ ಗೊಂದಲ ಉಂಟಾಗಿದೆ ಇದನ್ನು ದೂರ ಮಾಡುವ ದೃಷ್ಟಿಯಿಂದ ಸೆಪ್ಟೆಂಬರ್ ಒಂದರಿಂದ ಬಿಜೆಪಿ ಧರ್ಮಸ್ಥಳ ಚಲೋ ಅಭಿಯಾನ ನಡೆಸಲಾಗುವುದು ಎಂದು ಹೇಳಿದರು.
ಧರ್ಮಸ್ಥಳ ವಿರುದ್ಧ ಆರೋಪ ಬಂದಾಗ ಕೋಟ್ಯಂತರ ಭಕ್ತರಲ್ಲಿ ಆತಂಕ ಆದ ಹಾಗೆ ನಮಗೂ ಆತಂಕ ಆಗಿತ್ತು. ಎಲ್ಲಾ ಆರೋಪಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಲಿ ನೋಡೋಣ ಎಂದು ನಾವು ಸುಮನಿದ್ದವು. ಆದರೆ, ಈ ತನಿಖೆ, ಅಪಪ್ರಚಾರಕ್ಕೆ ಕಡಿವಾಣ ಹಾಕಲಿಲ್ಲ. ಬದಲಿಗೆ ಇನ್ನಷ್ಟು ಅನುಮಾನಗಳು ಉಂಟಾಗುವಂತೆ ಮಾಡಿದೆ ಈ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರದ ಜೊತೆ ನಾವಿದ್ದೇವೆ ಎಂಬ ಸಂದೇಶ ನೀಡಲು ಧರ್ಮಸ್ಥಳ ಛಲೋ ನಡೆಸುತ್ತಿರುವುದಾಗಿ ತಿಳಿಸಿದರು
ರಾಜ್ಯ ಸರ್ಕಾರ ಧರ್ಮಸ್ಥಳ ವಿಚಾರದಲ್ಲಿ ಎಡವಿದೆ.ಆ ಕಾರಣಕ್ಕಾಗಿಯೇ ಕೆಲವು ಕಾಂಗ್ರೆಸ್ ನಾಯಕರು ಕೇಸರಿ ಶಲ್ಯ ಹಾಕಿಕೊಂಡು ಧರ್ಮಸ್ಥಳಕ್ಕೆ ಹೊರಟಿದ್ದಾರೆ.ಕಾಂಗ್ರೆಸ್‌ನವರು ಧರ್ಮಸ್ಥಳ ಭೇಟಿ ಪಾಪ ಪ್ರಾಯಶ್ಚಿತ್ತಕ್ಕಾಗಿ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಆಯೋಜಿಸಿರುವ ಧರ್ಮಸ್ಥಳ ಚಲೋ ಹಿಂದೂಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ.ಇದರಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು.ನಾವು ಬಾಯಿ ಮುಚ್ಚಿಕೊಂಡಿರಲು ಕಾಂಗ್ರೆಸ್ ನವರಲ್ಲ. ಈ ಸರ್ಕಾರವನ್ನು ಬಗ್ಗಿಸುವ ಶಕ್ತಿ ಹಿಂದೂಗಳಿಗೆ ಇದೆ ಎಂದು ಹೇಳಿದರು
ಉಪ ಮುಖಮಂತ್ರಿ ಡಿ,ಕೆ ಶಿವಕುಮಾರ್ ಅವರ ದೈವಭಕ್ತಿ ಬಗ್ಗೆ ನಾನು ಪ್ರಶ್ನೆ ಮಾಡುವುದಿಲ್ಲ. ಅವರಿಗೂ ಸಹ ಧರ್ಮಸ್ಥಳದ ಬಗ್ಗೆ ಶ್ರದ್ಧೆ ಭಕ್ತಿ ಇದೆ.ಆದರೆ, ಷಡ್ಯಂತ್ರದ ಬಗ್ಗೆ ಉಪಮುಖ್ಯಮಂತ್ರಿಯಾಗಿ ಅವರು ಕೈಕಟ್ಟಿ ಕೂರುವುದು ಸರಿಯಲ್ಲ. ಸಿಎಂ ಮೇಲೆ ಒತ್ತಡ ತಂದು ಪ್ರಕರಣವನ್ನು ಎನ್‌ಐಎಗೆ ವಹಿಸಲಿ ಎಂದು ಆಗ್ರಹಿಸಿದರು.
ಧರ್ಮಸ್ಥಳದ ವಿರುದ್ಧ ದೊಡ್ಡ ಮಟ್ಟದಲ್ಲಿ ಷಡ್ಯಂತ್ರ ನಡೆದಿದೆ. ಈ ಅಪಪ್ರಚಾರದ ಹಿಂದೆ ಇರುವ ಎಲ್ಲಾ ಶಕ್ತಿಗಳು ಬೆಳಕಿಗೆ ಬರಲೇಬೇಕು ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು ಹೀಗಾಗಿ ಪ್ರಕರಣವನ್ನು ಎನ್ ಐಎ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.