ಬೆಂಗಳೂರು,ಸೆ.16:
ವೈದ್ಯಕೀಯ ಶಿಕ್ಷಣ ಪಡೆಯುವುದು ಅನೇಕ ವಿದ್ಯಾರ್ಥಿಗಳ ಕನಸಾಗಿರುತ್ತದೆ. ಇದಕ್ಕಾಗಿ ಹಗಲು ರಾತ್ರಿ ಕಷ್ಟಪಟ್ಟು ಓದುತ್ತಾರೆ. ಅನೇಕ ಕೋಚಿಂಗ್ ಸೆಂಟರ್ ಗಳಲ್ಲಿ ತರಬೇತಿ ಪಡೆದು ಸರ್ಕಾರಿ ಕೋಟಾದಡಿ ಸೀಟು ಗಿಟ್ಟಿಸಲು ಪ್ರಯತ್ನ ನಡೆಸುತ್ತಾರೆ.
ಆದರೆ ಇಲ್ಲಿ 21 ವಿದ್ಯಾರ್ಥಿಗಳು ಸರ್ಕಾರದ ನಿಯಮಗಳನ್ನು ದುರುಪಯೋಗ ಪಡಿಸಿಕೊಂಡು ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಸೀಟು ಗಿಟ್ಟಿಸಲು ಪ್ರಯತ್ನ ನಡೆಸಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅಂಗವಿಕಲ ಕೋಟಾದಲ್ಲಿ ಕೆಲವು ವೈದ್ಯಕೀಯ ಸೀಟುಗಳನ್ನು ಮೀಸಲಿಡಲಾಗಿದೆ ಇದನ್ನು ಗಿಟ್ಟಿಸಿಕೊಳ್ಳಲು 21 ವಿದ್ಯಾರ್ಥಿಗಳು ಪ್ರಯತ್ನ ನಡೆಸಿರುವುದನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪತ್ತೆ ಹಚ್ಚಿದೆ
2025 ನೇ ಸಾಲಿನ ಯುಜಿಸಿಇಟಿ ಮತ್ತು ಯುಜಿ ನೀಟ್ ಸೀಟು ಕೋರಿ 21 ಅಭ್ಯರ್ಥಿಗಳು ಅಂಗವಿಕಲ ಕೋಟಾದಡಿ ಅರ್ಜಿ ಹಾಕಿದ್ದರು. ವಿಶೇಷವೆಂದರೆ ಈ ಅರ್ಜಿದಾರರು ಆರಂಭದಲ್ಲಿ ಈ ವಿಭಾಗದಲ್ಲಿ ಅರ್ಜಿ ಹಾಕದೆ ಆನಂತರ ಅರ್ಜಿ ತಿದ್ದುಪಡಿ ಮೂಲಕ ಅಂಗವಿಕಲ ಮೀಸಲಾತಿ ಕೋರಿದ್ದಾರೆ.
ತಿದ್ದುಪಡಿಯ ಮೂಲಕ ಮನವಿ ಮಾಡಿರುವ ಅರ್ಜಿಗಳ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಅನುಮಾನ ಬಂದಿದೆ. ಹೀಗಾಗಿ ಅದನ್ನು ಗಮನಿಸಿದಾಗ ತಿದ್ದುಪಡಿ ಕೋರಿರುವ ಎಲ್ಲಾ ಅರ್ಜಿದಾರರು ತಮಗೆ ಕಿವಿ ಕೇಳಿಸುವುದಿಲ್ಲ ಎಂದು ಹೇಳಿದ್ದಾರೆ.
ಇವರ ಬಗ್ಗೆ ಅನುಮಾನಗೊಂಡ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಅರ್ಜಿ ಹಾಕಿದ್ದ 21 ಮಂದಿಯನ್ನ ನಿಯಾಮವಳಿಗಳ ಪ್ರಕಾರ ವಿಕ್ಟೋರಿಯಾ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕಳುಹಿಸಿಕೊಟ್ಟರು. ಇಲ್ಲಿಂದ ಆಡಿಯೋ ಗ್ರಾಂ ಮತ್ತು ಅಂಗವಿಕಲತೆಯ ಪರೀಕ್ಷೆಗಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಇವರನ್ನು ಪರೀಕ್ಷೆ ಮಾಡಿದ ವಿಕ್ಟೋರಿಯಾ ಮತ್ತು ನಿಮಾನ್ಸ್ ಆಸ್ಪತ್ರೆಯ ವೈದ್ಯರು ಪ್ರಮಾಣ ಪತ್ರಗಳನ್ನು ಪರೀಕ್ಷಾ ಪ್ರಾಧಿಕಾರಕ್ಕೆ ರವಾನಿಸಿದ್ದಾರೆ ಆಗ 21 ಮಂದಿಯ ಅಸಲಿ ಕಹಾನಿ ಬೆಳಕಿಗೆ ಬಂದಿದೆ.
ವೈದ್ಯಕೀಯ ಪರೀಕ್ಷೆಯಲ್ಲಿ ಅಕ್ರಮ ಸಾಬೀತಾಗಿದ್ದು, ನಕಲಿ ಅಂಗವಿಕಲ ಪ್ರಮಾಣ ಪತ್ರವನ್ನು ಸಲ್ಲಿಸಿರುವುದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಗಮನಕ್ಕೆ ಬಂದಿದೆ. ಕೂಡಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಅಂಗವಿಕಲ ಕೋಟಾದಡಿಯಲ್ಲಿ ಕೋರಿದ ಈ 21 ಮಂದಿ ಅಭ್ಯರ್ಥಿಗಳು ಮೆಡಿಕಲ್ ಬೋರ್ಡ್ ಚೇರ್ಮನ್ ನಕಲಿ ಸಹಿ, ಸೀಲ್ ಬಳಸಿ ನಕಲಿ ಅಂಗವಿಕಲ ವೈದ್ಯಕೀಯ ಪ್ರಮಾಣ ಪತ್ರವನ್ನ ಸಲ್ಲಿಸಿದ್ದರು.
ಇದರ ಜೊತೆಗೆ ಐಡಿ ಕಾರ್ಡ್ ನ್ನು ಬಹುತೇಕರು ವಿಜಯನಗರ ಜಿಲ್ಲೆಯ ಹೊಸಪೇಟೆ ಸರ್ಕಾರಿ ಆಸ್ಪತ್ರೆಯಿಂದ ಪ್ರಮಾಣ ಪತ್ರವನ್ನ ಪಡೆದಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಭ್ಯರ್ಥಿಗಳಿಗೆ ಮೂಲ ದಾಖಲೆಗಳನ್ನ ತಂದು ಹಾಜರುಪಡಿಸುವಂತೆ ನೋಟಿಸ್ ನೀಡಲಾಗಿತ್ತು. ಈ ವೇಳೆಯೂ ಅಕ್ರಮ ಪತ್ತೆಯಾಗಿದೆ. ನಿಮ್ಹಾನ್ಸ್ ಆಸ್ಪತ್ರೆಯಿಂದ ಮೆಡಿಕಲ್ ಸರ್ಟಿಫಿಕೇಟ್ ಕೊಟ್ಟಿದ್ದಾರೆಂದು ನೀಡಿದ ಸರ್ಟಿಫಿಕೇಟ್ ಕೂಡ ನಕಲಿ ಎನ್ನುವುದುದು ಬೆಳಕಿಗೆ ಬಂದಿದೆ.
Previous Articleಆಪ್ತನಿಗೆ ಮತ್ತೆ ಮಂತ್ರಿ ಪಟ್ಟ ಕಟ್ಟಲು ಸಿಎಂ ಕಸರತ್ತು.
Next Article ಕಾಂಗ್ರೆಸ್ ಶಾಸಕನ ಆಯ್ಕೆ ಅಸಿಂಧು ಎಂದ ಹೈಕೋರ್ಟ್.