ಬೆಂಗಳೂರು,ಸೆ.17-
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಹಗರಣದ ಸಂಬಂಧ ಮಾಜಿ ಆಯುಕ್ತ ದಿನೇಶ್ ಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಬಂಧಿಸಿ ತೀವ್ರ ವಿಚಾರಣೆ ಕೈಗೊಂಡಿದ್ದಾರೆ. ಈ ವೇಳೆ ದಿನೇಶ್ ಕುಮಾರ್ ಅವರು ಹಲವಾರು ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ.
ಇಡಿ ಅಧಿಕಾರಿಗಳು ವಿಚಾರಣೆಯ ಸಮಯದಲ್ಲಿ ದಿನೇಶ್ ಕುಮಾರ್ ಅವರು ಆಯುಕ್ತರಾಗಿದ್ದ ಸಮಯದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಈ ದಾಖಲೆಗಳ ಮೂಲಕ ಸೈಟ್ ಗಳನ್ನು ಮರುಹಂಚಿಕೆ ಮಾಡಿರುವ ದಾಖಲೆಗಳನ್ನು ಮುಂದಿಟ್ಟಿದ್ದಾರೆ.
ಈ ದಾಖಲೆಗಳನ್ನು ನೋಡುತ್ತಿದ್ದಂತೆ ಸುಸ್ತಾಗಿ ಕುಸಿದು ಕುಳಿತ ದಿನೇಶ್ ಕುಮಾರ್ ಅವರು ಕೆಲವು ನಿಮಿಷಗಳ ಕಾಲ ಏನನ್ನು ಮಾತನಾಡದೆ ಮೌನವಹಿಸಿದರು ಎಂದು ಇಡಿ ಮೂಲಗಳು ತಿಳಿಸಿವೆ.
ನಂತರ ಸಾವರಿಸಿಕೊಂಡ ಅವರು, ಎಲ್ಲಾ ದಾಖಲೆಗಳನ್ನು ಮತ್ತೊಮ್ಮೆ ಓದಿ ಪರಿಶೀಲಿಸಿದರು. ಈ ರೀತಿಯ ದಾಖಲೆಗಳನ್ನು ಸೃಷ್ಟಿಸಲು ಉಂಟಾದ ಅನಿವಾರ್ಯತೆ ಮತ್ತು ಆದರ ಹಿಂದಿರುವ ಕೆಲವು ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಇದರಲ್ಲಿ ತಾವು ಯಾವುದೇ ತಪ್ಪು ಮಾಡಿಲ್ಲ ಉನ್ನತ ಮಟ್ಟದಲ್ಲಿರುವ ವ್ಯಕ್ತಿಗಳು ಒತ್ತಡ ತಂದ ಪರಿಣಾಮವಾಗಿ ಈ ರೀತಿಯ ನಿರ್ಧಾರ ಕೈಗೊಳ್ಳಬೇಕಾಯಿತು ಎಂದು ವಿವರಣೆ ನೀಡಿರುವುದಾಗಿ ಗೊತ್ತಾಗಿದೆ.
ತಾವು ನಕಲಿ ದಾಖಲೆಗಳನ್ನು ಸೃಷ್ಟಿಸಿ ಮರುಹಂಚಿಕೆ ಆದೇಶ ಹೊರಡಿಸಲು ಅನಿವಾರ್ಯವಾದ ಕೆಲವು ವಿದ್ಯಮಾನಗಳ ಬಗ್ಗೆ ವಿವರಣೆ ಮಾತ್ರವಲ್ಲದೆ ಅದಕ್ಕೆ ಸಂಬಂಧಪಟ್ಟ ಕೆಲವು ದಾಖಲೆಗಳ ಕುರಿತಂತೆಯೂ ದಿನೇಶ್ ಕುಮಾರ್ ತನಿಖಾ ತಂಡಕ್ಕೆ ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ.
ತಾವು ಪ್ರಾಧಿಕಾರದ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಹಿಡಿದು ಆ ಹುದ್ದೆಯಿಂದ ನಿರ್ಗಮಿಸುವವರೆಗೆ ಯಾವ ರೀತಿಯ ಒತ್ತಡವನ್ನು ಎದುರಿಸಬೇಕಾಗಿತ್ತು. ಯಾರಲ್ಲ ತಮಗೆ ಕರೆ ಮಾಡಿ ಕೆಲಸ ಮಾಡುವಂತೆ ಹೇಳಿದರು ಎಂಬ ಕುರಿತು ಇಡೀ ಅಧಿಕಾರಿಗಳ ಮುಂದೆ ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ದಿನೇಶ್ ಕುಮಾರ್ ನೀಡಿರುವ ಎಲ್ಲ ಹೇಳಿಕೆಗಳನ್ನು ವಿಡಿಯೋ ಚಿತ್ರಣ ಮಾಡಿಕೊಂಡಿರುವ ಅಧಿಕಾರಿಗಳು ಅದರ ಆಧಾರದಲ್ಲಿ ಇನ್ನಷ್ಟು ದಾಖಲೆಗಳಿಗಾಗಿ ಹುಡುಕಾಟ ನಡೆಸಲು ತೀರ್ಮಾನಿಸಿದ್ದಾರೆ ಇದಕ್ಕಾಗಿ ಪ್ರತ್ಯೇಕ ತಂಡ ನಿಯೋಜಿಸುವ ತೀರ್ಮಾನ ಕೈಗೊಂಡಿದ್ದಾರೆ ಎಂದು ಇಡೀ ಮೂಲಗಳು ತಿಳಿಸಿವೆ.
2022ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಜಿ.ಟಿ.ದಿನೇಶ್ ಕುಮಾರ್ ಅಧಿಕಾರ ಸ್ವೀಕರಿಸಿದ್ದರು. ದಿನೇಶ್ ಕುಮಾರ್ ವಿರುದ್ಧ ಮುಡಾದಲ್ಲಿ 50:50 ಅನುಪಾತದಡಿ ನಿವೇಶನ ಹಂಚಿಕೆಯಲ್ಲಿ ಅಕ್ರಮ ಆರೋಪ ಕೇಳಿ ಬಂದ ಹಿನ್ನೆಲೆ ಸರ್ಕಾರ ಅವರನ್ನು ವರ್ಗಾವಣೆ ಮಾಡಿತ್ತು. ಯಾವುದೇ ಸ್ಥಳ ತೋರಿಸದೇ ದಿನೇಶ್ ಕುಮಾರ್ ಅವರನ್ನು ವರ್ಗಾವಣೆ ಮಾಡಿದ್ದ ಸರ್ಕಾರ ನಂತರ ಹಾವೇರಿ ವಿವಿಯ ಕುಲಸಚಿವ ಹುದ್ದೆಯನ್ನು ನೀಡಿತ್ತು. ಕುಲಸಚಿವ ಹುದ್ದೆಯನ್ನು ನೀಡಿದ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಸರ್ಕಾರ ಕೊನೆಗೆ ಆ ಆದೇಶವನ್ನೇ ರದ್ದು ಮಾಡಿತ್ತು.
ಪರ್ಯಾಯ ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ದೊಡ್ಡ ಪ್ರಮಾಣದ ಅಕ್ರಮ ನಡೆದಿದೆ ಎಂದು ಆರೋಪಿಸಲಾದ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಇಡಿ ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ದಿನೇಶ್ ಕುಮಾರ್ ಅವರಿಗೆ ಸೂಚನೆ ನೀಡಿತ್ತು.
ಹಗರಣದ ಸಂಬಂಧ ವಿಚಾರಣೆಗೆ ಹಾಜರಾದ ದಿನೇಶ್ ಕುಮಾರ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ದಿನೇಶ್ ಅಕ್ರಮ ಹಣ ವರ್ಗಾವಣೆ ಮಾಡಿರುವ ಹಿನ್ನಲೆಯಲ್ಲಿ ಇಡಿ ವಿಚಾರಣೆಗೆ ಹಾಜರಾಗಲು ನೋಟೀಸ್ ಜಾರಿಗೊಳಿಸಿತ್ತು.
ನಕಲಿ ದಾಖಲೆಗಳನ್ನು ದಿನೇಶ್ ಸೃಷ್ಟಿ ಮಾಡಿ ಈ ದಾಖಲೆಗಳ ಮೂಲಕ ಸೈಟ್ ಗಳನ್ನು ಮರುಹಂಚಿಕೆ ಮಾಡಿ ಲಾಭ ಮಾಡಿದ್ದಾರೆ. ಹಣ ಪಡೆದು ಆಸ್ತಿ ಗಳಿಕೆ ಮಾಡಿರುವುದಕ್ಕೆ ದಾಖಲೆ ಪತ್ತೆಯಾಗಿದೆ ಎಂದು ಇಡಿ ಹೇಳಿದೆ.
Previous Articleದಿನೇಶ್ ಗುಂಡೂರಾವ್ ಗೆ ಲೋಕಾಯುಕ್ತ ನೋಟಿಸ್.
Next Article ಸದಾನಂದ ಗೌಡರಿಗೆ ಸೈಬರ್ ವಂಚಕರ ಕಾಟ.