ಬೆಂಗಳೂರಿನ ರಸ್ತೆ ಗುಂಡಿಗಳ ಅವಾಂತರದ ಬಗ್ಗೆ ಲಾಜಿಸ್ಟಿಕ್ಸ್ ಟೆಕ್ ಪ್ಲಾಟ್‌ಫಾರ್ಮ್ ಬ್ಲಾಕ್‌ಬಕ್ ಸಹ-ಸಂಸ್ಥಾಪಕ ರಾಜೇಶ್ ಯಾಬಾಜಿ ಅಸಮಾಧಾನ ಹೊರಹಾಕಿದರುವ ಬೆನ್ನಲ್ಲೇ ಎಚ್ಚೆತ್ತ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಗರದ ರಸ್ತೆಗಳ ಗುಂಡಿ ಮುಚ್ಚಲು ಟಾರ್ಗೆಟ್ ನೀಡಿದ್ದಾರೆ.
ಕುರಿತಾಗಿ ಸಾಮಾಜಿಕ ಜಾಲತಾಣ ಎಕ್ಷ್ ನಲ್ಲಿ ಮಾಹಿತಿ ನೀಡಿರುವ ಅವರು, “ಬೆಂಗಳೂರಿನ ರಸ್ತೆ ಗುಂಡಿಗಳ ಸಮಸ್ಯೆಯನ್ನು ಬಗೆಹರಿಸಲು ನವೆಂಬರ್ ಒಳಗೆ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಗುತ್ತಿಗೆದಾರರಿಗೆ ಅಂತಿಮ ಗಡುವು ನೀಡಲಾಗಿದೆ. ಸ್ವಚ್ಛ ಬೆಂಗಳೂರು ಹಾಗೂ ಸುಗಮ ಸಂಚಾರವೇ ನಮ್ಮ ಗುರಿಯಾಗಿರುವುದರಿಂದ ಆದಷ್ಟು ಬೇಗ ರಸ್ತೆ ಗುಂಡಿಗಳಿಗೆ ಜಿಬಿಎ ಮುಕ್ತಿ ನೀಡಲಿದೆ” ಎಂದಿದ್ದಾರೆ
ರಾಜ್ಯ ಸರ್ಕಾರ ನೀಡಿದ್ದ ಮಾಹಿತಿಯ ಪ್ರಕಾರ ಬೆಂಗಳೂರಿನ 69 ರಸ್ತೆಗಳು ಗುಂಡಿಮಯವಾಗಿವೆ. ಬಿಬಿಎಂಪಿ ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳ ಪೈಕಿ ಗುಂಡಿಗಳಿಲ್ಲದ ರಸ್ತೆಗಳ ಸಂಖ್ಯೆ 485 ಇವೆ. ಆದರೆ ಹೆಚ್ಚು ಸಂಖ್ಯೆಯಲ್ಲಿ ಗುಂಡಿಗಳು ಇರುವ ರಸ್ತೆಗಳ ಸಂಖ್ಯೆ 69 ರಷ್ಟಿದೆ.
ಬೆಂಗಳೂರು ನಗರದಲ್ಲಿ ಕಳೆದ 2 ವರ್ಷಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿಸಲು ರಾಜ್ಯ ಸರ್ಕಾರ ಸುಮಾರು 19 ಕೋಟಿ ಖರ್ಚು ಮಾಡಿದೆ. ಅದೇ ರೀತಿಯಲ್ಲಿ 2023 ಹಾಗೂ 24ನೇ ಸಾಲಿನಲ್ಲಿ 7 ಕೋಟಿ ಖರ್ಚು ಮಾಡಲಾಗಿದೆ. 2024 ಹಾಗೂ 25ನೇ ಸಾಲಿನಲ್ಲಿ 12.25 ಕೋಟಿಯಷ್ಟು ಖರ್ಚು ಮಾಡಲಾಗಿದೆ.
2024-25 ರಲ್ಲಿ ಬೆಂಗಳೂರಿನಲ್ಲಿ ಒಟ್ಟು 1,78,792 ಚದರ ಮೀಟರ್ ರಸ್ತೆ ಗುಂಡಿಗಳನ್ನ ಮುಚ್ಚಲಾಗಿದೆ. 2023 ಹಾಗೂ 24 ರಲ್ಲಿ ಒಟ್ಟು 1,07,771 ಚದರ ಮೀಟರ್ ರಸ್ತೆ ಗುಂಡಿಗಳನ್ನು ಮುಚ್ಚಿಸಲಾಗಿದೆ. ಹೀಗಿದ್ದರೂ ಹಲವು ರಸ್ತೆಗಳಲ್ಲಿ ಗುಂಡಿಗಳು ಎದ್ದು ಕಾಣಿಸುತ್ತಿವೆ. ಇವುಗಳನ್ನು ಡೆಡ್ ಲೈನ್ ಒಳಗಡೆ ಮುಚ್ಚಿಸಲಾಗುತ್ತಾ? ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ.