ಬೆಂಗಳೂರು, ನ.26: ಕರ್ನಾಟಕ ಹಾಲು ಒಕ್ಕೂಟದ ನಂದಿನಿ ತುಪ್ಪ ಗುಣಮಟ್ಟ ಮತ್ತು ಬೆಲೆಯ ದೃಷ್ಟಿಯಿಂದ ಇಡೀ ದೇಶದಲ್ಲಿಯೇ ಅತ್ಯಂತ ವಿಶ್ವಾಸಾರ್ಹ ಉತ್ಪನ್ನವಾಗಿದೆ.
ದೇಶದ ಎಲ್ಲೆಡೆ ಬಹು ಬೇಡಿಕೆ ಇರುವ ಉತ್ಪನ್ನವನ್ನು ಇದೀಗ ನಕಲು ಮಾಡಿ ಮಾರಾಟ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿರುವ ಬೆನ್ನಲ್ಲೇ ತಮಿಳುನಾಡಿನಲ್ಲಿ ನಕಲಿ ನಂದಿನಿ ತುಪ್ಪ ತಯಾರಿಕೆ ಘಟಕ ಕಾರ್ಯಾಚರಣೆ ಮಾಡುತ್ತಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ಕೆಲವು ತುಪ್ಪ ಮಾರಾಟ ಘಟಕಗಳಲ್ಲಿ ನಂದಿನಿ ಬ್ರಾಂಡಿನ ನಕಲಿ ತುಪ್ಪ ಮಾರಾಟವಾಗುತ್ತಿರುವುದನ್ನು ಪತ್ತೆ ಹಚ್ಚಿದ್ದ ಬೆಂಗಳೂರು ಸಿಸಿಬಿ ಪೊಲೀಸರು ಹಲವರನ್ನು ವಶಕ್ಕೆ ಪಡೆದು ಅಪಾರ ಪ್ರಮಾಣದ ನಕಲಿ ತುಪ್ಪ ವಶಪಡಿಸಿಕೊಂಡಿದ್ದರು.
ನಕಲಿ ತುಪ್ಪಕ್ಕೆ ನಂದಿನಿ ಹೆಸರಿನ ಲೇಬಲ್ ಹಚ್ಚಿ ಮಾರಾಟ ಮಾಡಲಾಗುತ್ತಿತ್ತು ಇಂತಹ ನಕಲಿ ತುಪ್ಪ ಚಾಮರಾಜಪೇಟೆಯ ಗೋಧಾಮಿನಲ್ಲಿ ಸಂಗ್ರಹಿಸಿ ಇಡಲಾಗಿತ್ತು ಈ ಪ್ರಕರಣದಲ್ಲಿ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಪರವಾನಗಿ ಪಡೆದಿದ್ದ ಮಹೇಂದ್ರ ಆತನ ಪುತ್ರ ದೀಪಕ್ ಹಾಗೂ ಮತ್ತೊಬ್ಬ ವಿತರಣೆಗಾರ ಶಿವಕುಮಾರ್ ಸೇರಿದಂತೆ ನಾಲ್ವರನ್ನು ಬಂಧಿಸಿ 1000 ಲೀಟರಿಗೂ ಅಧಿಕ ಪ್ರಮಾಣದ ನಕಲಿ ತುಪ್ಪವನ್ನು ವಶಪಡಿಸಿಕೊಂಡಿದ್ದರು.
ಪ್ರಕರಣದ ತನಿಖೆ ಮುಂದುವರಿಸಿದ ಪೊಲೀಸರು ಇದೀಗ ಮೈಸೂರು ಮೂಲದ ಶಿವಕುಮಾರ್ ಮತ್ತು ಆತನ ಪತ್ನಿ ರಮ್ಯಾ ಎಂಬವರನ್ನು ಬಂಧಿಸಿದ್ದಾರೆ ಈ ಇಬ್ಬರು ನಂದಿನಿ ನಕಲಿ ತುಪ್ಪ ತಯಾರಿಕೆ ಜಾಲದ ಕಿಂಗ್ ಪಿನ್ ಎಂದು ಹೇಳಲಾಗಿದೆ.
ಈಗ್ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು ಈ ಇಬ್ಬರು ನಕಲಿ ತುಪ್ಪ ತಯಾರಿಕೆಗಾಗಿ ತಮಿಳುನಾಡಿನ ಕೊಯಮತ್ತೂರು ಸಮೀಪ ಉತ್ಪಾದನೆ ಘಟಕ ತೆರೆದಿದ್ದಾರೆ ಇಲ್ಲಿ ನಕಲಿ ತುಪ್ಪ ತಯಾರಿಸಿ ಅದಕ್ಕೆ ನಂದಿನಿ ಹೆಸರಿನ ಸ್ಟಿಕರ್ ಗಳನ್ನು ಅಂಟಿಸಿ ಮಾರಾಟ ಮಾಡುತ್ತಿದ್ದರು.
ಪ್ರಕರಣದ ಗಂಭೀರತೆ ಅರಿತು ತನಿಖೆ ಮುಂದುವರಿಸಿರುವ ಸಿಸಿಬಿ ಪೊಲೀಸರು, ಆರೋಪಿ ದಂಪತಿಗಳ ಬ್ಯಾಂಕ್ ಖಾತೆಯಲ್ಲಿದ್ದ ಸುಮಾರು 60 ಲಕ್ಷ ರೂ ಹಣವನ್ನು ಫ್ರೀಜ್ ಮಾಡಿದ್ದಾರೆ. ಅಲ್ಲದೆ, ನಕಲಿ ತುಪ್ಪದಲ್ಲಿ ಏನೆಲ್ಲಾ ಕಳಪೆ ವಸ್ತುಗಳನ್ನು ಮಿಶ್ರಣ ಮಾಡಲಾಗಿದೆ ಎಂಬುದನ್ನು ಪತ್ತೆ ಹಚ್ಚಲು, ವಶಪಡಿಸಿಕೊಂಡ ಮಾದರಿಗಳನ್ನು ಎಫ್‌ಎಸ್‌ಎಲ್ ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ.
ಈ ದಂಪತಿ ಮೇಲೆ ಈ ಹಿಂದೆ ಮೈಸೂರಿನಲ್ಲಿಯೂ ಇದೇ ರೀತಿಯ ನಕಲಿ ಉತ್ಪನ್ನ ತಯಾರಿಕೆಯ ಒಂದು ಕೇಸ್ ದಾಖಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯಕ್ಕೆ ದಂಪತಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಈ ನಕಲಿ ಜಾಲದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಮತ್ತು ಈ ಉತ್ಪನ್ನಗಳು ಎಲ್ಲೆಲ್ಲಾ ವಿತರಣೆಯಾಗಿವೆ ಎಂಬ ಬಗ್ಗೆ ತೀವ್ರ ವಿಚಾರಣೆ ಮುಂದುವರಿಸಿದ್ದಾರೆ.

