ಬೆಂಗಳೂರು : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಸ್ಮಾರ್ಟ್ ಮೀಟರ್ ಯೋಜನೆಯೆಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ವಿಚಾರವಾಗಿ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಹೈಕೋರ್ಟ್ ನಲ್ಲಿ ಬಿಗ್ ರಿಲೀಫ್ ಸಿಕ್ಕಿದೆ. ಯೋಜನೆಯಲ್ಲಿ ದೊಡ್ಡ ಪ್ರಮಾಣದ ಅಕ್ರಮ ನಡೆದಿದೆ ಈ ಬಗ್ಗೆ ಲೋಕಾಯುಕ್ತ ತನಿಖೆಗೆ ಆದೇಶಿಸುವಂತೆ ಕೋರಿ ಬಿಜೆಪಿ ನಾಯಕರು ಸಲ್ಲಿಸಿದ್ದ ಖಾಸಗಿ ದೂರನ್ನು ಹೈಕೋರ್ಟ್ ರದ್ದು ಪಡಿಸಿದೆ. ಅಷ್ಟೇ ಅಲ್ಲ ಖಾಸಗಿ ದೂರಿನ ಸಂಬಂಧ ತನಿಖೆ ನಡೆಸಿ ವರದಿ ನೀಡುವಂತೆ ಜನಪ್ರತಿನಿಧಿಗಳ ನ್ಯಾಯಾಲಯ ಲೋಕಾಯುಕ್ತ ಪೊಲೀಸರಿಗೆ ನೀಡಿದ ಆದೇಶವನ್ನು ಕೂಡ ವಜಾಗೊಳಿಸಿದೆ.
ಸ್ಮಾರ್ಟ್ ಮೀಟರ್ ಯೋಜನೆಯಲ್ಲಿ ದೊಡ್ಡ ಪ್ರಮಾಣದ ಅಕ್ರಮ ನಡೆದಿದೆ ಎಂದು ಆರೋಪಿಸಿದ ಬಿಜೆಪಿ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ ಶಾಸಕರಾದ ಎಸ್ ಆರ್ ವಿಶ್ವನಾಥ್ ಮತ್ತು ಧೀರಜ್ ಮುನಿರಾಜು ಅವರು ಖಾಸಗಿ ದೂರು ಸಲ್ಲಿಸಿದ್ದರು. ಸ್ಮಾರ್ಟ್ ಮೀಟರ್ ಟೆಂಡರ್ ಸುಮಾರ್ 10 ಸಾವಿರ ಕೋಟಿ ರೂಪಾಯಿ ಮೊತ್ತದ್ದಾಗಿರುವ ಕಾರಣ ಜಾಗತಿಕ ಟೆಂಡರ್ ಕರೆಯಬೇಕಿತ್ತು. ಆದರೆ ಕೇವಲ 354 ಕೋಟಿ ರೂ. ವ್ಯವಹಾರ ನಡೆಸುವ ರಾಜಶ್ರೀ ಎಲೆಕ್ಟ್ರಿಕಲ್ಸ್ಗೆ ಟೆಂಡರ್ ನೀಡಲಾಗಿದೆ. 10 ವರ್ಷಕ್ಕೆ 5296 ಕೋಟಿ ರೂಪಾಯಿಗೆ ನೀಡಲಾಗಿರುವ ಟೆಂಡರ್ ಅನ್ನು ಬೇಕೆಂದೇ 997 ಕೋಟಿ ರೂ. ಟೆಂಡರ್ ಎಂಬಂತೆ ಬಿಂಬಿಸಲಾಗಿದೆ.
ಬೆಸ್ಕಾಂ ವ್ಯಾಪ್ತಿಗೆ ಮಾತ್ರ ಈ ಟೆಂಡರ್ ಅನ್ವಯವಾದರೂ ಇತರೆ ಎಸ್ಕಾಂಗಳಿಗೂ ಇದೇ ಸ್ಮಾರ್ಟ್ ಮೀಟರ್ ಖರೀದಿಸಿರುವಂತೆ ಸೂಚಿಸಲಾಗಿದೆ. ಇದು ಸಂಪೂರ್ಣ ಕಾನೂನು ಬಾಹಿರ. ಕೇಂದ್ರದ ಆರ್‌ಡಿಎಸ್‌ಎಸ್ ಯೋಜನೆಯಡಿ 900 ರೂ.ಗೆ ಸಿಗುವ ಮೀಟರ್ ಅನ್ನು 5 ಸಾವಿರದಿಂದ 8,800 ರೂಪಾಯಿಗಳಿಗೆ ಗ್ರಾಹಕರು ಖರೀದಿಸಬೇಕಾಗಿದೆ. ಇದಕ್ಕೆ ಇದಕ್ಕೆಲ್ಲಾ ಬೆಸ್ಕಾಂ ಅಧ್ಯಕ್ಷ ಹಾಗೂ ಇಂಧನ ಸಚಿವ ಕೆ.ಜೆ.ಜಾರ್ಜ್ ಹಾಗೂ ಇತರೆ ಅಧಿಕಾರಿಗಳೇ ಹೊಣೆ ಎಂದು ಬಿಜೆಪಿ ನಾಯಕರು ಆರೋಪ ಮಾಡಿದ್ದರು.
ಈ ಸಂಬಂಧ ಇವರು ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆರೋಪದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತರಿಗೆ ಸೂಚನೆ ನೀಡಿತ್ತು. ಇದನ್ನು ಪ್ರಶ್ನಿಸಿ ಕೆಜೆ ಜಾರ್ಜ್ ಅವರು ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು ಎಂಐ ಅರುಣ್ ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶವನ್ನು ವಜಾಗೊಳಿಸಿದ್ದಾರೆ.

