ಬೆಳಗಾವಿ, ಡಿ.18:
ಸಂಸ್ಕರಿಸದ ತ್ಯಾಜ್ಯ ನೀರು ನದಿಗಳಿಗೆ ಬಿಡುವ ಮೂಲಕ ನದಿಯನ್ನು ಕಲುಷಿತಗೊಳಿಸುತ್ತಿರುವ ನಗರ ಸ್ಥಳೀಯ ಸಂಸ್ಥೆಗಳ ವಿರುದ್ಧ ಮಾಲಿನ್ಯ ನಿಯಂತ್ರಣ ಮಂಡಳಿ ಬ್ರಹ್ಮಾಸ್ತ್ರ ಪ್ರಯೋಗಿಸಲು ಮುಂದಾಗಿದೆ.
ಕಾವೇರಿ, ಕಬಿನಿ, ಅರ್ಕಾವತಿ, ತುಂಗಭದ್ರಾ, ಭದ್ರಾ ಸೇರಿದಂತೆ ವಿವಿಧ ನದಿಗಳಿಗೆ ಸಂಸ್ಕರಿಸದ ಗೃಹ ತ್ಯಾಜ್ಯ ಜಲ ಹರಿಯುತ್ತಿದ್ದು ನದಿ ದಂಡೆಯ 11 ನಗರ ಮತ್ತು ಪುರಸಭೆಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಅರಣ್ಯ ಮತ್ತು ಪರಿಸರ ಮಂತ್ರಿ ಈಶ್ವರ ಬಿ ಖಂಡ್ರೆ ವಿಧಾನಸಭೆಗೆ ತಿಳಿಸಿದರು
ಪ್ರಶ್ನೋತ್ತರ ಕಲಾಪದಲ್ಲಿ ದರ್ಶನ್ ಪುಟ್ಟಣ್ಣಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ನಗರಸಭೆ ಮತ್ತು ಪುರಸಭೆಗಳ ವಿರುದ್ಧ ಈ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದ್ದು, ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣಾ ಹಂತದಲ್ಲಿದೆ ಎಂದು ತಿಳಿಸಿದರು.
12 ನದಿಗಳ ಪಾತ್ರದಲ್ಲಿ 30 ಸ್ಥಳೀಯ ಸಂಸ್ಥೆಗಳಿದ್ದು, ಇಲ್ಲಿ 814 ಎಂ.ಎಲ್.ಡಿ. ಗೃಹ ತ್ಯಾಜ್ಯ ನೀರು ಉತ್ಪತ್ತಿ ಆಗುತ್ತಿದ್ದು, 614 ಎಂ.ಎಲ್.ಡಿ. ಸಂಸ್ಕರಣೆಗೆ ಮಾತ್ರ ಶುದ್ಧೀಕರಣ ಘಟಕ ಇದೆ. 203 ಎಂ.ಎಲ್.ಡಿ. ಜಲ ಶುದ್ಧೀಕರಣಕ್ಕೆ ಘಟಕಗಳಿಲ್ಲ. ಹೀಗಾಗಿ ನಿಯಮಿತವಾಗಿ ಜಲ ತಪಾಸಣೆ ಮಾಡಲಾಗುತ್ತಿದ್ದು, ಜಲ ಶುದ್ಧೀಕರಣಕ್ಕೆ ಕ್ರಮ ವಹಿಸಲು ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದರು.
ಎಲ್ಲ ನದಿಗಳಿಗೆ ಕೈಗಾರಿಕೆ ಮತ್ತು ಗೃಹಗಳ ರೊಚ್ಚು ನೀರನ್ನು ಸಂಸ್ಕರಿಸದೆ ಹರಿಸುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
Previous Articleವಿಧಾನಸಭೆಯಲ್ಲಿ ಕೃಷ್ಣಭೈರೇಗೌಡ ಸವಾಲು
Next Article ಕಲೆಕ್ಷನ್ ಕಿಂಗ್ ಯಾರು ಗೊತ್ತಾ..?!
