ಬೆಂಗಳೂರು,ಡಿ.19: ಅಧಿಕಾರ ಹಸ್ತಾಂತರ, ಕಾನೂನು ಹೋರಾಟ ಸೇರಿದಂತೆ ಹಲವಾರು ಒತ್ತಡದಲ್ಲಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕಾಲರಾತ್ರಿ ಎಳ್ಳು ಅಮವಾಸ್ಯೆಯ ಹಿನ್ನೆಲೆಯಲ್ಲಿ ಅಂಕೋಲಾದ ಆಂದ್ಲೆ ಶ್ರೀ ಜಗದೀಶ್ವರಿ ದೇವಿಗೆ ವಿಶೇಷ ಮಾಲೆ ಪೂಜೆ ನೆರವೇರಿಸಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲದ ಅಧಿವೇಶನದಲ್ಲಿ ಪಾಲ್ಗೊಂಡಿರುವ ಅವರು ಇಂದು ಬೆಳಗ್ಗೆಯೇ ಬೆಳಗಾವಿಯಿಂದ ಹೆಲಿಕ್ಯಾಪ್ಟರ್ ನಲ್ಲಿ ಗೋಕರ್ಣಕ್ಕೆ ಆಗಮಿಸಿದರು ಅಲ್ಲಿ ಮಹಾಬಲೇಶ್ವರನಿಗೆ ವಿಶೇಷ ಪೂಜೆ ನೆರವೇರಿಸಿದರು.
ಬಳಿಕ ಹಿಂಗಾರ ಪ್ರಸಾದ’ದ ಮೂಲಕ ಭವಿಷ್ಯ ನುಡಿಯಲು ಖ್ಯಾತಿ ಪಡೆದಿರುವ ಪ್ರಸಿದ್ಧ ಶಕ್ತಿ ಕೇಂದ್ರವಾದ ಅಂಕೋಲಾದ ಆಂದ್ಲೆ ಶ್ರೀ ಜಗದೀಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು.
ಆಂದ್ಲೆ ಶ್ರೀ ಜಗದೀಶ್ವರಿ ದೇವೀ ಹಿಂಗಾರ ಪ್ರಸಾದ ಭವಿಷ್ಯಕ್ಕೆ ಹೆಸರುವಾಸಿ ಜನಸಾಮಾನ್ಯರು ಮಾತ್ರವಲ್ಲದೆ ನಾಡಿನ ಖ್ಯಾತ ಉದ್ಯಮಿಗಳು ಪ್ರಸಿದ್ಧ ರಾಜಕಾರಣಿಗಳು ಈ ದೇವಾಲಯಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿ ಹಿಂಗಾರ ಪ್ರಸಾದ ಭವಿಷ್ಯ ಕೇಳುತ್ತಾರೆ
ದೇವಿಯ ತಲೆಯ ಬಲಭಾಗದಿಂದ ಹಿಂಗಾರ ಬಿದ್ದರೆ
ಅಂದುಕೊಂಡ ಕೆಲಸವಾಗುತ್ತದೆ ಎಡಭಾಗದಿಂದ ಹಿಂಗಾರ ಬಿದ್ದರೆ ನಿಮ್ಮ ಕೆಲಸ ಆಗುವುದಿಲ್ಲ ಒಂದು ವೇಳೆ ಹಿಂಗಾರ ಬೀಳದೆ ಹೋದರೆ ಆ ಕೆಲಸವನ್ನೇ ಮಾಡಬಾರದು ಎಂಬ ಸಂದೇಶ ನೀಡಲಾಗುತ್ತದೆ ಹೀಗಾಗಿ ಈ ದೇವಿಯು ಹಿಂಗಾರದ ಮೂಲಕ ನುಡಿಯುವ ಭವಿಷ್ಯ ನಿಜವಾಗಲಿದೆ ಎನ್ನುವುದು ಅನೇಕರ ನಂಬಿಕೆ.
ಹೀಗಾಗಿ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗುವ ಮುನ್ನ ಈ ದೇವಾಲಯಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿ ಹಿಂಗಾರ ಭವಿಷ್ಯ ಕೇಳಿದ್ದರು. ಆ ನಂತರ ತಮಗೆ ಎದುರಾದ ಕಾನೂನು ಸಂಕಷ್ಟದ ಸಮಯದಲ್ಲೂ ಕೂಡ ಈ ದೇವಿಯ ಮೊರೆ ಹೊಕ್ಕಿದ್ದರು. ಇದಾದ ಬಳಿಕ ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲೂ ಕೂಡ ದೇವಿಯ ಬಳಿ ಹಿಂಗಾರ ಭವಿಷ್ಯ ಕೇಳಿದ್ದರು ಎಂದು ಅರ್ಚಕರು ತಿಳಿಸಿದ್ದಾರೆ.
ಅಂದು ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಕೇಳಿದ ಭವಿಷ್ಯ ನಿಜವಾಗಿದೆ. ಈಗ ಕಾಲರಾತ್ರಿ ಎಳ್ಳು ಅಮವಾಸ್ಯೆಯ ಹಿನ್ನೆಲೆಯಲ್ಲಿ ದೇವಿಗೆ ವಿಶೇಷ ಮಾಲೆ ಪೂಜೆ ನೆರವೇರಿಸಿದ್ದಾರೆ.
ದೇವಸ್ಥಾನದಲ್ಲಿ ಪೂಜೆ ನಡೆಯುವ ವೇಳೆ ಡಿ.ಕೆ ಶಿವಕುಮಾರ್ ಅವರು ಅತ್ಯಂತ ಕಟ್ಟುನಿಟ್ಟಿನ ನಿಯಮ ಪಾಲಿಸಿದ್ದಾರೆ. ಗರ್ಭಗುಡಿಯೊಳಗೆ ಅವರು ಸೂಚಿಸಿದ ಕೆಲವೇ ಕೆಲವು ಆಪ್ತರಿಗೆ ಮಾತ್ರ ಪ್ರವೇಶ ನೀಡಲಾಗಿತ್ತು.
ಶಿವಕುಮಾರ್ ಅವರೊಂದಿಗೆ ಆಗಮಿಸಿದ ಸಚಿವ ಮಾಂಕಾಳ ವೈದ್ಯ, ಶಾಸಕ ಸತೀಶ್ ಸೈಲ್ ಅವರಿಗೂ ಒಳಹೋಗಲು ಅನುಮತಿ ನಿರಾಕರಿಸಲಾಗಿತ್ತು. ಅಷ್ಟೇ ಅಲ್ಲ ದೇವಿಯ ಮುಂದೆ ಕೇಳುವ ಪ್ರಶ್ನೆಗಳು ಯಾರಿಗೂ ಕೇಳಿಸಬಾರದು ಎಂಬ ಕಾರಣಕ್ಕೆ ದೇವಸ್ಥಾನದ ಪ್ರಾಂಗಣದಲ್ಲಿ ಯಾರೂ ಇರದಂತೆ ಖಡಕ್ ಸೂಚನೆ ನೀಡಲಾಗಿತ್ತು ಎಂದು ಅರ್ಚಕರು ತಿಳಿಸಿದ್ದಾರೆ.
ವಿಶೇಷ ಪೂಜೆ ಸಲ್ಲಿಸಿದ ಶಿವಕುಮಾರ್ ಅವರು ದೇವಿಯ ಮುಂದೆ ಐದು ರೀತಿಯ ಪ್ರಶ್ನೆಗಳನ್ನು ಇರಿಸಿದ್ದಾರೆ. ಆದರೆ ಯಾವ ಪ್ರಶ್ನೆಗಳನ್ನು ಕೇಳಿದರು ಎಂದು ಬಹಿರಂಗವಾಗಿ ಹೇಳುವಂತಿಲ್ಲ ಎಂದರು.
ದೇವಿಗೆ ಶಿವಕುಮಾರ್ ಕೇಳಿದ ಐದು ಪ್ರಶ್ನೆ!
Previous Articleವಿದಾಯದ ಭಾಷಣ ಮಾಡಿದರಾ ಸಿಎಂ ಸಿದ್ದರಾಮಯ್ಯ?
Next Article ಜ಼ೀ ಕನ್ನಡ – ಕಲರ್ಸ್ ಮುಸುಕಿನ ಗುದ್ದಾಟ

