ಕೆಲವು ತಿಂಗಳ ಹಿಂದೆ ʻಕರ್ಣʼ ಧಾರಾವಾಹಿ ಆರಂಭಕ್ಕೆ ಅಡಚಣೆ ಉಂಟಾಗಿದ್ದು ನೆನಪಿದೆಯೆ?
ಆರಂಭದ ಮುನ್ನಾದಿನ ಕಲರ್ಸ್ ಕನ್ನಡ ಕಳಿಸಿದ ಒಂದು ನೋಟೀಸ್ ನಿಂದಾಗಿ ಲಾಂಚ್ ಅನ್ನೇ ಮುಂದೂಡಲಾಗಿತ್ತು.
ʻಕರ್ಣʼ ನಾಯಕಿ ಭವ್ಯ ಗೌಡ ಕಲರ್ಸ್ ʻಬಿಗ್ ಬಾಸ್ʼ ನಿಂದ ಹೊರಬಿದ್ದಿದ್ದರೂ ಅಗ್ರಿಮೆಂಟ್ ಮುಗಿದಿರಲಿಲ್ಲ. ಹಾಗಾಗಿ ಆರು ತಿಂಗಳು ಅವರು ಪ್ರತಿಸ್ಪರ್ಧಿ ವಾಹಿನಿಯಲ್ಲಿ ನಟಿಸಲು ಸಾಧ್ಯವಿಲ್ಲ ಎಂಬುದೇ ನೋಟೀಸಿನ ಸಾರಾಂಶವಾಗಿತ್ತು.
ಆ ಆರು ತಿಂಗಳು ಮುಗಿಯಲು ಇನ್ನೂ ಕೆಲವು ವಾರ ಬಾಕಿ ಇತ್ತು. ಕೊನೆಗೂ ಮಣಿದ ಜ಼ೀ ಕನ್ನಡ ʻಕರ್ಣʻ ಲಾಂಚ್ ಅನ್ನು ಕೆಲವು ವಾರ ಮುಂದೂಡಿತು. ಇದರಿಂದ ಅದಕ್ಕೆ ದೊಡ್ಡ ನಷ್ಟವೇನೂ ಆಗಲಿಲ್ಲ. ʻಕರ್ಣʼನಿಗೆ ಹೆಚ್ಚು ಪ್ರಚಾರ ಸಿಕ್ಕಿತಷ್ಟೆ.
ಇದೀಗ ಕಲರ್ಸ್ ಕನ್ನಡದ ʻಗೌರಿ ಕಲ್ಯಾಣʼ ಧಾರಾವಾಹಿಗೆ ಜ಼ೀ ಕನ್ನಡ ಅಂಥದ್ದೊಂದು ತಡೆ ತಂದು ಸೇಡು ತೀರಿಸಿಕೊಳ್ಳುತ್ತಿದೆ ಎಂಬ ಗುಮಾನಿ ಹರಿದಾಡುತ್ತಿದೆ. ಇದ್ದಕ್ಕಿದ್ದ ಹಾಗೆ ʻಗೌರಿ ಕಲ್ಯಾಣʼದ ಪ್ರೊಮೊಗಳನ್ನು ಕಡಿತಗೊಳಿಸಲಾಗಿದೆ. ಟೀಸರ್ ಪ್ರೊಮೊ ಪ್ರಸಾರವಾಗಿ ತಿಂಗಳು ಕಳೆದರೂ ದಿನಾಂಕ ಪ್ರಕಟಿಸಲು ಚಾನೆಲ್ ಹಿಂದೇಟು ಹಾಕುತ್ತಿದೆ.
ನೋಡಲಾಗಿ ʻಗೌರಿ ಕಲ್ಯಾಣʼದ ತಂದೆ ಪಾತ್ರಧಾರಿಯಾಗಿ ʻಲಕ್ಷ್ಮೀ ನಿವಾಸʼದ ತಂದೆ ಅಶೋಕ್ ಜಂಬೆ ಪ್ರೊಮೊದಲ್ಲಿ ಕಾಣಿಸಿಕೊಂಡಿದ್ದಾರೆ. ಜ಼ೀ ಕನ್ನಡ ಇಂಥ ʻಸದವಕಾಶʼ ಬಿಡಲು ಸಾಧ್ಯವೆ? ಆವೊತ್ತು ಸುಖಾಸುಮ್ಮನೆ ಕೊಕ್ಕೆ ಹಾಕಿದ್ದ ಕಲರ್ಸ್ ಈಗ ಜ಼ೀ ಹಾಕಿದ ಕೊಕ್ಕೆಯಿಂದ ನಡುಗಿಹೋಗಿದೆ ಅಂತ ಗುಸುಗುಸು. ಕಾರಣವಿಷ್ಟೆ. ʻಲಕ್ಷ್ಮೀನಿವಾಸʼ ಧಾರಾವಾಹಿ ಮುಗಿಯುವವರೆಗೂ ಕಲಾವಿದರ ಜೊತೆಗಿನ ಒಪ್ಪಂದ ಚಾಲ್ತಿಯಲ್ಲಿರುತ್ತದೆ. ʻಲಕ್ಷ್ಮೀನಿವಾಸʼ ಸಧ್ಯ ಓಡುತ್ತಿರುವ ಕುದುರೆ. ಇಷ್ಟು ಬೇಗ ಮುಗಿಯುವುದಿಲ್ಲ. ನಿಜವಾಗಿಯೂ ಕಾನೂನು ತೊಡಕಾಗಿದ್ದರೆ ಕಲರ್ಸ್ ಹೇಗೆ ಬಿಡಿಸಿಕೊಳ್ಳುತ್ತದೆ? ʼಗೌರಿ ಕಲ್ಯಾಣʼವನ್ನು ಹೇಗೆ ಬಿಡುಗಡೆ ಮಾಡುತ್ತದೆ? ಕಾದು ನೋಡಬೇಕಿದೆ. ಯಾಕೆಂದರೆ ʻಬಿಗ್ ಬಾಸ್ʼ ಮುಗಿದ ತಕ್ಷಣ ಒಟ್ಟಿಗೇ ಮೂರು ಧಾರಾವಾಹಿ ಲಾಂಚ್ ಮಾಡುವ ಸವಾಲು ಕಲರ್ಸ್ ಮುಂದಿದೆ.
Previous Articleದೇವಿಗೆ ಶಿವಕುಮಾರ್ ಕೇಳಿದ ಐದು ಪ್ರಶ್ನೆ!
Next Article ಭಾರತೀಯರು ದೇಶ ಬಿಟ್ಟು ಹೋಗುತ್ತಿದ್ದಾರೆ!

