ಬೆಂಗಳೂರು,ಡಿ.21:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಪ್ರಬಲವಾಗಿ ಗುರುತಿಸಿಕೊಂಡು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕಟು ಟೀಕಾಕಾರರಾಗಿರುವ ಮಾಜಿ ಮಂತ್ರಿ ಕೆ ಎನ್ ರಾಘಣ್ಣ ಅವರು ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟು ಡಿಕೆ ಶಿವಕುಮಾರ್ ಅವರು ನಡೆಸುತ್ತಿರುವ ಚಟುವಟಿಕೆಗಳ ಪೈಕಿ ಇದು ಅತ್ಯಂತ ಮಹತ್ವದ ವಿದ್ಯಮಾನ ಎನ್ನಲಾಗಿದೆ.
ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ನಾಯಕತ್ವ ಬದಲಾವಣೆ ಇಲ್ಲ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿ ಪೂರ್ಣಗೊಳಿಸಲಿದ್ದಾರೆ ಒಂದು ವೇಳೆ ಬದಲಾವಣೆಗಳು ನಡೆದು ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾದಲ್ಲಿ ತಾವು ಅವರ ಸಂಪುಟದಲ್ಲಿ ಮಂತ್ರಿಯಾಗುವುದಿಲ್ಲ ಎಂದು ಹೇಳುವ ಮೂಲಕ ರಾಜಣ್ಣ ಗಮನ ಸೆಳೆದಿದ್ದರು. ಅವರು ಇದೀಗ ಬದಲಾದ ಪರಿಸ್ಥಿತಿಯಲ್ಲಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಈ ಭೇಟಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾನು ಅಣ್ಣತಮಂದಿರಂತೆ ಕೆಲಸ ಮಾಡುತ್ತಿದ್ದೇವೆ. ನಮಲ್ಲಿ ಯಾವುದೇ ಸಂಘರ್ಷಗಳಿಲ್ಲ. ಮಾಜಿ ಸಚಿವ ಕೆ.ಎನ್.ರಾಜಣ್ಣ ಮುಖ್ಯಮಂತ್ರಿಯವರಿಗಿಂತಲೂ ನನಗೆ ಹೆಚ್ಚು ಆಪ್ತ ಎಂದು ಹೇಳಿದ್ದಾರೆ
ತಮ್ಮ ಮನೆಯಲ್ಲಿಂದು ಪಲ್ಸ್ ಪೋಲಿಯೋ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಎನ್.ರಾಜಣ್ಣ ನಮ ಪಕ್ಷದ ಶಾಸಕರು. ನಮೊಂದಿಗೆ ಸಚಿವರಾಗಿದ್ದವರು, ಸೌಹಾರ್ದಯುತವಾಗಿ ಅವರನ್ನು ಭೇಟಿ ಮಾಡಿದ್ದೇನೆ. ಇಂದು ಕೂಡ ಅವರ ಜೊತೆ ಮತ್ತೆ ಭೇಟಿ ಮಾಡುತ್ತೇನೆ. ನಿನ್ನೆ ಹೆಚ್ಚಿನ ಚರ್ಚೆ ಮಾಡಲಾಗಿರಲಿಲ್ಲ ಹೀಗಾಗಿ ಇಂದು ಮತ್ತೊಮ್ಮೆ ಭೇಟಿ ಮಾಡುತ್ತೇನೆ ಎಂದು ಹೇಳಿದರು.
ನಾವೆಲ್ಲ ಒಂದೇ ಪಕ್ಷದವರು ಸಹೋದ್ಯೋಗಿಗಳು, ಪಕ್ಷ ಮತ್ತು ಸರ್ಕಾರದಲ್ಲಿ ಒಟ್ಟಿಗೆ ಕೆಲಸ ಮಾಡಿದವರು. ನನಗೆ ಯಾರ ಜೊತೆಯೂ ಭಿನ್ನಾಭಿಪ್ರಾಯ ಇಲ್ಲ. ಕೆಲವು ಸಂದರ್ಭಗಳಲ್ಲಿ ಅವರು ಹೇಳಿಕೆಗಳನ್ನು ನೀಡಿರಬಹುದು. ಅದಕ್ಕೆಲ್ಲ ನಾನು ಬೇಜಾರು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು
ಅಣ್ಣ ತಮಂದಿರೇ ಜಗಳವಾಡುತ್ತಾರೆ. ನಾನು ಯಾರ ಜೊತೆಯೂ ಜಗಳ ಆಡಲು ಹೋಗಿಲ್ಲ. ಯಾರ ಹೇಳಿಕೆಗೂ ಪ್ರತಿ ಹೇಳಿಕೆ ನೀಡಿಲ್ಲ. ವಿರೋಧ ಪಕ್ಷಗಳ ಹೇಳಿಕೆಗೆ ಉತ್ತರ ನೀಡುತ್ತೇನೆಯೇ ಹೊರತು ನಮ ಪಕ್ಷದವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದ ಉದಾಹರಣೆ ಇಲ್ಲ . ನಾನಾಗಿ ಯಾರೊಬ್ಬರ ವಿರುದ್ಧವೂ ಹೇಳಿಕೆಗಳನ್ನು ನೀಡಲು ಹೋಗುವುದಿಲ್ಲ ಎಂದರು.
ಕೆ.ಎನ್.ರಾಜಣ್ಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿಂತಲೂ ನನಗೆ ಹೆಚ್ಚಿನ ಆಪ್ತ. ಎಸ್.ಎಂ.ಕೃಷ್ಣ ಅವರ ಸರ್ಕಾರದಲ್ಲಿ ರಾಜಣ್ಣ ಜನತಾ ದಳದಲ್ಲಿದ್ದರು. ನಾನು ಆಗ ಸಹಕಾರ ಸಚಿವನಾಗಿದ್ದೆ ಕಾಂಗ್ರೆಸ್ ಪಕ್ಷದಿಂದ ರಾಜಣ್ಣನನ್ನು ಅಫೆಕ್ಸ್ ಬ್ಯಾಂಕ್ ಅಧ್ಯಕ್ಷನನ್ನಾಗಿ ಮಾಡಲಾಗಿತ್ತು. ನನಗೆ ರಾಜಣ್ಣ ಎಷ್ಟು ಆಪ್ತ ಎಂದು ಯಾರಿಗೂ ಗೊತ್ತಿಲ್ಲ. ಸಿದ್ದರಾಮಯ್ಯರಿಗೂ ರಾಜಣ್ಣನಿಗೂ ಸಂಬಂಧವೇ ಇಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ರಾಜಣ್ಣನನ್ನು ಈಗ ಮುಖ್ಯಮಂತ್ರಿಯವರ ಅವರ ಆಪ್ತ ಎಂದು ಹೇಳಲಾಗುತ್ತಿದೆ. ರಾಜಣ್ಣ ನನಗೂ ಆಪ್ತನೇ. ನಾನು ಮುಖ್ಯಮಂತ್ರಿಯವರು ಆಪ್ತರಲ್ಲವೇ? ನಾವಿಬ್ಬರು ಅಣ್ಣ ತಮಂದಿರಂತೆ ಕೆಲಸ ಮಾಡುತ್ತಿಲ್ಲವೇ? ಸರ್ಕಾರದಲ್ಲಿ ಯಾವುದೇ ವಿಚಾರದಲ್ಲೂ ಭಿನ್ನಾಭಿಪ್ರಾಯಗಳಿಲ್ಲ. ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬಂದ 16 ವರ್ಷಗಳಾಗಿದೆ. ಅಂದಿನಿಂದಲೂ ಅವರೊಂದಿಗೆ ಯಾವುದೇ ವಿಚಾರದಲ್ಲೂ ಭಿನ್ನಾಭಿಪ್ರಾಯಗಳಾಗಿಲ್ಲ. ಮಾಧ್ಯಮದವರಿಗೆ ಆಹಾರ ಬೇಕು, ಬಿಜೆಪಿಯವರು ರಾಜಕೀಯಕ್ಕಾಗಿ ಗೊಂದಲಗಳನ್ನು ಸೃಷ್ಟಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ನಮಗೆ ಜನರ ವಿಶ್ವಾಸ ಇದೆ. ಅವರು ಆಶೀರ್ವಾದ ಮಾಡಿರುವುದಕ್ಕೆ ನಾವು ಇಲ್ಲಿದ್ದೇವೆ. ಹೈಕಮಾಂಡ್ ನಾಯಕರ ಜೊತೆ ಪ್ರತಿದಿನ ಮಾತನಾಡುತ್ತಿರುತ್ತೇನೆ. ಈಗ ಎರಡು ನಿಮಿಷದ ಹಿಂದೆ ಕೂಡ ವರಿಷ್ಠರ ಜೊತೆ ಮಾತನಾಡಿ ವಿಧಾನ ಪರಿಷತ್ ನಾಲ್ಕು ಸ್ಥಾನಗಳ ಆಯ್ಕೆಗೆ ಬಿ-ಫಾರಂ ನೀಡುವ ಬಗ್ಗೆ ಚರ್ಚೆ ಮಾಡಿದ್ದೇನೆ ಎಂದರು.

