ಬೆಂಗಳೂರು: ಭಾರತಕ್ಕೆ ಸ್ವಾತಂತ್ರ್ಯ ದೊರಕಿದಾಗ ಒಂದು ಅಮೆರಿಕನ್ ಡಾಲರ್‌ನ ಬೆಲೆ ಕೇವಲ 3.30 ರೂಪಾಯಿ ಇತ್ತು ಎಂದರೆ ಇಂದಿನ ಪೀಳಿಗೆಗೆ ನಂಬಲು ಕಷ್ಟವಾಗಬಹುದು. ಆದರೆ, 2026ರ ಜನವರಿ ಹೊತ್ತಿಗೆ ಅದೇ ಡಾಲರ್ ಎದುರು ರೂಪಾಯಿ ಬರೋಬ್ಬರಿ 91ರ ಗಡಿ ಮುಟ್ಟಿದೆ. ಕಳೆದ 78 ವರ್ಷಗಳಲ್ಲಿ ಭಾರತೀಯ ರೂಪಾಯಿ ಸಾಗಿ ಬಂದ ಹಾದಿ, ಅದು ಎದುರಿಸಿದ ಆರ್ಥಿಕ ಏರಿಳಿತಗಳು ಮತ್ತು ಅದಕ್ಕೆ ತಳುಕು ಹಾಕಿಕೊಂಡಿರುವ ರಾಜಕೀಯದ ದ್ವಂದ್ವ ನೀತಿಗಳು ಅತ್ಯಂತ ಕುತೂಹಲಕಾರಿಯಾಗಿವೆ.
ಭಾರತವು 1947ರಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ಮುಕ್ತವಾದಾಗ, ನಮ್ಮ ರೂಪಾಯಿ ಬ್ರಿಟಿಷ್ ಪೌಂಡ್ ಜೊತೆಗೆ ಪರೋಕ್ಷವಾಗಿ ತಳಕು ಹಾಕಿಕೊಂಡಿತ್ತು. ಅಂದು ಒಂದು ಡಾಲರ್‌ಗೆ ಸುಮಾರು 3.30 ರೂಪಾಯಿ ಬೆಲೆ ಇತ್ತು. ಆದರೆ ಬ್ರಿಟನ್ ಆರ್ಥಿಕತೆಯಲ್ಲಾದ ಬದಲಾವಣೆ ಮತ್ತು ಪೌಂಡ್ ಅಪಮೌಲ್ಯದ ಕಾರಣ, 1949-50ರ ಸುಮಾರಿಗೆ ಡಾಲರ್ ಎದುರು ರೂಪಾಯಿ ಮೌಲ್ಯ 4.76ಕ್ಕೆ ಸ್ಥಿರವಾಯಿತು. ಸುಮಾರು ಒಂದೂವರೆ ದಶಕಗಳ ಕಾಲ ಈ ದರ ಹೆಚ್ಚು ಬದಲಾವಣೆಯಿಲ್ಲದೆ ಮುಂದುವರೆಯಿತು. ಆದರೆ 1966ರಲ್ಲಿ ಉಂಟಾದ ಭೀಕರ ಬರಗಾಲ, ಯುದ್ಧಗಳು ಮತ್ತು ಆರ್ಥಿಕ ಒತ್ತಡಗಳಿಂದಾಗಿ ರೂಪಾಯಿಯನ್ನು ಬಲವಂತವಾಗಿ ಅಪಮೌಲ್ಯಗೊಳಿಸಬೇಕಾಯಿತು. ಆಗ ಅದರ ಮೌಲ್ಯ 7.50ಕ್ಕೆ ಕುಸಿಯಿತು.
ರೂಪಾಯಿಯ ಇತಿಹಾಸದಲ್ಲಿ ನಿಜವಾದ ತಿರುವು ಸಿಕ್ಕಿದ್ದು 1991ರಲ್ಲಿ. ಅಂದು ಭಾರತ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿತ್ತು ಮತ್ತು ವಿದೇಶಿ ವಿನಿಮಯದ ಕೊರತೆಯಿಂದಾಗಿ ದೇಶ ದಿವಾಳಿಯಾಗುವ ಅಂಚಿನಲ್ಲಿತ್ತು. ಈ ಸಂದರ್ಭದಲ್ಲಿ ಜಾರಿಗೆ ಬಂದ ಉದಾರೀಕರಣ ನೀತಿಗಳು ರೂಪಾಯಿಯನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಿ ಮಾರುಕಟ್ಟೆ ಆಧಾರಿತ ವ್ಯವಸ್ಥೆಗೆ ಒಳಪಡಿಸಿದವು. ಇದರ ಪರಿಣಾಮವಾಗಿ 1990ರಲ್ಲಿ 17-18 ರೂಪಾಯಿ ಇದ್ದ ಡಾಲರ್ ಬೆಲೆ, 1995ರ ಹೊತ್ತಿಗೆ 30 ರೂಪಾಯಿಯ ಗಡಿ ದಾಟಿತು. ನಂತರದ ವರ್ಷಗಳಲ್ಲಿ ಜಾಗತಿಕ ಮಾರುಕಟ್ಟೆಯ ಪ್ರಭಾವ, ತೈಲ ಆಮದಿನ ವೆಚ್ಚ ಮತ್ತು ಆರ್ಥಿಕ ಹಿಂಜರಿತಗಳಿಂದಾಗಿ ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಲೇ ಸಾಗಿತು.
ಈ ಆರ್ಥಿಕ ವಿಚಾರವು ಪ್ರಬಲ ರಾಜಕೀಯ ಅಸ್ತ್ರವಾಗಿ ಮಾರ್ಪಟ್ಟಿದ್ದು ಮಾತ್ರ 2013ರಲ್ಲಿ. ಅಂದು ಯುಪಿಎ ಸರ್ಕಾರದ ಅವಧಿಯಲ್ಲಿ ಡಾಲರ್ ಎದುರು ರೂಪಾಯಿ 60 ರಿಂದ 64 ರೂಪಾಯಿಗೆ ಕುಸಿದಾಗ, ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ರೂಪಾಯಿ ಐಸಿಯು ಸೇರಿದೆ, ಅದು ಸಾಯುವ ಸ್ಥಿತಿಯಲ್ಲಿದೆ ಎಂದೆಲ್ಲಾ ಲೇವಡಿ ಮಾಡಿದ್ದರು. ದೆಹಲಿ ಸರ್ಕಾರಕ್ಕೆ ದೇಶದ ಆರ್ಥಿಕತೆಗಿಂತ ತಮ್ಮ ಅಧಿಕಾರ ಉಳಿಸಿಕೊಳ್ಳುವುದರಲ್ಲೇ ಹೆಚ್ಚು ಆಸಕ್ತಿ ಇದೆ ಎಂದು ಟೀಕಿಸಿದ್ದ ಅವರು, ರೂಪಾಯಿ ಮತ್ತು ಕೇಂದ್ರ ಸರ್ಕಾರದ ನಡುವೆ ಯಾರು ಹೆಚ್ಚು ಕೆಳಗೆ ಬೀಳುತ್ತಾರೆಂಬ ಸ್ಪರ್ಧೆ ನಡೆದಿದೆ ಎಂದು ವ್ಯಂಗ್ಯವಾಡಿದ್ದರು. ಅಂದಿನ ಕುಸಿತಕ್ಕೆ ಸರ್ಕಾರದ ಭ್ರಷ್ಟಾಚಾರ ಮತ್ತು ತಪ್ಪು ಆರ್ಥಿಕ ನೀತಿಗಳೇ ಕಾರಣ ಎಂದು ಅವರು ನೇರವಾಗಿ ಆರೋಪಿಸಿದ್ದರು.
ಆದರೆ, ವಿಪರ್ಯಾಸವೆಂದರೆ 2014ರಲ್ಲಿ ನರೇಂದ್ರ ಮೋದಿಯವರೇ ಪ್ರಧಾನಿಯಾದ ನಂತರ ಚಿತ್ರಣ ಸಂಪೂರ್ಣ ಬದಲಾಯಿತು. ಅವರು ಅಧಿಕಾರ ವಹಿಸಿಕೊಂಡಾಗ 58-59 ರೂಪಾಯಿ ಆಸುಪಾಸಿನಲ್ಲಿದ್ದ ಡಾಲರ್ ಬೆಲೆ, ನಂತರದ ವರ್ಷಗಳಲ್ಲಿ ಏರುತ್ತಲೇ ಹೋಯಿತು. 2018ರಲ್ಲಿ 70ರ ಗಡಿ ದಾಟಿತು, ನಂತರ 80 ಮತ್ತು ಇದೀಗ 2026ರ ಜನವರಿ ವೇಳೆಗೆ 91 ರೂಪಾಯಿ ತಲುಪಿದೆ. ಅಂದು ರೂಪಾಯಿ ಕುಸಿತವನ್ನು ಸರ್ಕಾರದ ವೈಫಲ್ಯ ಎಂದು ಬಣ್ಣಿಸಿದ್ದವರೇ, ಇಂದು ಅಧಿಕಾರದಲ್ಲಿದ್ದಾಗ ಅದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಪ್ರಸ್ತುತ ಸರ್ಕಾರದ ಪ್ರಕಾರ, ಇದು ರೂಪಾಯಿಯ ದೌರ್ಬಲ್ಯವಲ್ಲ, ಬದಲಿಗೆ ಜಾಗತಿಕವಾಗಿ ಡಾಲರ್ ಬಲವಾಗುತ್ತಿರುವುದರ ಪರಿಣಾಮವಷ್ಟೇ. ಅಲ್ಲದೆ, ರೂಪಾಯಿ ಮೌಲ್ಯ ತಗ್ಗುವುದರಿಂದ ರಫ್ತುದಾರರಿಗೆ ಲಾಭವಾಗುತ್ತದೆ ಎಂಬ ಹೊಸ ವಾದವನ್ನೂ ಈಗ ಮುಂದಿಡಲಾಗುತ್ತಿದೆ.
ಒಟ್ಟಾರೆಯಾಗಿ ನೋಡುವುದಾದರೆ, ಅಂದು 60 ರೂಪಾಯಿ ತಲುಪಿದ್ದಕ್ಕೇ ಆಸ್ಪತ್ರೆ ಸೇರಿದೆ ಎಂದು ಟೀಕೆಗೆ ಗುರಿಯಾಗಿದ್ದ ರೂಪಾಯಿ, ಇಂದು 91 ರೂಪಾಯಿ ತಲುಪಿದ್ದರೂ ಆರೋಗ್ಯವಾಗಿಯೇ ಇದೆ ಎಂದು ಬಿಂಬಿಸಲಾಗುತ್ತಿದೆ. ರೂಪಾಯಿಯ ಈ ಸುದೀರ್ಘ ಪಯಣವು ಕೇವಲ ಆರ್ಥಿಕ ಅಂಕಿಅಂಶಗಳ ಏರಿಳಿತವನ್ನಷ್ಟೇ ಅಲ್ಲದೆ, ಅಧಿಕಾರದಲ್ಲಿದ್ದಾಗ ಮತ್ತು ವಿರೋಧ ಪಕ್ಷದಲ್ಲಿದ್ದಾಗ ರಾಜಕಾರಣಿಗಳ ಮಾತು ಮತ್ತು ನಿಲುವುಗಳು ಹೇಗೆ ಬದಲಾಗುತ್ತವೆ ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ.

