ನವದೆಹಲಿ: ಗಣರಾಜ್ಯೋತ್ಸವದ ಪೆರೇಡ್‌ನಲ್ಲಿ ದೇಶದ ರಕ್ಷಣಾ ಪಡೆಯ ಪರಾಕ್ರಮವನ್ನು ಕಂಡು ಎದೆ ಉಬ್ಬಿಸುವ ಸಾಮಾನ್ಯ ಭಾರತೀಯ, ಸಾಂಸ್ಕೃತಿಕ ಟ್ಯಾಬ್ಲೋ ಪ್ರದರ್ಶನ ಆರಂಭವಾಗುತ್ತಿದ್ದಂತೆಯೇ ಟಿವಿ ರಿಮೋಟ್ ಹುಡುಕಲು ಆರಂಭಿಸುತ್ತಾನೆ. ಅದಕ್ಕೆ ಕಾರಣ ಸ್ಪಷ್ಟ; ನಮ್ಮ ಸೇನೆ ಅತ್ಯಾಧುನಿಕವಾಗಿದೆ, ಆದರೆ ನಮ್ಮ ಸಾಂಸ್ಕೃತಿಕ ಪ್ರದರ್ಶನ ಮಾತ್ರ ಇನ್ನೂ “ಶಿಲಾಯುಗ”ದಲ್ಲೇ ಬಿದ್ದು ಒದ್ದಾಡುತ್ತಿದೆ. ದೇಶದ ರಾಜಧಾನಿಯಲ್ಲಿ ನಡೆಯುವ ಪೆರೇಡ್ ಕೇವಲ ಒಂದು ಆಚರಣೆಯಲ್ಲ, ಅದೊಂದು ಶಕ್ತಿ ಪ್ರದರ್ಶನ. ಆದರೆ, ಆಗಸದಲ್ಲಿ ಯುದ್ಧ ವಿಮಾನಗಳು ಘರ್ಜಿಸುತ್ತಿದ್ದರೆ, ನೆಲದ ಮೇಲೆ ಸಾಗುವ ಟ್ಯಾಬ್ಲೋಗಳು ಥರ್ಮೋಕೋಲ್ ಮತ್ತು ಪ್ಲೈವುಡ್‌ಗಳ ಬಣ್ಣದ ಸಂತೆಗಳಂತೆ ಕಾಣುತ್ತವೆ. ತಂತ್ರಜ್ಞಾನದಲ್ಲಿ ನಾವು ಜಗತ್ತನ್ನೇ ಆಳುತ್ತಿದ್ದೇವೆ ಎಂದು ಕೊಚ್ಚಿಕೊಳ್ಳುವ ನಾವು, ಜಗತ್ತಿನ ಎದುರು ಪ್ರದರ್ಶಿಸುತ್ತಿರುವುದು ಮಾತ್ರ ಶಾಲಾ ವಾರ್ಷಿಕೋತ್ಸವದ ಮಟ್ಟದ ಹಳಸಲು ಮಾದರಿಗಳನ್ನು ಎಂಬುದು ಕಟು ಸತ್ಯ.
ಕಳೆದ ಎರಡು ದಶಕಗಳ ಪೆರೇಡ್‌ಗಳನ್ನು ಕಣ್ಣಮುಂದೆ ತಂದುಕೊಂಡರೆ, ಅಲ್ಲಿ ನಯಾಪೈಸೆಯ ಬದಲಾವಣೆ ಕಂಡುಬರುವುದಿಲ್ಲ. ಪರದೆಯ ಮೇಲೆ ರಾಜ್ಯದ ಹೆಸರು ಮೂಡುವುದೇ ತಡ, ಬೆನ್ನಲ್ಲೇ ಒಂದು ದೇವಸ್ಥಾನದ ಪ್ಲಾಸ್ಟಿಕ್ ಪ್ರತಿಕೃತಿ ಪ್ರತ್ಯಕ್ಷವಾಗುತ್ತದೆ. ಅದರ ಅಕ್ಕಪಕ್ಕ ಹಳೆ ಕಾಲದ ವೇಷ ಧರಿಸಿ ನಾಲ್ಕು ಜನ ಕುಣಿಯುತ್ತಿರುತ್ತಾರೆ, ಕೊನೆಯಲ್ಲಿ ಕೃಷಿಯನ್ನೋ ಅಥವಾ ಪ್ರವಾಸೋದ್ಯಮವನ್ನೋ ಬಿಂಬಿಸುವ ಒಂದು ಬೊಂಬೆ ಇರುತ್ತದೆ. ವೀಕ್ಷಕನ ಸಹನೆ ಪರೀಕ್ಷಿಸುವ ಈ ಏಕತಾನತೆಗೆ ಕೊನೆಯೇ ಇಲ್ಲವೇ? ಥೀಮ್‌ಗಳು ಬದಲಾಗಿರಬಹುದು, ಆದರೆ ಅದನ್ನು ಪ್ರಸ್ತುತಪಡಿಸುವ ಶೈಲಿ ಮಾತ್ರ 1980ರ ದಶಕದಲ್ಲೇ ಸ್ಥಗಿತಗೊಂಡಿದೆ. ಇಂದಿನ 4K, 8K ರೆಸಲ್ಯೂಶನ್ ಪರದೆಗಳಲ್ಲಿ ಈ ಗೊಂಬೆಗಳು ನಮ್ಮ ಸೃಜನಶೀಲತೆಯ ಬಡತನವನ್ನು ಎತ್ತಿ ತೋರಿಸುತ್ತಿವೆ.
ಪ್ರತಿ ವರ್ಷ ಈ ಪ್ರದರ್ಶನಕ್ಕೆ ವಿದೇಶಿ ಗಣ್ಯರನ್ನು ಕರೆಸುವ ನಾವು, ಭಾರತವು ಐಟಿ-ಬಿಟಿ ದಿಗ್ಗಜ, ಬಾಹ್ಯಾಕಾಶದಲ್ಲಿ ಸಾಧನೆಗೈದ ಮಹಾನ್ ರಾಷ್ಟ್ರ ಎಂದು ಹೇಳಿಕೊಳ್ಳುತ್ತೇವೆ. ಆದರೆ ಆ ಗಣ್ಯರಿಗೆ ನಾವು ತೋರಿಸುತ್ತಿರುವುದೇನು? ಬಣ್ಣ ಬಳಿದ ಥರ್ಮೋಕೋಲ್ ಮತ್ತು ಜಡ ಹಿಡಿದ ಬೊಂಬೆಗಳನ್ನು! ಆಧುನಿಕ ಭಾರತದ ಮುಖವಾಗಿರುವ ತಂತ್ರಜ್ಞಾನ, ಡಿಜಿಟಲ್ ಕ್ರಾಂತಿ ನಮ್ಮ ಸಾಂಸ್ಕೃತಿಕ ಪ್ರದರ್ಶನದಲ್ಲಿ ಎಲ್ಲಿಯೂ ಕಾಣಸಿಗುವುದಿಲ್ಲ. ನಮ್ಮ ಸಂಸ್ಕೃತಿ ಶ್ರೇಷ್ಠವೇ, ಸಂಶಯವಿಲ್ಲ. ಆದರೆ ಅದನ್ನು ಪ್ಯಾಕೇಜ್ ಮಾಡುವ ರೀತಿ ಮಾತ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ನಗೆಪಾಟಲಿಗೀಡಾಗುವಂತಿದೆ.
ಈ ಪದ್ದತಿ ಕೇವಲ ದೆಹಲಿಗಷ್ಟೇ ಸೀಮಿತವಾಗಿಲ್ಲ. ನಮ್ಮ ನಾಡಹಬ್ಬ ಮೈಸೂರು ದಸರಾ ಜಂಬೂಸವಾರಿಯ ಕಥೆಯೂ ಇದೇ. ಅಂಬಾರಿಯ ಗಾಂಭೀರ್ಯವನ್ನು ಬಿಟ್ಟರೆ, ಉಳಿದ ಸ್ತಬ್ಧಚಿತ್ರಗಳು ಕೇವಲ “ಸರ್ಕಾರಿ ಜಾಹೀರಾತು ಫಲಕ”ಗಳಾಗಿವೆ. ಅಲ್ಲಿ ಕಲಾತ್ಮಕತೆ ಇಲ್ಲ, ಇರುವುದು ಕೇವಲ ಗುತ್ತಿಗೆದಾರರ ಲೆಕ್ಕಾಚಾರ. ಜನರ ಕಣ್ಣಿಗೆ ಮಣ್ಣೆರಚಿ, ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಓಡಿಸುವ ಈ ಗಾಡಿಗಳು ಜನರನ್ನು ರಂಜಿಸುವುದಕ್ಕಿಂತ ಹೆಚ್ಚಾಗಿ, ಅಧಿಕಾರಿಗಳ ಜೇಬು ತುಂಬಿಸುವುದಕ್ಕೇ ಸೀಮಿತವಾಗಿರುವಂತಿದೆ. ಹೊಸ ಆಲೋಚನೆಗಳಿಗೆ, ಯುವ ವಿನ್ಯಾಸಕರಿಗೆ ಅಲ್ಲಿ ಪರೋಕ್ಷವಾಗಿ ‘ನೋ ಎಂಟ್ರಿ’ ಬೋರ್ಡ್ ಹಾಕಲಾಗಿದೆ.
ಜಗತ್ತು ಇಂದು ಪ್ರೊಜೆಕ್ಷನ್ ಮ್ಯಾಪಿಂಗ್, ಹಾಲೋಗ್ರಾಮ್ ಮತ್ತು ರೋಬೋಟಿಕ್ಸ್ ಯುಗದಲ್ಲಿದೆ. ನಮಗೆ ಬೇಕಿರುವುದು ಚಲಿಸುವ, ಸಂವಾದಿಸುವ, ತಂತ್ರಜ್ಞಾನದ ಮೂಲಕ ಬೆರಗುಗೊಳಿಸುವ ಸ್ತಬ್ಧಚಿತ್ರಗಳೇ ಹೊರತು, ಅದೇ ಹಳೆಯ ಮಾದರಿಗಳಲ್ಲ. ಸಂಪ್ರದಾಯ ಉಳಿಯಬೇಕು, ಆದರೆ ಅದು ಹಳೆಯದರ ಆರಾಧನೆಯಾಗಬಾರದು. ಸ್ಟಾರ್ಟಪ್‌ಗಳು, ಎಐ ಕ್ರಾಂತಿ ಮತ್ತು ಭವಿಷ್ಯದ ಭಾರತವನ್ನು ಬಿಂಬಿಸುವ ಟ್ಯಾಬ್ಲೋಗಳು ಇಂದಿನ ತುರ್ತು ಅಗತ್ಯ. ಇಲ್ಲದಿದ್ದರೆ, ಈ ಕೋಟ್ಯಂತರ ರೂಪಾಯಿಯ ಪ್ರದರ್ಶನವು ಕೇವಲ ಒಂದು “ಸರ್ಕಾರಿ ಶಾಸ್ತ್ರ”ವಾಗಿ ಉಳಿಯುತ್ತದೆ ಮತ್ತು ಬೇಸತ್ತ ಪ್ರೇಕ್ಷಕರು ಚಾನೆಲ್ ಬದಲಿಸುವುದು ಖಚಿತ.
ಗಣರಾಜ್ಯೋತ್ಸವದ ಟ್ಯಾಬ್ಲೋ: ಶ್ರೇಷ್ಠತೆ ಸಾರುವ ಹೆಸರಿನಲ್ಲಿ ಥರ್ಮೋಕೋಲ್ ಜಾತ್ರೆ!
Previous Articleಭಾರತದಲ್ಲಿ ಚಿನ್ನದ ಬೆಲೆಯ ನಾಗಾಲೋಟಕ್ಕೆ ಬ್ರೇಕ್!
Next Article ಡಾಲಿ ಧನಂಜಯ್ ಮಟನ್ ತಿಂದ್ರೆ ತಪ್ಪಾ?

